‘ಉದಯಪುರ್ ಫೈಲ್ಸ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ತಡೆ, ದೆಹಲಿ ಹೈಕೋರ್ಟ್ ಮೊರೆಹೋದ ಚಿತ್ರತಂಡಕ್ಕೆ ಹಿನ್ನಡೆ!

ನೈಜ ಘಟನೆಯನ್ನು ಆಧರಿತ ‘ಉದಯಪುರ್ ಫೈಲ್ಸ್’ ಚಿತ್ರ ಸದ್ಯ ಭಾರೀ ವಿವಾದದಲ್ಲಿ ಸಿಲುಕಿಕೊಂಡಿದೆ. ಹೈಕೋರ್ಟ್ ಮೆಟ್ಟಿಲೇರಿದ್ದ ಸಿನಿಮಾ ನಿರ್ಮಾಪಕರಿಗೆ ಇದೀಗ ಹಿನ್ನಡೆಯಾಗಿದೆ. ಕಳೆದ ಹಲವು ದಿನಗಳಿಂದ ಕೋರ್ಟ್ನಲ್ಲಿ ತಮ್ಮ ಚಿತ್ರದ ಬಿಡುಗಡೆಗಾಗಿ ತೀವ್ರ ಕಾನೂನು ಹೋರಾಟ ನಡೆಸುತ್ತಿದ್ದ ಚಿತ್ರತಂಡಕ್ಕೆ ನ್ಯಾಯಾಲಯ ಅನುಮತಿ ತಡೆಹಿಡಿದಿದೆ.

ಈ ಹಿಂದೆಯೇ ನಿಗದಿಪಡಿಸಿದಂತೆ ಜುಲೈ 11ರಂದು ತೆರೆಗೆ ಅಪ್ಪಳಿಸಬೇಕಿದ್ದ ಬಹುನಿರೀಕ್ಷಿತ ಉದಯಪುರ್ ಫೈಲ್ಸ್ ಚಿತ್ರದ ಬಿಡುಗಡೆಯನ್ನು ಸದ್ಯ ದೆಹಲಿ ನ್ಯಾಯಾಲಯ ತೆಡೆ ಹಿಡಿದಿದೆ. ರಾಜಸ್ಥಾನದ ಉದಯಪುರದಲ್ಲಿ ನಡೆದ ‘ಟೈಲರ್ ಕನ್ಹಯ್ಯಾ ಲಾಲ್’ ಹತ್ಯೆಯನ್ನೇ ಆಧರಿಸಿ, ಚಿತ್ರೀಕರಣವನ್ನೂ ಮುಗಿಸಿರುವ ‘ಉದಯಪುರ ಫೈಲ್ಸ್’ ಚಿತ್ರವು ಸದ್ಯ ಹಲವಾರು ಆಕ್ಷೇಪಣೆಗಳನ್ನು ಎದುರಿಸಿದೆ. ಇದರೊಟ್ಟಿಗೆ ಟೀಕೆ ಮತ್ತು ರಿಲೀಸ್ ಆಗಬಾರದು ಎಂಬ ಆಗ್ರಹಗಳಿಂದಲೇ ಕೂಡಿದೆ.
ಈಗಾಗಲೇ ಟ್ರೇಲರ್ ಮೂಲಕವೇ ಭಾರೀ ಸದ್ದು ಹಾಗೂ ಸುದ್ದಿ ಮಾಡಿರುವ ಚಿತ್ರವು, ವಿವಾದಗಳಿಂದಲೇ ರಿಲೀಸ್ ನೋಡಲು ಹೆಣಗಾಡುತ್ತಿದೆ. ಈ ವಿಚಾರ ಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೇ ಸೆನ್ಸಾರ್ ಮಂಡಳಿಯೂ ಚಿತ್ರತಂಡಕ್ಕೆ 150 ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿರುವುದು ತಿಳಿದುಬಂದಿದೆ. ಆದರೆ, ಇದ್ಯಾವುದಕ್ಕೂ ಚಿತ್ರದ ನಿರ್ಮಾಪಕರು ಸುತಾರಾಮ್ ಒಪ್ಪಿಲ್ಲ. ಅರ್ಜಿದಾರರಾದ ಜಮಿಯತ್ ಉಲಮಾ-ಇ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಮತ್ತು ಪತ್ರಕರ್ತ ಪ್ರಶಾಂತ್ ಟಂಡನ್, ಚಿತ್ರದ ಬಿಡುಗಡೆಯ ಮೇಲೆ ಸಂಪೂರ್ಣ ನಿಷೇಧ ಹೇರಬೇಕೆಂದು ಅರ್ಜಿ ಸಲ್ಲಿಸಿದ್ದಾರೆ.
ಈ ಸಿನಿಮಾ ತೆರೆಕಂಡರೆ ಅದು ದ್ವೇಷದ ಕಿಚ್ಚನ್ನು ಉತ್ತೇಜಿಸುತ್ತದೆ. ಒಂದು ಸಮುದಾಯವನ್ನು ಗುರಿಯಾಗಿಸುತ್ತದೆ ಮತ್ತು ಧಾರ್ಮಿಕ ಉದ್ವಿಗ್ನತೆಯನ್ನು ಪ್ರಚೋದಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ವಾದ-ಪ್ರತಿವಾದಗಳನ್ನು ಆಲಿಸಿದ ದೆಹಲಿ ನ್ಯಾಯಾಲಯ, ಪ್ರಸ್ತುತ ಚಿತ್ರದ ಬಿಡುಗಡೆಯನ್ನು ತಡೆಹಿಡಿದಿದೆ. ಈ ಸಿನಿಮಾವನ್ನು ಬಿಡುಗಡೆ ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ನ್ಯಾಯಾಲಯವು ಕೇಂದ್ರಕ್ಕೆ ಒಂದು ವಾರದ ಕಾಲಾವಕಾಶ ನೀಡಿದೆ. ಅಂತಿಮವಾಗಿ ಚಿತ್ರದ ರಿಲೀಸ್ ನಿರ್ಧಾರ ಈಗ ಕೇಂದ್ರದ ಅಂಗಳದಲ್ಲಿದೆ.
ಟೈಲರ್ ಕನ್ಹಯ್ಯಾ ಲಾಲ್ ಹತ್ಯೆಯ ಕಥೆಯೇನು? ಎಂದು ನೋಡುವುದಾದರೆ, 2022ರಲ್ಲಿ ಉದಯಪುರದಲ್ಲಿ ನಡೆದ ಕನ್ಹಯ್ಯಾ ಕೊಲೆ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಕನ್ಹಯ್ಯಾ ಅವರು ಪ್ರವಾದಿ ಮುಹಮ್ಮದ್ ಬಗ್ಗೆ ಬಿಜೆಪಿ ನಾಯಕಿ ನೂಪುರ್ ಶರ್ಮಾ ನೀಡಿದ್ದ ಹೇಳಿಕೆಗಳನ್ನು ಬೆಂಬಲಿಸಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದರಿಂದ ಕುಪಿತಗೊಂಡಿದ್ದ ಇಬ್ಬರು ವ್ಯಕ್ತಿಗಳು ಹಾಡಹಗಲೇ ಲಾಲ್ರ ಅಂಗಡಿಗೆ ನುಗ್ಗಿ ಭೀಕರವಾಗಿ ಕೊಲೆಗೈದರು. ಇದು ಭಯೋತ್ಪಾದಕ ಸಂಘಟನೆ ಐಸಿಸ್ ಕೃತ್ಯ ಎಂದು ಆರೋಪಿಸಲಾಯಿತು.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕನ್ಹಯ್ಯಾರನ್ನು ಇರಿದಿರುವುದು ಬಹಿರಂಗವಾಯಿತು. ಇದಲ್ಲದೆ, ಹತ್ಯೆಗೈದ ಬಳಿಕ ವಿಡಿಯೊವನ್ನು ರೆಕಾರ್ಡ್ ಮಾಡಿದ ದುಷ್ಕರ್ಮಿಗಳು, ಅದನ್ನು ಜಾಲತಾಣಗಳಲ್ಲಿ ಹರಿಬಿಟ್ಟರು. ಅಂದು ಈ ಘಟನೆ ದೇಶಾದ್ಯಂತ ಭಾರೀ ಸಂಚಲನ ಹುಟ್ಟುಹಾಕಿತು. ಆರೋಪಿಗಳನ್ನು ರಿಯಾಜ್ ಅಖ್ತರ್ ಮತ್ತು ಗೌಸ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದರು.
‘ಉದಯಪುರ್ ಫೈಲ್ಸ್’ ಚಿತ್ರದ ಬಿಡುಗಡೆ ಕುರಿತು ನಿರ್ದೇಶಕ ಭರತ್.ಎಸ್ ಶ್ರೀನೆಟ್ ಸ್ಪಷ್ಟನೆ ನೀಡಿದ್ದಾರೆ. ‘ಈ ಸಿನಿಮಾ ಒಂದು ಧರ್ಮದ ಬಗ್ಗೆ ಅಲ್ಲ, ನಂಬಿಕೆಯ ಕುರಿತಾಗಿದೆ. ಈ ಸಿನಿಮಾ ಕೇವಲ ಸಿದ್ಧಾಂತ ಮತ್ತು ಸತ್ಯದ ಬಗ್ಗೆ ಇರುತ್ತದೆ. ಯಾರ ಭಾವನೆಗಳಿಗೂ ನೋವುಂಟು ಮಾಡುವ ಯಾವುದೇ ವಿಷಯವಿಲ್ಲ’ ಎಂದಿದ್ದಾರೆ. ಚಿತ್ರದಲ್ಲಿ ನಟ ವಿಜಯ್ ರಾಜಾ ಅವರು ಕನ್ಹಯ್ಯಾ ಲಾಲ್ ಪಾತ್ರದಲ್ಲಿ ಕಾಣಿಸಿಕೊಂಡರೆ, ದುಗ್ಗಲ್, ರಜನೀಶ್, ಪ್ರೀತಿ ಘುಂಗಿಯಾನಿ, ಕಮಲೇಶ್, ಸಾವಂತ್, ಕಾಂಚಿ ಸಿಂಗ್, ಮುಷ್ತಾಕ್ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ
