ಕೊಳ್ಳೇಗಾಲ: ಬ್ಯಾಂಕಿನಲ್ಲಿ ಧರಣಿ ಕುಳಿತ ಮಹಿಳೆಯನ್ನು ಒಳಗೇ ಕೂಡಿಹಾಕಿದ ಸಿಬ್ಬಂದಿ!

ಕೊಳ್ಳೇಗಾಲ : ಬ್ಯಾಂಕ್ ನಲ್ಲಿ ಹಣ ಇಟ್ರೆ ಯಾವಾಗ ಬೇಕಿದ್ರೂ ತೆಗೆದುಕೊಳ್ಳಬಹುದು ಅಂದುಕೊಳ್ಳೋ ಜನರು ಒಮ್ಮೆ ಈ ಸುದ್ದಿಯನ್ನು ಓದ್ಲೇಬೇಕು

ಸಹಕಾರಿ ಬ್ಯಾಂಕ್ ನಲ್ಲಿ ಇಟ್ಟಿದ್ದ ಹಣವನ್ನು ಕೇಳಿದ್ದಕ್ಕೆ ಧರಣಿನಿರತ ಮಹಿಳೆಯನ್ನು ಕೂಡಿ ಹಾಕಿರುವ ಘಟನೆ ಬುಧವಾರ ಕೊಳ್ಳೇಗಾಲದಲ್ಲಿ ನಡೆದಿದೆ.ಫಿಕ್ಸ್ಡ್ ಡಿಪಾಸಿಟ್ ಹಾಗೂ ಸೇವಿಂಗ್ಸ್ ಅಕೌಂಟ್ ನಲ್ಲಿ ಹಣ ಹಿಂಪಡೆಯಲು ಅವಕಾಶ ನೀಡದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಧೋರಣೆ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಜಿ.ಪಂ.ಮಾಜಿ ಸದಸ್ಯೆ ನಾಗರತ್ನಮ್ಮ ಕೊಳ್ಳೇಗಾಲದ ಪಿಎಸಿಸಿ ಬ್ಯಾಂಕ್‌ನಲ್ಲಿ 8 ಲಕ್ಷ ರೂ. ಠೇವಣಿ ಇಟ್ಟಿದ್ದರು. ಅಲ್ಲದೇ 80 ಸಾವಿರ ರೂ. ಅವರ ಉಳಿತಾಯ ಖಾತೆಯಲ್ಲಿತ್ತು. ಆ ಹಣ ವಾಪಸ್ ಪಡೆಯಲು ಬಹಳಷ್ಟು ಬಾರಿ ಬ್ಯಾಂಕ್ ನೌಕರರನ್ನು ಕೇಳಿದ್ದರೂ ಕೊಟ್ಟಿರಲಿಲ್ಲ. ಹೀಗಾಗಿ ಬೇಸತ್ತ ನಾಗರತ್ನಮ್ಮ ಅಲ್ಲಿಯೇ ಧರಣಿ ಕೂತಿದ್ದರು. ಆದ್ರೆ ಕ್ಯಾರೇ ಎನ್ನದ ಸಿಬ್ಬಂದಿ ಗೇಟ್ ಬೀಗ ಹಾಕಿ ಉದ್ಧಟತನ ಮೆರೆದಿದ್ದಾರೆ.
ಹಣ ಕೊಡದೆ ಸತಾಯಿಸುತ್ತಿದ್ದ ಧರಣಿ ನಿರತ ಮಹಿಳೆ ಒಳಗಿದ್ದರೂ ಬ್ಯಾಂಕ್‌ನ ಗೇಟ್‌ಗೆ ಬೀಗ ಹಾಕಲಾಗಿದ್ದು,ಈ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಸಹ ಕಾರಣವಾಗಿದೆ