ಭಾರತದಲ್ಲಿ ತೆರೆಯಲಿದೆ ಟೆಸ್ಲಾ ಮೊದಲ ಶೋರೂಂ

ನವದೆಹಲಿ:ಎಲಾನ್ ಮಸ್ಕ್ ನೇತೃತ್ವದ ಎಲೆಕ್ಟ್ರಿಕ್ ಕಾರು ಕಂಪನಿ ಟೆಸ್ಲಾ ಮುಂದಿನ ವಾರ ಭಾರತದಲ್ಲಿ ತನ್ನ ಮೊದಲ ಶೋರೂಂ ತೆರೆಯಲಿದೆ.

ಬಹಳ ವರ್ಷಗಳ ನಿರೀಕ್ಷೆಯ ನಂತರ ಟೆಸ್ಲಾ, ದೇಶದಲ್ಲಿ ತನ್ನ ಮೊದಲ ಶೋರೂಂ ಮೂಲಕ ಭಾರತದ ಆಟೋಮೋಟಿವ್ ಮಾರುಕಟ್ಟೆಗೆ ಪ್ರವೇಶ ಮಾಡಲಿದೆ.
ಟೆಸ್ಲಾ ಇದೇ ಜುಲೈ 15 ರಂದು ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಲ್ಲಿ ಶೋ ರೂಂ ತೆರೆಯಲಿದೆ.
ಮಾರ್ಚ್ ಆರಂಭದಲ್ಲಿ, ಭಾರತದಲ್ಲಿ ತನ್ನ ಮಾರಾಟವನ್ನು ಪ್ರಾರಂಭಿಸಲು ಟೆಸ್ಲಾ ಮುಂಬೈನಲ್ಲಿ ತನ್ನ ಮೊದಲ ಶೋ ರೂಂ ತೆರೆಯಲು ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಇವಿ ತಯಾರಕರು ಮುಂಬೈ ಮತ್ತು ನವದೆಹಲಿಯಲ್ಲಿ ಶೋ ರೂಂ ಸೈಟ್‌ಗಳಿಗಾಗಿ ನೇಮಕಾತಿ ಮತ್ತು ಸ್ಕೌಟಿಂಗ್ ಅನ್ನು ಹೆಚ್ಚಿಸಿದ್ದರು. ಚೀನಾದಲ್ಲಿ ತಯಾರಾದ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡಲು ಟೆಸ್ಲಾ ಮುಂದಾಗಿದೆ. ಪ್ರಸ್ತುತ ವಿಶ್ವದ ಅತ್ಯಂತ ಜನಪ್ರಿಯ ಎಲೆಕ್ಟ್ರಿಕ್ ಕ್ರಾಸ್‌ಓವರ್ ಎಸ್‌ಯುವಿ ಮಾಡೆಲ್ ವೈ ಕಾರುಗಳನ್ನು ಆರಂಭದಲ್ಲಿ ಭಾರತದಲ್ಲಿ ಮಾರಾಟ ಮಾಡಲು ಟೆಸ್ಲಾ ಸಿದ್ಧತೆ ನಡೆಸಿದೆ. ಮಾಡೆಲ್ ವೈ ಕಾರು ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರು ಇದಾಗಿದೆ. ಈ ವಾಹನವನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ.
ಈಗಾಗಲೇ ಟೆಸ್ಲಾ ತನ್ನ ಶಾಂಘೈ ಸ್ಥಾವರದಿಂದ ಐದು ಮಾಡೆಲ್ ವೈ ವಾಹನಗಳನ್ನು ಮುಂಬೈಗೆ ತಂದಿದೆ. ಈ ವಾಹನದ ಮೂಲ ಬೆಲೆ 27.70 ಲಕ್ಷ ರೂ. ಇದೆ. ಚೀನಾದಿಂದ ಭಾರತಕ್ಕೆ ಬಂದ ವೆಚ್ಚ, ಆಮದು ಸುಂಕ ವಿಧಿಸಿದ ಬಳಿಕ ಈ ಕಾರಿನ ದರ ಎಷ್ಟಿರಬಹುದು ಎನ್ನುವುದು ಅಧಿಕೃತವಾಗಿ ಮುಂದಿನ ದಿನಗಳಲ್ಲಿ ತಿಳಿಯಲಿದೆ. ಟೆಸ್ಲಾ ಕಾರಿನ ಬೆಲೆ 40 ಲಕ್ಷ ರೂ.ಗಿಂತ ಕಡಿಮೆ ಇರಬಹುದು ಎನ್ನಲಾಗಿದೆ.
ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಪ್ರವೇಶ ಪಡೆದ ಟೆಸ್ಲಾ, ತನ್ನ ಮುಂದಿನ ಮಳಿಗೆಯನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆರಂಭಿಸುವ ಯೋಜನೆ ಹೊಂದಿದೆ ಎನ್ನಲಾಗಿದೆ. ಮಳಿಗೆಗಾಗಿ ಹುಡುಕಾಟ, ನೇಮಕಾತಿಯನ್ನು ಕಂಪನಿ ಆರಂಭಿಸಿದೆ ಎಂದು ವರದಿಯಾಗಿದೆ.
