ಕೊಟ್ಟಿಗೆಯಿಂದ ಹಸು ಕದ್ದು ಕೊಂದ ಆರು ಜನರ ಬಂಧನ!

ಚಿಕ್ಕಮಗಳೂರು: ಮಾಂಸಕ್ಕಾಗಿ ಕೊಟ್ಟಿಗೆಯಲ್ಲಿದ್ದ ಹಸುವನ್ನು (Cow) ಕದ್ದೊಯ್ದು ಕೊಂದ ಆರೋಪಿಗಳನ್ನು ಬಾಳೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ ತಾಲೂಕಿನ ಮರ್ಕಲ್ ಗ್ರಾಮದ ಕೊಟ್ಟಿಗೆಯೊಂದರಲ್ಲಿ ಹಸು ಕಟ್ಟಲಾಗಿತ್ತು.

ಅಸ್ಸಾಂ ಮೂಲದ ಕಾಫಿತೋಟದ ಕಾರ್ಮಿಕರು ಕೊಟ್ಟಿಗೆಯಿಂದ ಹಸವನ್ನು ಕದ್ದೊಯ್ದು ಕೊಂದಿದ್ದಾರೆ. ಬಳಿಕ, ಹಸು ಮಾಂಸವನ್ನು ಬೇರ್ಪಡಿಸುವಾಗ ಪೊಲೀಸರು ದಾಳಿ ಮಾಡಿದ್ದು, 6 ಮಂದಿಯನ್ನು ಬಂಧಿಸಿದ್ದಾರೆ. ಅಜೀರ್ ಅಕ್ಮಲ್, ಅಕ್ಕಾಸ್ ಅಲಿ, ನಜ್ರುಲ್ ಹಕ್ ಹಾಗೂ ಇಜಾಬುಲ್ ಹಕ್, ಮೆಹರ್ ಅಲಿ, ಮಂಜುಲ್ ಹಕ್ ಸೆರೆ ಬಂಧಿತರು. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಸು ರುಂಡ ಪತ್ತೆ
ಇತ್ತೀಚಿಗೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕುಂಜಾಲು ರಾಮ ಮಂದಿರದ ಬಳಿ ಗೋವಿನ ರುಂಡ ಪತ್ತೆಯಾಗಿತ್ತು. ಘಟನೆ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆಗೆ ಉಡುಪಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ನಾಲ್ಕು ತಂಡಗಳನ್ನು ರಚಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಘಟನೆ ನಡೆದು 24 ಗಂಟೆಯೊಳಗಾಗಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಗರ್ಭ ಧರಿಸಿದ್ದ ಹಸುವಿನ ತಲೆಯನ್ನೇ ಕಡೆಯಲಾಗಿತ್ತು. ಹೊಟ್ಟೆಯೊಳಗಿದ್ದ ಕರುವನ್ನು ಹೊರತೆಗೆದು ಹಸುವಿನ ದೇಹ ಎತ್ತುಕೊಂಡು ಹೋಗಿದ್ದರು. ಇತ್ತೀಚೆಗೆ ಬೆಂಗಳೂರು ದಕ್ಷಿಣ ತಾಲೂಕಿನ ಸೂಲಿವಾರ ಗ್ರಾಮದಲ್ಲಿ ಹಾಲಿನ ಡೈರಿ ಅಧ್ಯಕ್ಷರಿಗೆ ಸೇರಿದ್ದ ಹಸುವಿನ ಕೆಚ್ಚಲು ಕೊಯ್ದು ದುಷ್ಕರ್ಮಿಗಳು ಕ್ರೌರ್ಯ ಮೆರೆದಿರುವಂತಹ ಘಟನೆ ನಡೆದಿತ್ತು. ಇದಕ್ಕೂ ಮುನ್ನ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ಯಲಾಗಿತ್ತು
