ಏರ್ ಇಂಡಿಯಾ ಬೋಯಿಂಗ್ ದುರಂತ-7 ವರ್ಷ ಹಿಂದೆಯೇ ಎಚ್ಚರಿಕೆ! ವಿಮಾನ ದುರಂತಕ್ಕೆ ನಿರ್ಲಕ್ಷ್ಯವೇ ಕಾರಣ

ನವದೆಹಲಿ: ಜೂನ್ 12 ಭಾರತದ ಪಾಲಿಗೆ ಕರಾಳ ದಿನಗಳಲ್ಲಿ ಒಂದು. ಆ ದಿನ ಗುಜರಾತ್ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ ಅಪಘಾತಕ್ಕೀಡಾಗಿ ವೈದ್ಯರ ಹಾಸ್ಟೆಲ್ಗೆ ಅಪ್ಪಳಿಸಿದ್ದರಿಂದ 241 ಪ್ರಯಾಣಿಕರು ಹಾಗೂ 30 ಜನರು ಹಾಸ್ಟೆಲ್ ಸಿಬ್ಬಂದಿ ದಾರುಣವಾಗಿ ಮೃತಪಟ್ಟಿದ್ದರು. ಈ ಅಪಘಾತ ನಡೆದು 1 ತಿಂಗಳಾದ ಬಳಿ ಇದೀಗ ವಿಮಾನ ಅಪಘಾತಕ್ಕೆ ಕಾರಣವೇನೆಂಬುದರ ವಾಸ್ತವಾಂಶ ಬೆಳಕಿಗೆ ಬಂದಿದೆ. ವಿಮಾನದ ಎಂಜಿನ್‌ಗೆ ಇಂಧನ ಪೂರೈಕೆ ಸ್ಥಗಿತಗೊಂಡಿರುವುದು ಸೇರಿದಂತೆ ಹಲವಾರು ಪ್ರಮುಖ ವಿಷಯಗಳನ್ನು ಪತ್ತೆಹಚ್ಚಲಾಗಿದೆ. ವಿಮಾನದ ಇಂಜಿನ್‌ಗಳಿಗೆ ಇಂಧನ ಪೂರೈಕೆಯ ಸ್ವಿಚ್‌ಗಳು ರನ್ನಿಂದ ಕಟ್ ಆಫ್ಗೆ ಬದಲಾಯಿತು. ಇದರಿಂದ ಕೇವಲ 1 ಸೆಕೆಂಡಿನಲ್ಲಿ ಎರಡೂ ಇಂಜಿನ್‌ಗೆ ಇಂಧನ ಪೂರೈಕೆ ಸ್ಥಗಿತವಾಯಿತು. ಇದರಿಂದಲೇ ವಿಮಾನ ಟೇಕ್ ಆಫ್ ಆಗಲು ಸಾಧ್ಯವಾಗದೆ ಎದುರಿದ್ದ ಕಟ್ಟಡದೊಳಗೆ ನುಗ್ಗಿತು ಎಂಬುದು ತನಿಖೆಯಲ್ಲಿ ಬಯಲಾಗಿದೆ. ಆದರೆ, ಈ ಬಗ್ಗೆ 7 ವರ್ಷಗಳ ಹಿಂದೆಯೇ ಅಮೆರಿಕದ ವಾಯುಯಾನ ನಿಯಂತ್ರಕ ಎಚ್ಚರಿಕೆ ನೀಡಿತ್ತು. ಆದರೆ, ಅದನ್ನು ನಿರ್ಲಕ್ಷ್ಯ ಮಾಡಲಾಗಿತ್ತು ಎಂಬುದು ಬೆಳಕಿಗೆ ಬಂದಿದೆ.

ಏರ್ ಇಂಡಿಯಾ ಬೋಯಿಂಗ್ ವಿಮಾನದಲ್ಲಿ ಇಂಧನ ನಿಯಂತ್ರಣ ಸ್ವಿಚ್ ಲಾಕಿಂಗ್ ವ್ಯವಸ್ಥೆಯಲ್ಲಿನ ದೋಷಕ್ಕೆ ಸಂಬಂಧಿಸಿದ ವಿಷಯವನ್ನು ಅಮೆರಿಕದ ವಾಯುಯಾನ ನಿಯಂತ್ರಕ ಅಧಿಕಾರಿಗಳು ಮೊದಲೇ ಗುರುತಿಸಿದ್ದರೂ ಸಹ ಅದರ ತಪಾಸಣೆಯನ್ನು ಕಡ್ಡಾಯವೆಂದು ಸೂಚಿಸಿಲ್ಲ ಎಂಬ ಕಾರಣಕ್ಕೆ ಏರ್ ಇಂಡಿಯಾ ಅದನ್ನು ನಿರ್ಲಕ್ಷ್ಯ ಮಾಡಿತ್ತು. ಸ್ವಿಚ್ ವಿಚಾರದಲ್ಲಿ ಏರ್ ಇಂಡಿಯಾ ಯಾವುದೇ ತಪಾಸಣೆ ಮಾಡಿಸಿರಲಿಲ್ಲ. ಇದೀಗ ಅದೇ ಏರ್ ಇಂಡಿಯಾ ದುರಂತಕ್ಕೆ ಕಾರಣವಾಗಿದೆ.
ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗುವ ಮೊದಲು ಪೈಲಟ್ಗಳಿಬ್ಬರ ಮಾತುಗಳನ್ನು ಕಾಕ್ಪಿಟ್ ವಾಯ್ಸ್ ರೆಕಾರ್ಡರ್ನಲ್ಲಿ ದಾಖಲಿಸಲಾಗಿದೆ. ಅವುಗಳನ್ನು ವಶಕ್ಕೆ ಪಡೆದಿರುವ ತನಿಖಾ ಸಂಸ್ಥೆಗೆ ಮಹತ್ವದ ಮಾಹಿತಿ ಸಿಕ್ಕಿದೆ. ಅದರಲ್ಲಿ ಓರ್ವ ಪೈಲಟ್ ನೀವೇಕೆ ಇಂಧನವನ್ನು ಕಟ್ ಆಫ್ ಮಾಡಿದ್ದೀರಿ? ಎಂದು ಕೇಳಿದ್ದಾರೆ. ಅದಕ್ಕೆ ಇನ್ನೊಬ್ಬರು ನಾನು ಅದನ್ನು ಮಾಡಿಲ್ಲ ಎನ್ನುತ್ತಾರೆ. ಅಷ್ಟರಲ್ಲಿ ವಿಮಾನ ಅಪಘಾತಕ್ಕೀಡಾಗಿದೆ. ಇಂಧನ ನಿಯಂತ್ರಣ ಸ್ವಿಚ್‌ಗಳು ತನ್ನಷ್ಟಕ್ಕೆ ತಾನೇ ಆಟೋಮ್ಯಾಟಿಕ್ ಆಗಿ ಕಟ್ ಆಫ್ ಆಗಿದ್ದರಿಂದ ವಿಮಾನದ ಇಂಜಿನ್‌ಗಳಿಗೆ ಇಂಧನದ ಪೂರೈಕೆ ಸ್ಥಗಿತವಾಗಿದೆ ಎಂಬುದು ತನಿಖೆ ವೇಳೆ ಬಯಲಾಗಿದೆ.
ಪತನವಾದ ಏರ್ ಇಂಡಿಯಾ ಬೋಯಿಂಗ್ ವಿಮಾನ 2 ಜಿಇ ಇಂಜಿನ್ಗಳನ್ನು ಹೊಂದಿತ್ತು. ವಿಮಾನದ ಇಂಜಿನ್ ಸ್ಟಾರ್ಟ್ ಮಾಡಲು ಮತ್ತು ಆಫ್ ಮಾಡಲು ಈ ಇಂಧನ ನಿಯಂತ್ರಣ ಸ್ವಿಚ್‌ಗಳು ಬಹಳ ಮುಖ್ಯ. ಆದರೆ, ಟೇಕ್ ಆಫ್ ಆಗುವಾಗಲೇ ಅದು ಆಫ್ ಆಗಿದ್ದರಿಂದ ವಿಮಾನ ಅಪಘಾತಕ್ಕೀಡಾಗಿದೆ. ಆ ಸ್ವಿಚ್ ಆನ್ ಮಾಡುವಷ್ಟು ಸಮಯವೂ ಪೈಲಟ್ಗಳಿಗೆ ಉಳಿದಿರಲಿಲ್ಲ. ಈ ರೀತಿ ತಾಂತ್ರಿಕ ದೋಷ ಉಂಟಾಗಿರುವುದು ಇದೇ ಮೊದಲು. ಹೀಗಾಗಿ, ಆಧುನಿಕ ಜೆಟ್ ಲೈನರ್ಗಳಲ್ಲಿ ಇಂಧನ ನಿಯಂತ್ರಣ ಸ್ವಿಚ್ಗಳ ಪ್ರಾಮುಖ್ಯತೆ ಎಷ್ಟಿದೆ ಎಂಬುದಕ್ಕೆ ಈ ಅಪಘಾತ ಉದಾಹರಣೆಯಾಗಿದೆ.
