ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣ: ಜೈಲಿನಿಂದ ಉಗ್ರ ಟಿ. ನಾಸೀರ್ ಪರಾರಿಗೆ ಸಂಚು, ಸ್ಫೋಟಕ ಮಾಹಿತಿ ಬಯಲು!

ಬೆಂಗಳೂರು: ಜೈಲಿನಿಂದಲೇ ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ ಪ್ರಕರಣದ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ ವಾಗಿದ್ದು, ಬಂಧಿತರು ಲಷ್ಕರ್-ಎ-ತಯ್ಯಬಾ (ಎಲ್ಇಟಿ) ಉಗ್ರ, 2008ರ ಸರಣಿ ಬಾಂಬ್ ಸ್ಫೋಟದ ಪಾತಕಿ ಟಿ. ನಾಸೀರ್ನನ್ನು ಕೋರ್ಟ್ನಿಂದಲೇ ಪರಾರಿ ಮಾಡಲು ಸಂಚು ರೂಪಿಸಿದ್ದರು ಎಂಬುದು ಬೆಳಕಿಗೆ ಬಂದಿದೆ.

ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವವರ ಪೈಕಿ ಅನೀಸಾ ಫಾತೀಮಾ ಮತ್ತು ಸಿಎಆರ್ ಎಎಸ್ಐ ಚಾನ್ ಪಾಷಾ ಅವರು ಟಿ. ನಾಸೀರ್ನನ್ನು ಕೋರ್ಟ್ಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಪರಾರಿ ಮಾಡಲು ಸಂಚು ರೂಪಿಸಿದ್ದರು. ಅದಕ್ಕಾಗಿ ನಾಸೀರ್ನಿಂದ ಲಕ್ಷಾಂತರ ರೂ. ಪಡೆದುಕೊಂಡಿದ್ದರು ಎಂಬುದು ಎನ್ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
2008ರಲ್ಲಿ ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಟಿ. ನಾಸೀರ್, ಜೈಲಿನಿಂದಲೇ ಎಲ್ಇಟಿ ಸಂಘಟನೆಯ ಮರು ಸ್ಥಾಪನೆಗೆ ಟೊಂಕ ಕಟ್ಟಿ ನಿಂತಿದ್ದ.
ಹೀಗಾಗಿ ಅಪರಾಧ ಪ್ರಕರಣಗಳಲ್ಲಿ ಜೈಲಿಗೆ ಬಂದ ಜುನೈದ್ಗೆ ಉಗ್ರ ಸಂಘಟನೆ ಬಗ್ಗೆ ಪ್ರಚೋದನೆ ನೀಡಿ, ಗ್ರೆನೇಡ್ಸಂಗ್ರಹಿಸಿದ್ದ. ಸದ್ಯ ಜುನೈದ್ ಆಫ್ಘಾನಿಸ್ಥಾನ ಅಥವಾ ದುಬಾೖಯಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬುದು ಗೊತ್ತಾಗಿದೆ.
ಜುನೈದ್ ವಿದೇಶಕ್ಕೆ ಪರಾರಿಯಾದ ಬಳಿಕ ನಾಸೀರ್ ಆತನ ತಾಯಿ ಅನೀಸ್ ಫಾತೀಮಾ ಜತೆ ಸಂಪರ್ಕದಲ್ಲಿದ್ದ. ಆಕೆ ಮೂಲಕ ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ಮತ್ತು ಎಲ್ಇಟಿ ಸಂಘಟನೆ ಬಲಪಡಿಸಲು ಹಾಗೂ ಅದಕ್ಕಾಗಿ ನಿಧಿ ಸಂಗ್ರಹಕ್ಕೆ ಮುಂದಾಗಿದ್ದ. ಮತ್ತೂಂದೆಡೆ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ನಾಸೀರ್ ಆಗಾಗ್ಗೆ ಕೋರ್ಟ್ ವಿಚಾರಣೆಗೆ ಹಾಜರಾಗುತ್ತಿದ್ದಾನೆ. ಹೀಗಾಗಿ ಈತನನ್ನು ಕೋರ್ಟ್ಗೆ ಕರೆದೊಯ್ಯುವ ಮಾರ್ಗಮಧ್ಯೆ ಅಥವಾ ಕೋರ್ಟ್ ಆವರಣದಿಂದಲೇ ಪರಾರಿ ಮಾಡಿಸಲು ಅನೀಸ್ ಫಾತೀಮಾ ಮತ್ತು ಚಾನ್ಪಾಷಾ ಸಂಚು ರೂಪಿಸಿದ್ದರು.
ಸಿಗ್ನಲ್ ಆಯಪ್ ಬಳಸುತ್ತಿದ್ದ ನಾಸೀರ್!
ಶಂಕಿತರ ಪೈಕಿ ಅನೀಸ್ ಫಾತೀಮಾ ತಾಂತ್ರಿಕವಾಗಿಯೂ ಪರಿಣಿತಳಾಗಿದ್ದಾರೆ. ಜೈಲಿನ ಮನೋವೈದ್ಯ ನಾಗರಾಜ್ ಕೊಟ್ಟಿದ್ದ ಮೊಬೈಲ್ನಲ್ಲಿ ಟಿ. ನಾಸೀರ್ ಸಿಗ್ನಲ್ ಎಂಬ ಆಯಪ್ ಬಳಸುತ್ತಿದ್ದ. ಮತ್ತೊಂದೆಡೆ ಅನೀಸ್ ಫಾತೀಮಾ ಮತ್ತು ಚಾನ್ಪಾಷಾ ಇದೇ ಆಯಪ್ಗ್ಳಿಂದಲೇ ನಾಸೀರ್ನನ್ನು ಸಂಪರ್ಕಿಸುತ್ತಿದ್ದ. ಆತ ನೀಡುತ್ತಿದ್ದ ಸೂಚನೆಗಳನ್ನು ಬಂಧನಕ್ಕೊಳಗಾಗಿರುವ ಮತ್ತು ತಲೆಮರೆಸಿಕೊಂಡಿರುವ ಶಂಕಿತರಿಗೆ ಇಬ್ಬರು ರವಾನೆ ಮಾಡುತ್ತಿದ್ದರು. ಪ್ರಮುಖ ವಾಗಿ ಅನೀಸ್ ಫಾತೀಮಾ ಜತೆಯೇ ನಾಸೀರ್ ಹೆಚ್ಚು ಸಂಪರ್ಕದಲ್ಲಿದ್ದು ಈಕೆಯ ತನ್ನ ಪುತ್ರ ಜುನೈದ್ ಅಹ್ಮದ್ ಹಾಗೂ ಇತರ ಶಂಕಿತರಿಗೆ ವಿಧ್ವಂಸಕ ಕೃತ್ಯ ಮತ್ತು ಸಂಘಟನೆಗೆ ಸೂಚಿಸುತ್ತಿದ್ದಳು ಎಂದು ಮೂಲಗಳು ತಿಳಿಸಿವೆ.
ಬರಹಗಾರನಾಗಿದ್ದರಿಂದ ಎಲ್ಲ ಮಾಹಿತಿ ಎಎಸ್ಐಗಿತ್ತು!
ಇನ್ನು ಚಾನ್ ಪಾಷಾ ಸಿಎಆರ್ ದಕ್ಷಿಣ ವಿಭಾಗದಲ್ಲಿ ಬರಹಗಾರನಾಗಿ ಕೆಲಸ ಮಾಡುತ್ತಿದ್ದ. ಈತನಿಗೆ ಜೈಲಿನಿಂದ ಯಾರೆಲ್ಲ ಕೈದಿಗಳನ್ನು ಕೋರ್ಟ್ ಅಥವಾ ಆಸ್ಪತ್ರೆಗೆ ಕರೆ ದೊಯ್ಯುವ ಬಗ್ಗೆ ಮಾಹಿತಿ ಬರುತ್ತದೆ. ಈ ಮಾಹಿತಿ ಪೈಕಿ ನಾಸೀರ್ನನ್ನು ಕೋರ್ಟ್ಗೆ ಕರೆದೊಯ್ಯುವ ಮಾಹಿತಿ ಯನ್ನು ಅನೀಸ್ ಫಾತೀಮಾ ಮತ್ತು ಸಲ್ಮಾನ್ಖಾನ್ಗೆ ನೀಡುತ್ತಿದ್ದ ಎಂದು ಎನ್ಐಎ ಮೂಲಗಳು ತಿಳಿಸಿವೆ.
ಹತ್ತಾರು ಮೊಬೈಲ್ ಖರೀದಿಸಿದ್ದ ಜೈಲು ಡಾಕ್ಟರ್
ಶಂಕಿತರ ಪೈಕಿ ಮನೋವೈದ್ಯ ನಾಗರಾಜ್ ಒಂದು ಆಯಂಡ್ರಾಯ್ಡ ಮೊಬೈಲ್ನ್ನು ಟಿ. ನಾಸೀರ್ಗೆ ನೀಡಿದ್ದ. ಅದರಿಂದಲೇ ನಾಸೀರ್, ಅನೀಸ್ ಫಾತೀಮಾ ಹಾಗೂ ಇತರ ಶಂಕಿತರ ಜತೆ ಸಿಗ್ನಲ್ ಆಯಪ್ಗ್ಳ ಮೂಲಕ ಸಂಪರ್ಕಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಅನೀಸಾ ಫಾತೀಮಾಳೇ ಸೂತ್ರಧಾರಿ?
ಶಂಕಿತರ ಪೈಕಿ ಅನೀಸಾ ಫಾತೀಮಾಳ ವಿಧ್ವಂಸಕ ಕೃತ್ಯಗಳ ಬಗ್ಗೆ ಬಯಲಾಗಬೇಕಿದೆ. ಟಿ. ನಾಸೀರ್ ಸೂಚನೆ ಮೇರೆಗೆ ಈಕೆಯೇ ವಿದೇಶದಿಂದ ಬಂದಿದ್ದ ನಾಲ್ಕೈದು ಗ್ರೆನೇಡ್ಗಳನ್ನು ತನ್ನ ಮನೆಯಲ್ಲಿ ಇರಿಸಿಕೊಂಡು, ಬಳಿಕ ಆರೋ ಪಿ-5 ಆಗಿ ರು ವ ಶಂಕಿತ ಜಾಹೀದ್ ತಬ್ರೇಜ್ ಮನೆಗೆ ಸಲ್ಮಾನ್ಖಾನ್ ಮೂಲಕ ರವಾನಿಸಿದ್ದಳು. ಹೀಗಾಗಿ ಈಕೆಯ ವಿಧ್ವಂಸಕ ಕೃತ್ಯದ ಬಗ್ಗೆ ಸಾಕಷ್ಟು ಮಾಹಿತಿ ಸಂಗ್ರಹಿಸಬೇಕಿದೆ. ಮತ್ತೂಂದೆಡೆ ಎಲ್ಇಟಿ ಸಂಘಟನೆ ಹಾಗೂ ವಿಧ್ವಂಸಕ ಕೃತ್ಯಕ್ಕಾಗಿ ನಿಧಿ ಸಂಗ್ರಹ, ಕೆಲ ಶಂಕಿತರಿಗೆ ಆಶ್ರಯ ನೀಡಿದ್ದಳು. ನಾಸೀರ್ಗೆ ಕೆಲವೊಂದು ವಸ್ತು ಗಳನ್ನು ಪೂರೈಕೆ ಮಾಡಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಆರೋಪಿಗಳು ಎನ್ಐಎ ವಶಕ್ಕೆ
ಬಂಧಿತರ ಮೂವರು ಆರೋಪಿಗಳನ್ನು ಜುಲೈ 14ರ ವರೆಗೆ 6 ದಿನಗಳ ಕಾಲ ಹೆಚ್ಚಿನ ವಿಚಾರಣೆಗಾಗಿ ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಮೂವರು ಆರೋಪಿಗಳು ವಿವಿಧೆಡೆ ವಿಧ್ವಂಸಕ ಕೃತ್ಯ ನಡೆಸಲು ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿದ್ದಾರೆ. ಜತೆಗೆ ವೈದ್ಯ ನಾಗರಾಜ್ ಜೈಲಿನಲ್ಲೇ ಹೊಸ ಮೊಬೈಲ್ಗಳನ್ನು ಹೆಚ್ಚಿನ ಮೌಲ್ಯಕ್ಕೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಯಾಕೆ ಪರಾರಿ ಸಂಚು?
-ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಶಂಕಿತ ಉಗ್ರ ಟಿ. ನಾಸೀರ್
-ಉಗ್ರ ಸಂಘಟನೆಗೆ ಸೇರುವಂತೆ ಜುನೈದ್ನಿಗೆ ಪ್ರಚೋದನೆ
-ಹೊರ ಬಂದ ಜುನೈದ್ನಿಂದ ಗ್ರೆನೇಡ್ ಸಂಗ್ರಹ, ಬಳಿಕ ಪರಾರಿ
-ಜುನೈದ್ ತಾಯಿ ಫಾತೀಮಾ ಜತೆ ನಾಸೀರ್ ಸಂಪರ್ಕ
-ಹಣದ ಆಮಿಷ ನೀಡಿ, ಮಾರ್ಗ ಮಧ್ಯೆ ಪರಾರಿ ಮಾಡಿಸಲು ಸಂಚು
