‘ನನ್ನ ನಾಜೀಮ್ ಎಲ್ಲರಂತಲ್ಲ’ – ಯುವತಿ ಮುಸ್ಲಿಂ ಧರ್ಮಕ್ಕೆ ಮತಾಂತರ, ಭಜರಂಗದಳ ಆಕ್ರೋಶ

ಉತ್ತರ ಪ್ರದೇಶ: ಮೊರಾದಾಬಾದ್ನ ಥಾನಾ ದಿಲಾರಿ ಪ್ರದೇಶದಲ್ಲಿ 22 ವರ್ಷದ ಹಿಂದೂ ಯುವತಿಯೊಬ್ಬಳು ತನ್ನ ಸ್ವಂತ ಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಹೇಳಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ.
ಯುವತಿ, ನಾಜೀಮ್ ಎಂಬ ಯುವಕನೊಂದಿಗೆ ಪ್ರೀತಿಯಲ್ಲಿರುವುದಾಗಿ ಮತ್ತು ತನ್ನ ಕುಟುಂಬದ ಒತ್ತಡದಿಂದಾಗಿ ಅವನೊಂದಿಗೆ ತೆರಳಿರುವುದಾಗಿ ವಿಡಿಯೋದಲ್ಲಿ ತಿಳಿಸಿದ್ದಾಳೆ.

ಈ ಘಟನೆಯಿಂದ ಕೆರಳಿದ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ದಿಲಾರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ವಿಡಿಯೋದಲ್ಲಿ ಯುವತಿ ಹೇಳಿದ್ದೇನು?
ವೈರಲ್ ಆಗಿರುವ ವಿಡಿಯೋದಲ್ಲಿ, ಯುವತಿ ‘ನನ್ನ ಹೆತ್ತವರು ನನಗಿಂತ ಹಿರಿಯನೊಂದಿಗೆ ಮದುವೆ ಮಾಡಿಸಲು ಮುಂದಾಗಿದ್ದಾರೆ. ಅವನೊಂದಿಗೆ ಮದುವೆಯಾಗುವಂತೆ ಒತ್ತಾಯಿಸಿದ್ದರು ಎಂದು ಬೇಸರ ವ್ಯಕ್ತಪಡಿಸಿರುವ ಯುವತಿ ಮುಂದುವರಿದು, ‘ನಾನು ನಾಜೀಮ್ನನ್ನು ಪ್ರೀತಿಸುತ್ತೇನೆ ಮತ್ತು ನನ್ನ ಸ್ವಂತ ಇಚ್ಛೆಯಿಂದ ಅವನೊಂದಿಗೆ ಬಂದಿದ್ದೇನೆ. ನಾನು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದೇನೆ’ ಎಂದು ಯುವತಿ ಹೇಳಿದ್ದಾಳೆ. ನಾಜೀಮ್ ಮತ್ತು ಅವನ ಕುಟುಂಬದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಮನವಿ ಮಾಡಿದ್ದಾಳೆ.
ಯುವತಿ ಕುಟುಂಬಸ್ಥರಿಂದ ನಾಪತ್ತೆ ದೂರು:
ಯುವತಿಯ ಕುಟುಂಬವು ದಿಲಾರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದು, ಆಕೆಯ ವಯಸ್ಸು 22 ವರ್ಷ ಎಂದು ತಿಳಿಸಿದೆ. ಗ್ರಾಮೀಣ ಎಸ್ಪಿ ಕುನ್ವರ್ ಆಕಾಶ್ ಸಿಂಗ್ ಅವರು, ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿ, ಯುವತಿ ಮತ್ತು ನಾಜೀಮ್ನನ್ನು ಹುಡುಕಲು ಮೂರು ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ. ‘ತನಿಖೆ ಚುರುಕುಗೊಂಡಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ವಶಕ್ಕೆ ಪಡೆಯಲಾಗುವುದು’ಎಂದು ಎಸ್ಪಿ ತಿಳಿಸಿದ್ದಾರೆ.
ಲವ್ ಜಿಹಾದ್: ಹಿಂದೂ ಸಂಘಟನೆಗಳಿಂದ ಆಕ್ರೋಶ:
ವಿಡಿಯೋ ವೈರಲ್ ಆದ ಬಳಿಕ, ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ನ ಕಾರ್ಯಕರ್ತರು ದಿಲಾರಿ ಬ್ಲಾಕ್ ಅಧ್ಯಕ್ಷ ಕಮಲ್ ಸಿಂಗ್ ನೇತೃತ್ವದಲ್ಲಿ ಪೊಲೀಸ್ ಠಾಣೆಗೆ ಧಾವಿಸಿ, ಇದನ್ನು ‘ಲವ್ ಜಿಹಾದ್’ ಎಂದು ಕರೆದು ಕಠಿಣ ಕ್ರಮಕ್ಕೆ ಒತ್ತಾಯಿಸಿದರು. ಪೊಲೀಸ್ ಠಾಣೆಯಲ್ಲಿ ಘೇರಾವ್ ನಡೆದಿದ್ದು, ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ್ದಾರೆ. ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಮುಂದುವರಿದಿದೆ.
ಪ್ರಕರಣದ ಹಿನ್ನೆಲೆ:
ಮಾಹಿತಿಯ ಪ್ರಕಾರ, ಮುಸ್ತಾಪುರ್ ಬಡೇರಾ ಗ್ರಾಮದ ನಾಜೀಮ್ ಮತ್ತು ಯುವತಿ ಬಹಳ ಕಾಲದಿಂದ ಪ್ರೀತಿಯಲ್ಲಿದ್ದರು, ಇದು ಗ್ರಾಮ ಮತ್ತು ಕುಟುಂಬಕ್ಕೆ ತಿಳಿದಿತ್ತು. ಜುಲೈ 9 ರಂದು ನಾಜೀಮ್ ಯುವತಿಯೊಂದಿಗೆ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಯುವತಿ ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವ ಬಗ್ಗೆ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಉದ್ವಿಗ್ನಕ್ಕೆ ಕಾರಣವಾಗಿದೆ. ಪ್ರಕರಣ ಸೂಕ್ಷ್ಮವಾಗಿದ್ದು, ತನಿಖೆಯ ಮುಂದಿನ ಹಂತದ ಬಗ್ಗೆ ಎಲ್ಲರ ಗಮನ ನೆಟ್ಟಿದೆ.
