ಮನೆಗೆ ಬಂದವರ ಮೇಲೆ ಇಟ್ಟಿಗೆ ಎಸೆಯಲು ನಾಯಿಗೆ ತರಬೇತಿ ನೀಡಿದ್ದವ ಬಂಧನ!

ಪ್ರಪಂಚದಲ್ಲಿ ಎಂತೆಂಥಾ ವಿಚಿತ್ರ ಜನಗಳಿರುತ್ತಾರೆ ನೋಡಿ. ಕೆಲವರು ಎದುರಿಗಿದ್ದವರಿಗೆ ಸಾಕು ಸಾಕು ಎನಿಸುವಷ್ಟು ಮಾತನಾಡುವವರಾದರೆ ಮತ್ತೆ ಕೆಲವರಿಗೆ ಮಾತೆಂದರೆ ಅಲರ್ಜಿ. ಮಾತನಾಡಲು ಇಷ್ಟ ಇಲ್ಲವೆಂದರೆ ಬಾಯಿ ಮುಚ್ಚಿ ಸುಮ್ಮನಿರಬಹುದು. ಆದರೆ ಇಲ್ಲೊಬ್ಬ ಜನರೊಂದಿಗೆ ಬೆರೆಯಲು ಮಾತನಾಡಲು ಇಷ್ಟವಿಲ್ಲದ ವ್ಯಕ್ತಿ ಏನು ಮಾಡಿದ ಎಂದು ಕೇಳಿದರೆ ನೀವು ಮಾತನಾಡಲು ಇಷ್ಟಪಡದವರ ಬಳಿ ಮಾತನಾಡುವುದಕ್ಕೂ ಎರಡೆರಡು ಬಾರಿ ಯೋಚಿಸುತ್ತಿರಿ…!

ಹೌದು ದಕ್ಷಿಣ ಆಫ್ರಿಕಾದಲ್ಲಿ ವ್ಯಕ್ತಿಯೊಬ್ಬನಿಗೆ ಜನರೊಂದಿಗೆ ಬೆರೆಯುವುದಕ್ಕೆ ಇಷ್ಟವಿರಲಿಲ್ಲ, ಆತ ಮನೆಯಲ್ಲಿ ಒಬ್ಬನೇ ಇರುವುದನ್ನು ಇಷ್ಟಪಡುತ್ತಿದ್ದ. ಆದರೆ ಇವನಿಗೆ ಒಬ್ಬಂಟಿಯಾಗಿಯೇ ಇರುವುದು ಇಷ್ಟ ಎಂದು ತಿಳಿಯದ ಜನ ಆಗಾಗ ಅವನ ಮನೆಗೆ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿಕೊಳ್ಳುತ್ತಿದ್ದರು. ಆದರೆ ಜನರ ನಡೆಯಿಂದ ಆತ ಖುಷಿಗೊಳ್ಳುವ ಬದಲು ರೊಚ್ಚಿಗೆದ್ದಿದ್ದ.
ಹೀಗೆ ಬಂದು ತನಗೆ ಆಗಾಗ ಅಡ್ಡಿಪಡಿಸುತ್ತಿರುವ ಜನರಿಗೆ ಬುದ್ಧಿ ಕಲಿಸುವುದಕ್ಕೆ ಆತ ಮಾಡಿದ ಪ್ಲಾನ್ ಎಂಥವರನ್ನು ಬೆಚ್ಚಿ ಬೀಳಿಸುತ್ತಿದ್ದೆ. ಹಾಗಿದ್ರೆ ಆತ ಮಾಡಿದ್ದೇನು? ತನ್ನನ್ನು ಮನೆಗೆ ಬಂದು ಆಗಾಗ ಮಾತನಾಡಿಸುತ್ತಿದ್ದ ಜನರಿಂದ ದೂರ ಉಳಿಯುವುದಕ್ಕಾಗಿ ಆತ ತನ್ನ ಮನೆಯ ನಾಯಿಗೆ ತರಬೇತಿ ನೀಡಿದ್ದಾನೆ. ಮನೆಯಲ್ಲಿದ್ದ ತನ್ನ ಪ್ರೀತಿಯ ಫಿಟ್‌ಬುಲ್ ನಾಯಿಗೆ ತರಬೇತಿ ನೀಡಿದ್ದಾನೆ.
ಆತ ನೀಡಿದ ತರಬೇತಿ ಏನು?
ಸಾಮಾನ್ಯವಾಗಿ ಮನೆಗೆ ಜನ ಬಂದರೆ ನಾಯಿಗಳು ಬೊಗಳುತ್ತವೆ. ಮತ್ತೆ ಕೆಲವು ನಾಯಿಗಳು ಕಚ್ಚಲು ಹೋಗುತ್ತವೆ. ಆದರೆ ಇಲ್ಲಿ ಈತ ನಾಯಿಗೆ ಮನೆಗೆ ಬಂದವರ ತಲೆ ಮೇಲೆ ಇಟ್ಟಿಗೆ ಎಸೆಯುವುದಕ್ಕೆ ತರಬೇತಿ ನೀಡಿದ್ದಾನೆ. ಯಾರು ತನ್ನ ಮನೆಯ ಡೋರ್ ಬೆಲ್ ಬಡಿಯುತ್ತಾರೋ ಅವರ ಮೇಲೆ ನಾಯಿಗಳು ಇಟ್ಟಿಗೆ ಎಸೆಯಲು ಆತ ತರಬೇತಿ ನೀಡಿದ್ದು, ಈ ವಿಚಾರ ತಿಳಿದ ಪೊಲೀಸರ ಆತನನ್ನು ಬಂಧಿಸಿದ್ದಾರೆ.
ಮನೆಯ ಟೆರೇಸ್‌ನ ಮೇಲೆ ಇರುತ್ತಿದ್ದ ಈತನ ನಾಯಿ ತನ್ನ ಬಾಯಿಯಲ್ಲಿ ಸಣ್ಣ ಸೈಜ್ ಇಟ್ಟಿಗೆಯನ್ನು ಕಚ್ಚಿಕೊಂಡು ಇರುತ್ತಿದ್ದು, ಯಾರಾದರೂ ಬಂದು ಮನೆಯ ಡೋರ್ ಬೆಲ್ ಮಾಡುತ್ತಿದ್ದಂತೆ ನಾಯಿ ತನ್ನ ಬಾಯಲ್ಲಿದ್ದ ಇಟ್ಟಿಗೆಯನ್ನು ಕೆಳಗೆ ಬಿಡುತ್ತಿತ್ತು. ಈತನ ಪಕ್ಕದ ಮನೆಯವರು ದೂರು ನೀಡಿದ ನಂತರ ಪೊಲೀಸರು ಆರೋಪಿ ಯುವಕನನ್ನು ಬಂಧಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಅವನ ಈ ಕೃತ್ಯವೂ ಪ್ರಾಣಿ ಹಿಂಸೆಯ ಆರೋಪ ಹೊರಿಸಿದ್ದಾರೆ. ಈತ ತನ್ನ ನಾಯಿಗೆ ನೀಡಿದ ತರಬೇತಿ ಅನೈತಿಕ ಮತ್ತು ಪ್ರಾಣಿಗಳಿಗೆ ಹಾನಿಕಾರಕವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಯುವಕನ ಈ ವಿಲಕ್ಷಣ ಕೃತ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ನಾಯಿಗಳು ಬಾಯಲ್ಲಿ ಇಟ್ಟಿಗೆ ಹಿಡಿದುಕೊಂಡು ಕಾಯುತ್ತಿರುವ ಫೋಟೋಗಳು ವೈರಲ್ ಆಗಿದೆ. ನಾಯಿಯ ಫೋಟೋ ನೋಡಿದ ಜನ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಈ ಶ್ವಾನಗಳು ಇಟ್ಟಿಗೆಯನ್ನು ಎಸೆಯುವುದಕ್ಕೆ ಖುಷಿಖುಷಿಯಾಗಿ ಸಿದ್ಧಗೊಂಡಂತೆ ಕಾಣುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆತನಲ್ಲಿ ನಿಮ್ಮ ನಾಯಿ ಕಚ್ಚುತ್ತಾ ಎಂದು ಕೇಳಿದರೆ ಆತ ಇಲ್ಲ ಕೇವಲ ಕಲ್ಲೆಸೆಯುತ್ತೆ ಎಂದು ಹೇಳಬಹುದು ಎಂದು ಮತ್ತೊಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
