ಶಿವಸೇನಾ ಸಚಿವನ ಕೊಠಡಿಯಲ್ಲಿ ನೋಟುಗಳ ಬಂಡಲ್ ಪತ್ತೆ-ಭ್ರಷ್ಟಾಚಾರ ಆರೋಪ

ಮುಂಬೈ:ಮಹಾರಾಷ್ಟ್ರ ಸರ್ಕಾರದ ಸಚಿವ ಸಂಜಯ್ ಶಿರ್ಸಾತ್ ಕೊಠಡಿಯಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಅವರು ಬನಿಯನ್ ಮತ್ತು ಶಾರ್ಟ್ಸ್ ಧರಿಸಿ ಹಾಸಿಗೆಯ ಮೇಲೆ ಕುಳಿತು ಸಿಗರೇಟ್ ಸೇದುತ್ತಿದ್ದರೆ, ಪಕ್ಕದಲ್ಲಿ ಸಾಕು ನಾಯಿ ಇದೆ.
ಕೊಠಡಿಯಲ್ಲಿ ಇರಿಸಲಾಗಿರುವ ಕ್ಯಾಸ್ ಬ್ಯಾಗ್ ನಲ್ಲಿ ನೋಟುಗಳ ಬಂಡಲ್ ಪತ್ತೆಯಾಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸಂಜಯ್ ಶಿರ್ಸಾತ್ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವುದು ಇದು ಮೊದಲೇನಲ್ಲಾ ಎಂದು ಹೇಳಿರುವ ಪ್ರತಿಪಕ್ಷಗಳು ಸಚಿವರ ರಾಜೀನಾಮೆಗೆ ಆಗ್ರಹಿಸಿವೆ.
ಕಿಕ್ ಬ್ಯಾಕ್ ಪಡೆದಿರುವ ಭ್ರಷ್ಟ ಸಚಿವನ ವಿರುದ್ಧ ಕ್ರಮಕ್ಕೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಧೈರ್ಯ ತೋರಬೇಕು ಎಂದು ಎನ್ ಸಿಪಿ ಎಸ್ ಪಿ ವಕ್ತಾರ ಕ್ಲೈಡ್ ಕ್ರಾಸ್ಟೊ ಒತ್ತಾಯಿಸಿದ್ದಾರೆ. ಶಿಂಧೆ ಶಿವಸೇನೆ ನಾಯಕನ ಈ ವಿಡಿಯೋವನ್ನು ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಶಿವಸೇನಾ (ಯುಬಿಟಿ) ರಾಜ್ಯಸಭಾ ಸದಸ್ಯ ಸಂಜಯ್ ರಾವತ್, ಈ ಥ್ರಿಲ್ಲಿಂಗ್ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಸಿಎಂ ದೇವೇಂದ್ರ ಫಡ್ನವೀಸ್ ವೀಕ್ಷಿಸಬೇಕು ಎಂದಿದ್ದಾರೆ.
ಆದರೆ, ತನ್ನನ್ನು ಸಿಲುಕಿಸಲು ಮಾಡಿರುವ ಪೂರ್ವ ನಿಯೋಜಿತ ಪಿತೂರಿ ಎಂದು ಸಂಜಯ್ ಶಿರ್ಸಾತ್ ಸಮರ್ಥಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಸುತ್ತಾಡಿ ಬಂದಾಗ ಸುಸ್ತಾಗಿತ್ತು. ಹೀಗಾಗಿ ನೀರಾಳವಾಗಿ ಇರಲು ಬನಿಯನ್ ಹಾಗೂ ಶಾರ್ಟ್ಸ್ ಧರಿಸಿದ್ದೆ. ಯಾರೋ ಹಣದ ಬ್ಯಾಗ್ ಇಟ್ಟು ವಿಡಿಯೋ ಮಾಡಿದ್ದಾರೆ. ನನ್ನ ಬ್ಯಾಗ್ ನಲ್ಲಿ ಎರಡು ಬಟ್ಟೆಗಳು ಮಾತ್ರ ಇತ್ತು. ಹಣ ಇರಲಿಲ್ಲ. ನನಗೆ ಮತ್ತು ಪಕ್ಷ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಈ ರೀತಿಯ ಸಂಚು ಮಾಡಲಾಗಿದೆ ಎಂದು ಶಿರ್ಸಾತ್ ಹೇಳಿದ್ದಾರೆ.
ಸಾಂಬಾಜಿ ನಗರದಲ್ಲಿ ರೂ. 120 ಕೋಟಿ ಮಾರುಕಟ್ಟೆ ದರಕ್ಕೆ ಬದಲಾಗಿ ರೂ. 65 ಕೋಟಿಗೆ ಲಕ್ಸುರಿ ಹೋಟೆಲ್ ಖರೀದಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಯನ್ನು ಸಂಜಯ್ ಶಿರ್ಸಾತ್ ಎದುರಿಸುತ್ತಿದ್ದಾರೆ. ಅಲ್ಲದೇ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಕೂಡಾ ಬಂದಿದ್ದಾರೆ.
