‘ಮಾದೇವ’ ಸಕ್ಸಸ್ ನಡುವೆ ನಿರ್ಮಾಪಕರ ನಡುವೆ ಭಾರಿ ಹಣಕಾಸು ಜಗಳ: ₹1.5 ಕೋಟಿ ವಂಚನೆ, ಪ್ರಾಣ ಬೆದರಿಕೆ ಆರೋಪ!

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಕೋಟಿ ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡ್ತಿರೋ ಸಕ್ಸಸ್‌ಫುಲ್ ಸಿನಿಮಾ ಮಾದೇವ. ಈ ಚಿತ್ರದ ಪ್ರೊಡ್ಯೂಸರ್‌ಗೆ ಅದೇ ಸಿನಿಮಾದ ಮತ್ತೊಬ್ಬ ಪ್ರೊಡ್ಯೂಸರ್ ಒಂದೂವರೆ ಕೋಟಿ ರೂಪಾಯಿ ದೋಖಾ ಮಾಡಿದ್ದಾರಂತೆ. ಅಷ್ಟೇ ಅಲ್ಲ, ಹಣ ಕೇಳಲು ಹೋದಾಗ ಪ್ರಾಣ ಬೆದರಿಕೆ ಕೂಡ ಹಾಕಿದ್ದಾರಂತೆ.

2025 ಅರ್ಧ ವರ್ಷವೇ ಕಳೆಯಿತು. ಇಲ್ಲಿಯವರೆಗೂ ಹೇಳಿಕೊಳ್ಳುವಂತಹ ಒಂದು ಸಿನಿಮಾ ಕೂಡ ಬಂದಿಲ್ಲ. ಆದ್ರೆ ಇತ್ತೀಚೆಗೆ ತೆರೆಕಂಡ ವಿನೋದ್ ಪ್ರಭಾಕರ್-ಸೋನಲ್ ನಟನೆಯ ಮಾದೇವ ಚಿತ್ರ ಪ್ರೇಕ್ಷಕರು ಹಾಗೂ ಚಿತ್ರಪ್ರೇಮಿಗಳಿಂದ ಉತ್ತಮ ಪ್ರಶಂಸೆ ಹಾಗೂ ಪ್ರತಿಕ್ರಿಯೆ ಪಡೆಯುತ್ತಿದೆ. ಯಶಸ್ವಿ 25 ದಿನ ಪೂರೈಸಿ 50ನೇ ದಿನದತ್ತ ಮುನ್ನುಗ್ಗುತ್ತಿದೆ. ರೀಸೆಂಟ್ ಆಗಿ ಚಿತ್ರತಂಡ ಸಕ್ಸಸ್ ಸಂಭ್ರಮ ಕೂಡ ಹಮ್ಮಿಕೊಂಡಿತ್ತು.
ಆದ್ರೀಗ ನಿರ್ಮಾಪಕ ನಡುವಿನ ಹಣಕಾಸಿನ ಜಗಳ ಬೀದಿಗೆ ಬಂದಿದೆ. ಮಾದೇವ ಸಿನಿಮಾನ ಶುರು ಮಾಡಿದ ನಿರ್ಮಾಪಕ ಸುಮಂತ್‌ಗೆ, ಸಿನಿಮಾನ ಕಂಪ್ಲೀಟ್ ಮಾಡಿ, ರಿಲೀಸ್ ಮಾಡಿರೋ ಮತ್ತೊಬ್ಬ ನಿರ್ಮಾಪಕ ಆರ್ ಕೇಶವ್ ದೇವಸಂದ್ರ ಒಂದೂವರೆ ಕೋಟಿ ಹಣ ಕೊಡದೆ ಸತಾಯಿಸುತ್ತಿದ್ದಾರಂತೆ. ಹಾಕಿದ ಒಂದೂವರೆ ಕೋಟಿ ಹಣದ ಜೊತೆ 25 ಪರ್ಸೆಂಟ್ ಶೇರ್ ಕೂಡ ಕೊಡೋದಾಗಿ ಹೇಳಿದ್ದ ನಿರ್ಮಾಪಕ ಕೇಶವ್ ಎರಡೂ ಕೊಡದೆ ಹೆದರಿಸುತ್ತಿದ್ದಾರಂತೆ. ಹಣ ಕೇಳಲು ಹೋದ ಸುಮಂತ್‌ಗೆ ಕೇಶವ್ ಪ್ರಾಣ ಬೆದರಿಕೆ ಕೂಡ ಹಾಕಿದ್ದಾರಂತೆ.
ನಿರ್ದೇಶಕ ನವೀನ್ ರೆಡ್ಡಿ, ಸಿನಿಮಾಟೋಗ್ರಾಫರ್ ಬಾಲಕೃಷ್ಣಗೂ ಕೊಡಬೇಕಾದ ಸಂಭಾವನೆ ಹಣ ನೀಡದೆ ಸತಾಯಿಸ್ತಿರೋ ಕೇಶವ್, ಮಾದೇವ ಬಾಕ್ಸ್ ಆಫೀಸ್ ಕಲೆಕ್ಷನ್‌ನಿಂದ ಬಂದ ಕೋಟಿ ಕೋಟಿ ಹಣವನ್ನು ಜೇಬಿಗೆ ಇಳಿಸುತ್ತಿದ್ದಾರೆ ಎನ್ನಲಾಗಿದೆ. ಇನ್ನು ಈ ವಿಷಯ ನಟ ವಿನೋದ್ ಪ್ರಭಾಕರ್, ಡೈರೆಕ್ಟರ್ ನವೀನ್ ರೆಡ್ಡಿ, ಕ್ಯಾಮೆರಾಮ್ಯಾನ್ ಬಾಲಕೃಷ್ಣ, ಚಿತ್ರದ ಮ್ಯಾನೇಜರ್, ಈ ಹಿಂದೆ ಒಂದು ಕೋಟಿ ಹಣ ಫೈನಾನ್ಸ್ ಮಾಡಿದ್ದ ನಟ ಮೈಕೋ ನಾಗರಾಜ್ ಕೂಡ ಮೋಸ ಹೋದ ನಿರ್ಮಾಪಕ ಸುಮಂತ್ ಪರ ನಿಂತಿದ್ದಾರೆ.
ಹಣ ನೀಡಿ ಸಿನಿಮಾ ಶುರು ಮಾಡಿದ್ದಲ್ಲದೆ, ಚಿತ್ರರಂಗಕ್ಕೆ ಕೇಶವ್ ಅವರನ್ನ ಪರಿಚಯಿಸಿದ್ದು ಕೂಡ ಇದೇ ನಿರ್ಮಾಪಕ ಸುಮಂತ್ ಅವರು. ಆದ್ರೀಗ ಹಣವೂ ಇಲ್ಲದೆ, ಶೇರ್ ಸಹ ಇಲ್ಲದೆ ನ್ಯಾಯಕ್ಕಾಗಿ ಹೋರಾಟ ನಡೆಸ್ತಿದ್ದಾರೆ ಸುಮಂತ್. ಕೋರ್ಟ್, ಫಿಲ್ಮ್ ಚೇಂಬರ್ ಸೇರಿದಂತೆ ವಾಹಿನಿಗಳ ಬಳಿ ಅಳಲು ತೋಡಿಕೊಂಡ್ರೂ ನ್ಯಾಯ ಸಿಗದಂತಾಗಿದೆ. ಮಾದೇವ ಹಿಂದಿ ಡಬ್ಬಿಂಗ್ ರೈಟ್ಸ್‌ನಿಂದ ಬಂದ ಹಣವನ್ನು ನೀಡೋದಾಗಿ ಬಾಯಿ ಮಾತಲ್ಲಿ ಹೇಳಿದ್ದ ನಿರ್ಮಾಪಕ ಕೇಶವ್, ಅದನ್ನೂ ಸಹ ಕೊಡಲ್ಲ ಅಂತ ಧಮ್ಕಿ ಹಾಕ್ತಿದ್ದಾರಂತೆ.
ಹಣ ಕೇಳಲು ಹೋದ ಸುಮಂತ್‌ಗೆ ಅ.., ಅ.. ಅಂತ ಅವಾಚ್ಯ ಪದಗಳಿಂದ ನಿಂದಿಸ್ತಿದ್ದಾರಂತೆ. ಕೊಟ್ಟವ್ನು ಕೋಡಂಗಿ, ಈಸ್ಕೊಂಡವ್ನು ಈರಭದ್ರ ಅನ್ನೋ ಹಾಗೆ ಕೇಶವ್ ಮಾತ್ರ ಸಿನಿಮಾದಿಂದ ನೇಮು, ಫೇಮು ಜೊತೆ ಜೇಬು ತುಂಬಿಸಿಕೊಂಡು ಭದ್ರಗೊಂಡಿದ್ದಾರೆ. ಆದ್ರೆ ಸೈಟ್ ಮಾರಿ, ಅವರಿವರ ಬಳಿ ಸಾಲ ಸೋಲ ಮಾಡಿ ಹಣ ಹೂಡಿಕೆ ಮಾಡಿದ ಸುಮಂತ್ ಮಾತ್ರ ಕಣ್ಣೀರು ಇಡುವಂತಾಗಿದೆ. ಸಿನಿಮಾ ಗೆದ್ರೂ, ನಿರ್ಮಾಪಕ ಕಣ್ಣೀರು ಇಡ್ತಿರೋದು ನಿಜಕ್ಕೂ ಚಿತ್ರರಂಗಕ್ಕೆ ದೊಡ್ಡ ಕಳಂಕ. ಇದನ್ನ ಫಿಲ್ಮ್ ಚೇಂಬರ್ ಅಥ್ವಾ ನಿರ್ಮಾಪಕರ ಸಂಘ ಹೇಗೆ ಸರಿಪಡಿಸುತ್ತೆ ಅನ್ನೋದನ್ನ ನಿರೀಕ್ಷಿಸಬೇಕಿದೆ.
