ಚಲಾವಣೆಯಲ್ಲಿಲ್ಲದರೂ 2,000 ರೂ ನೋಟು ಅಮಾನ್ಯವಲ್ಲ: ವಿನಿಮಯಕ್ಕೆ ಅವಕಾಶವಿದೆ – RBI ಸ್ಪಷ್ಟನೆ

ನವದೆಹಲಿ: ಎರಡು ವರ್ಷದ ಹಿಂದೆ ಚಲಾವಣೆಯಿಂದ ಹಿಂಪಡೆಯಲಾಗಿದ್ದ 2,000 ರೂ ಮುಖಬೆಲೆಯ ನೋಟುಗಳು ಈ ಅಮಾನ್ಯವಾಗಿ ಎನ್ನುವಂತಹ ಸುದ್ದಿಗಳಿವೆ. ಆದರೆ, ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, 2,000 ರೂ ನೋಟುಗಳು ಅಮಾನ್ಯವಾಗಿಲ್ಲ, ಆದರೆ ಚಲಾವಣೆಯಲ್ಲೂ ಇಲ್ಲ ಎಂದಿದ್ದಾರೆ. ಭಾರತೀಯ ಆರ್ಥಿಕತೆಯ ಬೆಳವಣಿಗೆ ಬಗ್ಗೆ ಸಂಸದೀಯ ಸ್ಥಾಯಿ ಸಮಿತಿ ಜೊತೆ ಮಾತನಾಡುವ ವೇಳೆ ಸಂಜಯ್ ಮಲ್ಹೋತ್ರಾ 2,000 ರೂ ನೋಟಿನ ಬಗ್ಗೆ ಮಾಹಿತಿ ನೀಡಿದ್ದಾರೆ.

ಜುಲೈ 1ರವರೆಗಿನ ಅಧಿಕೃತ ದತ್ತಾಂಶದ ಪ್ರಕಾರ 2,000 ರೂ ಮುಖಬೆಲೆಯ ನೋಟುಗಳು ಮೂರು ಕೋಟಿಗೂ ಅಧಿಕ ಸಂಖ್ಯೆಯಲ್ಲಿವೆ. ಸುಮಾರು 6,099 ಕೋಟಿ ರೂ ಮೌಲ್ಯದ 2,000 ರೂ ನೋಟುಗಳು ಆರ್ಬಿಐಗೆ ಮರಳಿಲ್ಲ ಎನ್ನಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ 2023ರ ಮೇ 19ರಂದು 2,000 ರೂ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲಾಗಿದೆ ಎಂದು ಘೋಷಿಸಿತ್ತು. ಆ ನೋಟುಗಳನ್ನು ಹೊಂದಿರುವವರು ಅವನ್ನು ಬ್ಯಾಂಕುಗಳಿಗೆ ಮರಳಿಸಿ, ಅದಕ್ಕೆ ಬದಲಾಗಿ ಆ ಮೌಲ್ಯಕ್ಕೆ ಸರಿಸಮಾನವಾದ ಬೇರೆ ಮುಖಬೆಲೆಯ ನೋಟುಗಳನ್ನು ಪಡೆಯಲು, ಅಥವಾ ಆ ಮೌಲ್ಯದ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿಕೊಳ್ಳಲು ಅವಕಾಶ ಕೊಟ್ಟಿತ್ತು.
2,000 ರೂ ನೋಟುಗಳನ್ನು ಚಲಾವಣೆಗೆ ಬಳಸಲು ಅವಕಾಶ ಇಲ್ಲ. ಆದರೆ, ಈಗಲೂ ಕೂಡ ಯಾರಾದರೂ ಈ ನೋಟುಗಳನ್ನು ಹೊಂದಿದ್ದರೆ ಬ್ಯಾಂಕ್ಗೆ ಮರಳಿಸಬಹುದು. ರೆಗ್ಯುಲರ್ ಬ್ಯಾಂಕುಗಳಲ್ಲಿ ಇವುಗಳನ್ನು ಸ್ವೀಕರಿಸಲಾಗುವುದಿಲ್ಲ. ಬದಲಾಗಿ, ಆರ್ಬಿಐನ ಪ್ರಾದೇಶಿಕ ಕಚೇರಿಗಳಲ್ಲಿ ಇವುಗಳನ್ನು ಎಕ್ಸ್ಚೇಂಜ್ ಮಾಡಬಹುದು. ಬಹುತೇಕ ಎಲ್ಲಾ ಪ್ರಮುಖ ರಾಜ್ಯಗಳಲ್ಲಿ ಪ್ರಾದೇಶಿಕ ಆರ್ಬಿಐ ಕಚೇರಿಗಳಿವೆ. ದೇಶಾದ್ಯಂತ 19 ಕಡೆ ಇಂಥ ಆಫೀಸ್ಗಳಿವೆ. ಕರ್ನಾಟಕದಲ್ಲಿ ಆರ್ಬಿಐನ ಕಚೇರಿ ಇರುವುದು ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿ. ಇಲ್ಲಿ ಹೋಗಿ 2,000 ರೂ ನೋಟು ವಿನಿಮಯ ಮಾಡಿಕೊಂಡು ಬರಬಹುದು.
ಒಂದು ವೇಳೆ, ಆರ್ಬಿಐ ಕಚೇರಿಗೆ ಹೋಗಲು ಸಾಧ್ಯ ಇಲ್ಲ ಎಂದಾದವರು ಅಂಚೆ ಕಚೇರಿ ಸೌಲಭ್ಯ ಬಳಸಬಹುದು. ಅಂಚೆ ಮೂಲಕ ನೋಟುಗಳನ್ನು ಆರ್ಬಿಐ ಕಚೇರಿ ವಿಳಾಸಕ್ಕೆ ಕಳುಹಿಸಿ, ಆ ಮೌಲ್ಯದ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುವಂತೆ ಮಾಡಬಹುದು.
