ಲೂಸ್ ಫಾಸ್ಟಾಗ್ ಬಳಕೆ ತಕ್ಷಣ ನಿಲ್ಲಿಸಿ: ಬ್ಲಾಕ್‌ಲಿಸ್ಟ್ ಸಾಧ್ಯತೆ

ನವದೆಹಲಿ:ಕಾರು, ಜೀಪು, ಲಾರಿ ಸೇರಿದತೆ ವಾಹನಗಳಿಗೆ ಫಾಸ್ಟಾಗ್ ಕಡ್ಡಾಯವಾಗಿದೆ. ಹೆದ್ದಾರಿ ಸೇರಿದಂತೆ ಯಾವುದೇ ಟೋಲ್ ರಸ್ತೆಯಲ್ಲಿ ಸಾಗಬೇಕಾದರೆ ಟೋಲ್ ಪಾವತಿಸಬೇಕು. ಈ ಪಾವತಿಯನ್ನು ಭಾರತದಲ್ಲಿ ಫಾಸ್ಟಾಗ್ ಮೂಲಕ ಮಾಡಲಾಗುತ್ತಿದೆ. ವಾಹನಗಳಿಗೆ ಫಾಸ್ಟಾಗ್ ಜೊತೆಗೆ ಕೆವೈಸಿ ಕೂಡ ಮಾಡಿಸಿರಬೇಕು.
ವಾಹನದ ಮ್ಯಾಪಿಂಗ್, ಫೋಟೋ ಸೇರಿದಂತೆ ಎಲ್ಲಾ ದಾಖಲೆ ಲಗತ್ತಿಸಿ ಫಾಸ್ಟಾಗ್ ಸಕ್ರಿಯಗೊಳಿಸಬೇಕು. ಇದೀಗ ಬಹುತೇಕರು ಫಾಸ್ಟಾಗ್ ಬಳಸುತ್ತಿದ್ದಾರೆ. ಆದರೆ ಇನ್ನು ಮುಂದೆ ನೀವು ಲೂಸ್ ಫಾಸ್ಟಾಗ್ ಬಳಸಿದರೆ ನಿಮ್ಮ ಫಾಸ್ಟಾಗ್ ಹಾಗೂ ವಾಹನ ಬ್ಲಾಕ್‌ಲಿಸ್ಟ್‌ಗೆ ಸೇರಿಕೊಳ್ಳಲಿದೆ.

ಏನಿದು ಲೂಸ್ ಫಾಸ್ಟಾಗ್?
ಫಾಸ್ಟಾಗ್ ಅನ್ನು ಕಾರಿನ ಮುಂಭಾಗದ ವಿಂಡ್‌ಶೀಲ್ಡ್‌ಗೆ ಅಂಟಿಸಬೇಕು. ಆದರೆ ಕೆಲವರು ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿದರೂ ಫಾಸ್ಟಾಗ್ ವಿಂಡ್‌ಶೀಲ್ಡ್‌ನಲ್ಲಿ ಅಂಟಿಸುವುದಿಲ್ಲ. ಟೋಲ್ ಹತ್ತಿರಬಂದಾಗ ವಿಂಡ್‌ಶೀಲ್ಡ್‌ಗೆ ಹಿಡಿಯುತ್ತಾರೆ. ಕೈಗಳಿಂದಲೇ ಕಾರಿನ ವಿಂಡ್‌ಶೀಲ್ಡ್ ಬಳಿ ಪಾಸ್ಟಾಗ್ ಅಂಟಿಸಿದಂತೆ ಹಿಡಿಯುತ್ತಾರೆ. ಹೀಗೆ ಕೈಯಲ್ಲಿ ಹಿಡಿಯುವ ಅಥವಾ ವಿಂಡ್‌ಶೀಲ್ಡ್ ಮೇಲೆ ಅಂಟಿಸದೇ ಇರುವ ಫಾಸ್ಟಾಗ್‌ಗಳನ್ನು ಲೂಸ್ ಫಾಸ್ಟಾಗ್ ಎಂದು ಕರೆಯಲಾಗುತ್ತದೆ. ಇಂತಹ ಫಾಸ್ಟಾಗ್ ಇದೀಗ ಬ್ಲಾಕ್‌ಲಿಸ್ಟ್ ಸೇರಿಕೊಳ್ಳಲಿದೆ.
ಲೂಸ್ ಫಾಸ್ಟಾಗ್‌ನಿಂದ ಟೋಲ್ ಗೇಟ್ ಬಳಿ ಸಮಸ್ಯೆ ಹೆಚ್ಚಾಗಲಿದೆ. ಸಮಯವೂ ವ್ಯರ್ಥವಾಗಲಿದೆ. ಕೈಯಲ್ಲಿ ಹಿಡಿಯುವ ಲೂಸ್ ಫಾಸ್ಟಾಗ್‌ನಿಂದ ಬಾರ್‌ಕೋಡ್ ರೀಡಿಂಗ್ ಸಮಯ ಹೆಚ್ಚು ತೆಗೆದುಕೊಳ್ಳಲಿದೆ.ಇದರಿಂದ ಒಂದು ವಾಹನ ಟೋಲ್ ಗೇಟ್ ದಾಟಲು ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ. ಈ ಸಮಸ್ಯೆಯಿಂದ ಇತರ ವಾಹನಗಳಿಗೆ ಸಮಸ್ಯೆಯಾಗಲಿದೆ. ಟೋಲ್ ಗೇಟ್ ಬಳಿ ವಾಹನಗಳ ಸರದಿ ಸಾಲು ಹೆಚ್ಚಾಗಲಿದೆ. ಒಂದು ಲೂಸ್ ಫಾಸ್ಟಾಗ್‌ನಿಂದ ಹಲವರ ಸಮಯ ವ್ಯರ್ಥವಾಗಲಿದೆ. ಇಷ್ಟೇ ಅಲ್ಲ ಲೂಸ್ ಫಾಸ್ಟಾಗ್ ಮೂಲಕ ಹಲವರು ಒಂದು ಫಾಸ್ಟಾಗ್‌ನ್ನು ಬೇರೆ ವಾಹನಕ್ಕೂ ಬಳಸುವ ಸಾಧ್ಯತೆ ಇದೆ. ಫಾಸ್ಟಾಗ್ ದುರ್ಬಳಕೆ ಮಾಡಿಕೊಳ್ಳವು ಸಾಧ್ಯತೆ ಹೆಚ್ಚಾಗಿದೆ.
ಟೋಲ್ ಸಂಗ್ರಹ ಎಜೆನ್ಸಿಗಳಿಂದ ರಿಪೋರ್ಟ್
ಟೋಲ್ ಸಂಗ್ರಹ ಎಜೆನ್ಸಿಗಳು ಲೂಸ್ ಫಾಸ್ಟಾಗ್ ಕುರಿತು ನಿಗಾವಹಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಖಡಕ್ ಸೂಚನೆ ನೀಡಿದೆ. ಯಾವ ವಾಹನ ಲೂಸ್ ಫಾಸ್ಟಾಗ್ ಬಳಸುತ್ತಿದೆ ಅನ್ನೋದನ್ನು ಪತ್ತೆ ಹಚ್ಚಲು ಸೂಚಿಸಿದೆ. ಬಳಿಕ ಈ ವರದಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಲು ಸೂಚಿಸಿದೆ. ಈ ವರದಿ ಆಧರಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫಾಸ್ಟಾಗ್ ಹಾಗೂ ವಾಹನವನ್ನು ಬ್ಲಾಕ್‌ಲಿಸ್ಟ್‌ಗೆ ಸೇರಿಸಲಿದೆ.
ಬ್ಲಾಕ್‌ಲಿಸ್ಟ್ ಸೇರಿದರೆ ಸಂಚಾರ ಸಾಧ್ಯವಿಲ್ಲ
ದೇಶದಲ್ಲಿ ಇದೀಗ ಬಹುತೇಕ ರಸ್ತೆಗಳಲ್ಲಿ ಟೋಲ್ ನೀಡಬೇಕು. ಈ ಬೈಕಿ ಕೆಲವೇ ಕೆಲವು ರಸ್ತೆಗಳಲ್ಲಿ ಮಾತ್ರ ಸರ್ವೀಸ್ ರಸ್ತೆಗಳು ಲಭ್ಯವಿದೆ. ಹೀಗಾಗಿ ಫಾಸ್ಟಾಗ್ ಇಲ್ಲದೆ ಸಾಗುವುದು ಸುಲಭದ ಮಾತಲ್ಲ. ಲೂಸ್ ಫಾಸ್ಟಾಗ್‌ನಿಂದ ವಾಹನ ಅಥವಾ ಫಾಸ್ಟಾಗ್‌ನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಿದರೆ ಸಂಚಾರ ಸುಲಭವಲ್ಲ. ಟೋಲ್ ಬಳಿ ಬ್ಲಾಕ್ ಲಿಸ್ಟ್‌ಗೆ ಸೇರಿಸಿದ ಫಾಸ್ಟಾಗ್ ಕಾರ್ಯನಿರ್ವಹಿಸುವುದಿಲ್ಲ. ಸಾಕಷ್ಟು ಬ್ಯಾಲೆನ್ಸ್ ಇದ್ದರೂ ಕಾರ್ಯನಿರ್ವಹಿಸುದಿಲ್ಲ. ಈ ವೇಳೆ ನಗದು ಪಾವತಿ ಮಾಡಬೇಕು. ಫಾಸ್ಟಾಗ್ ಇಲ್ಲದಿದ್ದರೆ ದಂಡದ ರೂಪದಲ್ಲಿ ದುಪ್ಪಟ್ಟು ಟೋಲ್ ಪಾವತಿ ಮಾಡಬೇಕು . ಉದಾಹರಣೆಗೆ ಟೋಲ್ ಬೆಲೆ 50 ರೂಪಾಯಿ ಆಗಿದ್ದರೆ, ಫಾಸ್ಟಾಗ್ ಇಲ್ಲದಿದ್ದರೆ ಅಥವಾ ಇರುವ ಫಾಸ್ಟಾಗ್ ಬ್ಲಾಕ್‌ಲಿಸ್ಟ್‌ನಲ್ಲಿ ಸೇರ್ಪಡೆಗೊಂಡು ಕಾರ್ಯನಿರ್ವಹಿಸದಿದ್ದರೆ 50 ರೂಪಾಯಿ ಟೋಲ್, 50 ರೂಪಾಯಿ ದಂಡ ಸೇರಿ ಒಟ್ಟು 100 ರೂಪಾಯಿ ನೀಡಬೇಕು.ಬ್ಲಾಕ್‌ಲಿಸ್ಟ್ ತೆರವು ಗೊಳಿಸಲು ಹರಸಾಹಸ ಪಡಬೇಕು, ಮತ್ತೆ ಎಲ್ಲಾ ದಾಖಲೆ ನೀಡಿ ಮ್ಯಾಪಿಂಗ್ ಮಾಡಿಸಬೇಕು. ದಂಡ ಕಟ್ಟಬೇಕು
