ಮೊಬೈಲ್ ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪತ್ನಿಯ ಅಕ್ರಮ ಸಂಬಂಧ ಬಯಲು!

ನವದೆಹಲಿ: ದೆಹಲಿ ಪೊಲೀಸರು ಪತ್ತೆ ಮಾಡಿದ ಮೊಬೈಲ್ ಕಳ್ಳತನ ಪ್ರಕರಣವೊಂದು ಇದೀಗ ಭಾರಿ ಟ್ವಿಸ್ಟ್ ಪಡೆದಿದ್ದು, ಪತ್ನಿಯೋರ್ವಳ ಅಕ್ರಮ ಸಂಬಂಧವನ್ನು ಬಟಾಬಯಲು ಮಾಡಿದೆ.

ಹೌದು.. ದೆಹಲಿಯಲ್ಲಿ ನಡೆದ ಫೋನ್ ಕಳ್ಳತನ ಘಟನೆ ಆಘಾತಕಾರಿ ಸಂಗತಿಗಳನ್ನು ಹೊರಗೆಳೆದಿದ್ದು, ವಿವಾಹೇತರ ಸಂಬಂಧವೊಂದು ಬಯಲಾಗಿದೆ.
ಕಳ್ಳನಿಗೆ ಫೋನ್ ಕದಿಯುವಂತೆ ಸುಪಾರಿ ನೀಡಿದ್ದೇ ಹೆಂಡತಿ ಎಂಬ ವಿಚಾರ ಆಘಾತಕ್ಕೆ ಕಾರಣವಾಗಿದೆ. ಈ ಪ್ರಕರಣ ಬೇದಿಸಿದ ದೆಹಲಿ ಪೊಲೀಸರೇ ಆಘಾತಕ್ಕೊಳಗಾಗುವಂತೆ ಮಾಡಿದೆ.
ಇಷ್ಟಕ್ಕೂ ಆಗಿದ್ದೇನು?
ಕಳೆದ ಜೂನ್ 19 ರಂದು ದಕ್ಷಿಣ ದೆಹಲಿಯ ಓಲ್ಡ್ ಯುಕೆ ಪೇಂಟ್ ಫ್ಯಾಕ್ಟರಿ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಂದ ಸ್ಕೂಟಿಯಲ್ಲಿ ಬಂದ ಇಬ್ಬರು ಕಳ್ಳರು ಫೋನ್ ಕದ್ದು ಪರಾರಿಯಾಗಿದ್ದರು. ಬಳಿಕ ಫೋನ್ ಕಳೆದುಕೊಂಡ ವ್ಯಕ್ತಿ ಆರಂಭದಲ್ಲಿ ದಕ್ಷಿಣ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಅಲ್ಲಿಂದ ತೆರಳಿದ್ದ.
ಆದರೆ ನಂತರ, ಪೊಲೀಸರು ತನಿಖೆ ನಡೆಸಿ, ಆ ರಸ್ತೆಯಲ್ಲಿದ್ದ ಸುಮಾರು 70 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಸಂತ್ರಸ್ಥ ಅಂದರೆ ಫೋನ್ ಕಳೆದುಕೊಂಡ ವ್ಯಕ್ತಿಯ ಪತ್ನಿಯೇ ತನ್ನ ರಹಸ್ಯವನ್ನು ಮರೆಮಾಡಲು ಈ ಕಳ್ಳತನವನ್ನು ಸಂಘಟಿಸಿದ್ದಾರೆ ಎಂದು ಕಂಡುಬಂದಿದೆ.
