ಏರ್ ಇಂಡಿಯಾದ ಕೊನೆ ಕ್ಷಣದ ಸಂಭಾಷಣೆಯಲ್ಲಿ ಪತನದ ಕಾರಣ ಬಹಿರಂಗ

ನವದೆಹಲಿ : ಅಹಮದಾಬಾದ್‌ನಲ್ಲಿ 275 ಮಂದಿ ಸಾವಿಗೆ ಕಾರಣವಾದ ನಡೆದ ಏರ್ ಇಂಡಿಯಾ ವಿಮಾನ ದುರಂತಕ್ಕೆ ಕಾರಣದ ಬಗ್ಗೆ ಪ್ರಾಥಮಿಕ ತನಿಖಾ ವರದಿ ಸಲ್ಲಿಕೆಯಾಗಿದ್ದು, ಅದರಲ್ಲಿ ಹಲವು ಆಘಾತಕಾರಿ ಅಂಶಗಳು ಬಹಿರಂಗವಾಗಿದ್ದು, ವಿಮಾನ ಪತನಕ್ಕೂ ಮುನ್ನ ವಿಮಾನ ಎರಡೂ ಇಂಜಿನ್ ಗಳ ಇಂಧನ ಪೂರೈಕೆ ಸ್ಥಗಿತಗೊಳಿಸಲಾಗಿತ್ತು ಎಂಬ ಅಂಶ ತಿಳಿದು ಬಂದಿದೆ.

ಜೂನ್ 12 ರಂದು ಸಂಭವಿಸಿದ್ದ ಏರ್ ಇಂಡಿಯಾ ವಿಮಾನಅಪಘಾತದ ಪ್ರಾಥಮಿಕ ತನಿಖಾ ವರದಿ ಸಲ್ಲಿಕೆಯಾಗಿದ್ದು, ಅದರಲ್ಲಿರುವ ಮಾಹಿತಿ ಬಹಿರಂಗವಾಗಿದೆ. ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಸಲ್ಲಿಸಿರುವ 15 ಪುಟಗಳ ಪ್ರಾಥಮಿಕ ತನಿಖಾ ವರದಿಯಲ್ಲಿ ಹಲವು ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ವರದಿಯ ಪ್ರಕಾರ, ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ವಿಮಾನದ ಎರಡೂ ಎಂಜಿನ್‌ಗಳು ಸ್ಥಗಿತಗೊಂಡವು. ಆ ನಂತರ ವಿಮಾನ ಪತನವಾಗಿದೆ.
ಎಎಐಬಿ ಪ್ರಾಥಮಿಕ ವರದಿಯ ಪ್ರಕಾರ, ಟೇಕಾಫ್ ನಂತರ ಎಂಜಿನ್‌ಗಳ ಇಂಧನ ಸ್ವಿಚ್‌ಗಳು ಇದ್ದಕ್ಕಿದ್ದಂತೆ RUN ನಿಂದ CUTOFF ಗೆ ಬದಲಾದವು. ಈ ಘಟನೆ ಕೇವಲ 1 ಸೆಕೆಂಡ್ ಅಂತರದಲ್ಲಿ ಸಂಭವಿಸಿದೆ. ಈ ಸಮಯದಲ್ಲಿ, ಎಂಜಿನ್‌ಗಳಿಗೆ ಇಂಧನ ಬರುವುದನ್ನು ನಿಂತುಹೋಗಿದೆ.
ಕಾಕ್‌ಪಿಟ್‌ನಲ್ಲಿ ಪೈಲಟ್‌ಗಳ ನಡುವೆ ನಡೆದ ಸಂಭಾಷಣೆಯ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಪ್ರಕಾರ, ಒಬ್ಬ ಪೈಲಟ್ ಮತ್ತೊಬ್ಬ ಪೈಲಟ್ ಬಳಿ, ‘‘ನೀವು ಎಂಜಿನ್ ಅನ್ನು ಏಕೆ ಆಫ್ ಮಾಡಿದ್ದೀರಿ’’ ಎಂದು ಕೇಳಿದ್ದಾರೆ. ಆಗ ಮತ್ತೊಬ್ಬ ಪೈಟಲ್, ‘‘ನಾನು ಏನನ್ನೂ ಮಾಡಲಿಲ್ಲ’’ ಎಂದು ಹೇಳಿದ್ದಾರೆ. ಇಬ್ಬರು ಪೈಲಟ್‌ಗಳ ನಡುವಿನ ಈ ಸಂಭಾಷಣೆ ಗಮನಿಸಿದರೆ, ಯಾರೂ ಉದ್ದೇಶಪೂರ್ವಕವಾಗಿ ಇಂಧನ ಸ್ವಿಚ್ ಕಡಿತಗೊಳಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
