ಲಾರ್ಡ್ಸ್ನಲ್ಲಿ ಬುಮ್ರಾ ಐದು ವಿಕೆಟ್ ಸಾಧನೆ, ಪತ್ರಿಕಾಗೋಷ್ಠಿಯಲ್ಲಿ ನಗೆ ಚಟಾಕಿ!

ಪ್ರತಿಷ್ಠಿತ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ ಕಬಳಿಸುವ ಮೂಲಕ ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅದ್ಭುತ ಪ್ರದರ್ಶನ ನೀಡಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಹೆಸರನ್ನು ಮತ್ತಷ್ಟು ಅಚ್ಚು ಒತ್ತಿದ್ದಾರೆ.

ತಾಜಾ ಸಂಗತಿ ಏನೆಂದರೆ, ಪಂದ್ಯದ ಎರಡನೇ ದಿನದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಬುಮ್ರಾ ನಗೆ ಚಟಾಕಿ ಹಾರಿಸಿದರು. ಅಷ್ಟಕ್ಕೂ ಏನಾಯಿತು ಅಂದರೆ, ಬುಮ್ರಾ ಮಾತನಾಡುತ್ತಿರುವಾಗ, ಅಲ್ಲಿಯೇ ಟೇಬಲ್ ಮೇಲಿದ್ದ ವರದಿಗಾರರೊಬ್ಬರ ಫೋನ್ ರಿಂಗಾಯಿತು. ಈ ವೇಳೆ ತಕ್ಷಣ ಪ್ರತಿಕ್ರಿಯಿಸಿದ ಬುಮ್ರಾ, ಯಾರೋ ಒಬ್ಬರ ಹೆಂಡತಿ ಕರೆ ಮಾಡುತ್ತಿದ್ದಾರೆ. ಆದರೆ ನಾನು ಅದನ್ನು ಸ್ವೀಕರಿಸುವುದಿಲ್ಲ ಎನ್ನುವ ಮೂಲಕ ಹಾಸ್ಯ ಚಟಾಕಿ ಹಾರಿಸಿದರು. ಅದನ್ನು ಕೇಳಿ ಅಲ್ಲಿದ್ದವರೆಲ್ಲರೂ ನಕ್ಕರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಲಾರ್ಡ್ಸ್ ಗೌರವ ಮಂಡಳಿಯಲ್ಲಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದು ಜಸ್ಪ್ರೀತ್ ಬುಮ್ರಾ ಇದೇ ಸಂದರ್ಭದಲ್ಲಿ ಹೇಳಿದರು. ಅಲ್ಲದೆ, ನಾನು ಭಾರತ ಪರ ಆಡುವಾಗ, ನನ್ನಿಂದ ಸಾಧ್ಯವಾದಷ್ಟು ಕೊಡುಗೆ ನೀಡಲು ಬಯಸುತ್ತೇನೆ. ನಿಮ್ಮಿಂದ ಅದು ಸಾಧ್ಯವಾದಾಗ, ನೀವು ತಂಡವನ್ನು ಉತ್ತಮ ಸ್ಥಾನದಲ್ಲಿ ಇರಿಸಿದ್ದೀರಿ ಎಂದು ನಿಮಗೆ ಸಂತೋಷವಾಗುತ್ತದೆ. ಆದ್ದರಿಂದ ನನ್ನ ಆಲೋಚನೆ ಒಂದೇ ಆಗಿರುತ್ತದೆ. ನಾನು ಈ ಜೆರ್ಸಿಯನ್ನು ಧರಿಸುವವರೆಗೆ, ಟೀಕೆ-ಟಿಪ್ಪಣಿಗಳು ಇದ್ದೇ ಇರುತ್ತವೆ. ಏಕೆಂದರೆ ಪ್ರತಿಯೊಬ್ಬ ಕ್ರಿಕೆಟಿಗನು ಅದರ ಮೂಲಕ ಹಾದು ಹೋಗಲೇಬೇಕು. ಹೀಗಾಗಿ ಟೀಕೆಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು ಎಂದು ಬುಮ್ರಾ ಹೇಳಿದರು.
ಅಂದಹಾಗೆ, ಬುಮ್ರಾ ಲಾರ್ಡ್ಸ್ನಲ್ಲಿ ಐದು ವಿಕೆಟ್ಗಳನ್ನು (5/74) ಪಡೆದರು. ಅವರು ಹ್ಯಾರಿ ಬ್ರೂಕ್ (11), ಬೆನ್ ಸ್ಟೋಕ್ಸ್ (44), ಜೋ ರೂಟ್ (104), ಕ್ರಿಸ್ ವೋಕ್ಸ್ (0), ಮತ್ತು ಜೋಫ್ರಾ ಆರ್ಚರ್ (4) ಅವರನ್ನು ಪೆವಿಲಿಯನ್ಗೆ ಕಳುಹಿಸಿದರು.
ಇನ್ನು ಪಂದ್ಯದ ವಿಷಯಕ್ಕೆ ಬಂದರೆ, ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 387 ರನ್ ಗಳಿಸಿತು. ಆ ನಂತರ, ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಎರಡನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿದೆ. ಕೆಎಲ್ ರಾಹುಲ್ (53) ಮತ್ತು ರಿಷಭ್ ಪಂತ್ (19) ಕ್ರೀಸ್ನಲ್ಲಿದ್ದಾರೆ. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ಸ್ಕೋರ್ ಗಿಂತ ಭಾರತ ಇನ್ನೂ 242 ರನ್ ಹಿಂದಿದೆ.
