ವಿಶ್ವದ ಟಾಪ್-10 ಟೆಕ್ ನಗರಗಳ ಪಟ್ಟಿಯಲ್ಲಿ ಬೆಂಗಳೂರು: ಭಾರತದಿಂದ 6 ನಗರಗಳಿಗೆ ಗೌರವಸ್ಥಾನ

ಬೆಂಗಳೂರು/ನವದೆಹಲಿ: ವಿಶ್ವದ ಟಾಪ್-10 ಪರಿಣತ ಟೆಕ್ಕಿಗಳ ನಗರಗಳ ಪಟ್ಟಿಯೊಂದು ಬಿಡುಗಡೆಗೊಂಡಿದೆ. ಈ ಪಟ್ಟಿಯಲ್ಲಿ ಬೆಂಗಳೂರು ಸ್ಥಾನ ಪಡೆದುಕೊಂಡಿದ್ದು, ಅಗ್ರ 10ರಲ್ಲಿ ಭಾರತದ 6 ನಗರಗಳಿರುವುದು ವಿಶೇಷ.

ಕೋಲಿಯರ್ಸ್ ಗ್ಲೋಬಲ್ ಟೆಕ್ ಮಾರ್ಕೆಟ್ ವಿಶ್ವದ ಪರಿಣತ ಟೆಕ್ಕಿಗಳ ವರದಿ ಸಿದ್ಧಪಡಿಸಿ, ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ಮೂಲಕ ಕರ್ನಾಟಕದ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರು ಮತ್ತೊಂದು ಹೆಮ್ಮೆಗೆ ಪಾತ್ರವಾಗಿದ್ದು, ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
200ಕ್ಕೂ ಹೆಚ್ಚು ಜಾಗತಿಕ ಮಾರುಕಟ್ಟೆಯ ಟೆಕ್ ಉದ್ಯಮವನ್ನು ಆಧಾರವಾಗಿಟ್ಟುಕೊಂಡು, ಅದರ ಪ್ರತಿಭೆ, ಬಂಡವಾಳ ಸೇರಿದಂತೆ ಹಲವು ಅಂಶಗಳನ್ನು ಗಣನೆಗೆ ತೆಗೆದುಕೊಂಡು ಪಟ್ಟಿ ತಯಾರಿಸಿದೆ. ಜಾಗತಿಕವಾಗಿ ಪರಿಣಿತ ಟೆಕ್ಕಿಗಳ ಪಟ್ಟಿಯಲ್ಲಿ ಭಾರತ ಮತ್ತು ಚೀನಾ ತನ್ನ ಪ್ರಾಬಲ್ಯ ಮುಂದುವರೆಸಿದೆ.
ಬೆಂಗಳೂರು, ಹೈದರಾಬಾದ್, ಪುಣೆ, ದೆಹಲಿ, ಚೆನ್ನೈ, ಮುಂಬೈ ಈ ಪಟ್ಟಿಯಲ್ಲಿವೆ. ಈ ವರದಿಯು ಬೆಂಗಳೂರಿನಲ್ಲಿ ಪರಿಣಿತ ಟೆಕ್ಕಿಗಳಿದ್ದು, ಜಾಗತಿಕ ತಂತ್ರಜ್ಞಾನವನ್ನು ಆಕರ್ಷಿಸುತ್ತಿದ್ದಾರೆ. ಇತ್ತೀಚೆಗೆ ಯುವ ಟೆಕ್ಕಿಗಳೇ ಈ ವಲಯದಲ್ಲಿ ಹೆಚ್ಚಾಗುತ್ತಿದ್ದು, 2014-2022ರ ಅವಧಿಯಲ್ಲಿ 25 ವರ್ಷಕ್ಕಿಂತ ಕೆಳಗಿನ ಉದ್ಯೋಗಿಗಳ ಪ್ರಮಾಣ ಶೇ.9ರಷ್ಟು ಹೆಚ್ಚಾಗಿದೆ. ಇದು ಎಲ್ಲಾ ಉದ್ಯಮದ ಬೆಳವಣಿಗೆ ದರಕ್ಕಿಂತ ಶೇ.20ರಷ್ಟು ಅಧಿಕ ಎನ್ನಲಾಗಿದೆ.
ಬೆಂಗಳೂರು ಮತ್ತು ಹೈದರಾಬಾದ್ ಟೆಕ್ಕಿಗಳ ಆದ್ಯತೆ ಸ್ಥಳಗಳಾಗಿದ್ದು, ಪ್ರತಿಭಾ ಲಭ್ಯತೆ, ಮಾಹಿತಿ ತಂತ್ರಜ್ಞಾನ ಸೌಕರ್ಯ, ಕಡಿಮೆ ವೆಚ್ಚದಲ್ಲಿ ಉತ್ತಮ ಸೌಲಭ್ಯಗಳ ಲಭ್ಯತೆ ವಿಚಾರದಲ್ಲಿ ಮುಂಚೂಣಿಯಲ್ಲಿದೆ. ಹೀಗಾಗಿ ಜಾಗತಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಭಾರತ ಉತ್ತಮ ಆಯ್ಕೆ ಎಂದು ಮೂಲಗಳು ತಿಳಿಸಿವೆ.