ಭೂಗಳ್ಳರ ಪಾಲಾಗುತ್ತಿದ್ದ150 ಕೋಟಿ ರೂ ಮೌಲ್ಯದ ಗೊಮಾಳ ಭೂಮಿ ಸರ್ಕಾರದ ವಶಕ್ಕೆ

ದೇವನಹಳ್ಳಿ: ಬೆಂಗಳೂರು ಹೊರ ವಲಯದಲ್ಲಿ ಈಗಾಗಲೇ ಕ್ವಿನ್ ಸಿಟಿ ಡಿಫೆನ್ಸ್ ಪಾರ್ಕ್ ಸ್ಯಾಟ್ ಲ್ಯಾಟ್ ಟೌನ್ ಸೇರಿದಂತೆ ಹಲವು ಯೋಜನೆಗಳು ಚಾಲ್ತಿಯಲ್ಲಿದ್ದು, ಸರ್ಕಾರಿ ಭೂಮಿ ಸಿಗುವುದು ಅಪರೂಪವಾಗಿದೆ. ಈ ಬೆನ್ನಲ್ಲೇ ನಾಲ್ಕು ವರ್ಷಗಳ ಹಿಂದೆ ಭೂಗಳ್ಳರ ಪಾಲಾಗುತ್ತಿದ್ದ 150 ಕೋಟಿ ರೂ. ಮೌಲ್ಯದ ಭೂಮಿ ಇದೀಗ ಸರ್ಕಾರದ ವಶಕ್ಕೆ ಮರಳಿದೆ. ಬೆಂಗಳೂರು ಗ್ರಾಮಾಂತರ ಡಿಸಿ ಬಿ.ಎ.ಬಸವರಾಜ್ ಆದೇಶದಂತೆ ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿರುವ ಸರ್ವೆ ನಂಬರ್ 150ರ 34 ಎಕರೆ ಸರ್ಕಾರಿ ಭೂಮಿ ಮರು ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಬಳಿ 2 ಸಾವಿರ ಎಕರೆ ಜಾಗದಲ್ಲಿ ಕ್ವಿನ್ ಸಿಟಿ ನಿರ್ಮಾಣಕ್ಕೆ ಸರ್ಕಾರ ಚಾಲನೆ ನೀಡಿದ್ದು, ಭೂಸ್ವಾಧೀನ ಕಾರ್ಯ ಸಹ ನಡೆಯುತ್ತಿದೆ. ಈ ನಡುವೆ ಹುಲಿಕುಂಟೆ ಗ್ರಾಮದ ಸರ್ವೆ ನಂಬರ್ 150 ರಲ್ಲಿನ 34 ಎಕರೆ ಜಮೀನಿನಲ್ಲಿ ಕೆಲವರಿಗೆ ಸರ್ಕಾರ ನೀಡಿದೆ. ಆ ಜನರು ಕೃಷಿ ಮಾಡಿಕೊಂಡು ಬಂದಿದ್ದು, ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಅರ್ಜಿ ಹಾಕಿದ್ದರು.
ಖಾತೆ ಸಂಬಂಧ ದೊಡ್ಡಬಳ್ಳಾಪುರ ತಹಶಿಲ್ದಾರ್ ಮತ್ತು ಎಸಿ ದಾಖಲಾತಿಗಳ ಪರಿಶೀಲನೆ ನಡೆಸಿದಾಗ ಅದು ಮೂಲತಃ ಗೋಮಾಳ ಜಮೀನಾಗಿದ್ದು, ಯಾವುದೇ ರೆವಿನ್ಯೂ 11ಎ ಸ್ಕೆಚ್ ಮತ್ತು ಸರ್ಕಾರದಿಂದ ಗ್ರ್ಯಾಂಟ್ ಆಗಿಲ್ಲ ಅನ್ನೋದು ಕಂಡು ಬಂದಿದೆ. ಹೀಗಾಗೆ ದಾಖಲೆಗಳ ಪರಿಶೀಲನೆ ನಡೆಸಿ ಇದೀಗ 150 ಕೋಟಿ ರೂ. ಮೌಲ್ಯದ ಹುಲಿಕುಂಟೆ ಗ್ರಾಮದ ಸರ್ವೆ ನಂಬರ್ 150 ರಲ್ಲಿನ 34 ಎಕರೆ ಸರ್ಕಾರಿ ಭೂಮಿಯನ್ನ ಮರಳಿ ಸರ್ಕಾರ ವಶಕ್ಕೆ ಪಡೆದಿದೆ.
ಅಧಿಕಾರಿಗಳಿಂದಲೇ ನಡೆದಿತ್ತಾ ಅಕ್ರಮ?
ಸರ್ಕಾರ ವಶಕ್ಕೆ ಪಡೆದ ಜಮೀನಿನಲ್ಲಿ ಕೆಲ ಖಾಸಗಿ ಡೆವಲಪರ್ಸ್ಗಳು 6 ಎಕರೆ ಜಮೀನು ಬರೆದು ಕೊಟ್ಟಿದ್ದ ಕ್ರಯಪತ್ರಗಳ ಆಧಾರದ ಮೇಲೆ ಮೆಲ್ಮನವಿ ಸಲ್ಲಿಸಲಾಗಿದ್ದು, ಇದೇ ಆಧಾರದ ಮೇಲೆ ಸರ್ಕಾರಿ ಜಮೀನನ್ನು ಮರಳಿ ಸರ್ಕಾರದ ವಶಕ್ಕೆ ಪಡೆದುಕೊಳ್ಳುವಂತೆ ದೊಡ್ಡಬಳ್ಳಾಪುರ ತಹಶೀಲ್ದಾರ್ಗೆ ಬೆಂಗಳೂರು ಗ್ರಾಮಾಂತರ ಡಿಸಿ ಬಿ.ಎ.ಬಸವರಾಜ್ ಆದೇಶ ಮಾಡಿದ್ದರು.
ಇನ್ನೂ ಜಿಲ್ಲಾಡಳಿತ ಮರಳಿ ವಶಕ್ಕೆ ಪಡೆಯುತ್ತಿರುವ ಜಮೀನು ರಾಷ್ಟ್ರಿಯ ಹೆದ್ದಾರಿ ಪಕ್ಕದಲ್ಲೇ ಇರುವ ಕಾರಣ ಕೋಟ್ಯಂತರ ರೂ ಮೌಲ್ಯದ್ದಾಗಿದೆ. ಸದ್ಯ ಈ ಜಮೀನನ್ನು ಸರ್ಕಾರ ವಿವಿಧ ಯೋಜನೆಗಳಿಗೆ ಬಳಸಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಇನ್ನೂ ಈ ಕುರಿತು ಹಿಂದೆ ಅಧಿಕಾರಿಗಳು ಮಾಡಿದ್ದ ಆದೇಶದ ಕುರಿತಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಡಿಸಿ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಒಟ್ಟಾರೆ ಸಿಲಿಕಾನ್ ಸಿಟಿ ಹೊರವಲಯದಲ್ಲಿ ಬೆಳವಣಿಗೆ ಆಗುತ್ತಿದ್ದಂತ್ತೆಲ್ಲಾ ಸರ್ಕಾರಿ ಭೂಮಿಗಳು ಕಣ್ಮರೆ ಆಗುತ್ತಿದ್ದು, ಇದೀಗ ಕೋಟಿ ಕೋಟಿ ಬೆಲೆ ಬಾಳುವ ಸರ್ಕಾರಿ ಭೂಮಿ ಮರಳಿ ಜಿಲ್ಲಾಡಳಿತ ಸರ್ಕಾರದ ವಶಕ್ಕೆ ಪಡೆದಿರುವುದು ನಿಜಕ್ಕೂ ಶ್ಲಾಘನೀಯ.
