ಬೆಂಗಳೂರಿನ ಉಬರ್ ಆಪ್ ದರ ಹಗರಣ ವೈರಲ್

ಬೆಂಗಳೂರು: ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿ ಆಟೋ, ಟ್ಯಾಕ್ಸಿ ಬುಕ್ ಮಾಡಲು ಆಯಪ್ಗಳನ್ನು ಅವಲಂಬಿಸಿದವರೇ ಹೆಚ್ಚು. ಆದರೆ ಮಾಯಾನಗರಿ ಬೆಂಗಳೂರಿನಲ್ಲಿ ಆಯಪ್ ಮೂಲಕ ಆಟೋರಿಕ್ಷಾಗಳನ್ನು ಬುಕ್ ಮಾಡುವ ಪ್ರಯಾಣಿಕರಿಂದ ಆಟೋ ಚಾಲಕರು ಟಿಪ್ ಸೇರಿಸಿ ಹೆಚ್ಚುವರಿ ಹಣವನ್ನು ಚಾರ್ಜ್ ಮಾಡುತ್ತಿರುವ ಆರೋಪವು ಕೇಳಿ ಬರುತ್ತಲೇ ಇದೆ.

ಆದರೆ ಇದೀಗ ಬೆಂಗಳೂರಿನ ಮಹಿಳೆಯೊಬ್ಬರು ಆಟೋರಿಕ್ಷಾ ಮೀಟರ್ ಮತ್ತು ಆನ್ಲೈನ್ ಬುಕಿಂಗ್ ಅಪ್ಲಿಕೇಶನ್ನಲ್ಲಿ ತೋರಿಸಿರುವ ದರಗಳಲ್ಲಿನ ಭಾರಿ ವ್ಯತ್ಯಾಸದ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಆಟೋರಿಕ್ಷಾ ಮೀಟರ್ 2.6 ಕಿ.ಮೀ.ಗೆ 39 ರೂ. ತೋರಿಸಿದರೆ, ಉಬರ್ ಅಪ್ಲಿಕೇಶನ್ನಲ್ಲಿ ಅದು 172 ರೂ. ಇದೆ ಎನ್ನುವ ಮೂಲಕ ಅಪ್ಲಿಕೇಶನ್ ಮೂಲಕ ಪ್ರಯಾಣಿಕರಿಂದ ದುಬಾರಿ ಹಣವನ್ನು ವಸೂಲಿ ಮಾಡಲಾಗುತ್ತಿದೆ ಎನ್ನುವ ವಾಸ್ತವ ಸ್ಥಿತಿಯನ್ನು ತೆರೆದಿಟ್ಟಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಶಾಕ್ ಆಗಿದ್ದಾರೆ.

ಅದಿತಿ ಶ್ರೀವಾಸ್ತವ ಎನ್ನುವ ಮಹಿಳೆಯೂ ಎಕ್ಸ್ ಖಾತೆಯಲ್ಲಿ ಮಾಡಿದ ಪೋಸ್ಟ್ನಲ್ಲಿ ಬೆಂಗಳೂರು ನಗರದಲ್ಲಿ ಸಾಮಾನ್ಯ ಆಟೋರಿಕ್ಷಾ ಸೇವಾ ದರ ಮತ್ತು ಆಯಪ್ ಆಧಾರಿತ ದರದ ನಡುವಿನ ಅಗಾಧ ವ್ಯತ್ಯಾಸದ ಕುರಿತು ತಿಳಿಸಿದ್ದಾರೆ. ಮೀಟರ್ನ ಬೆಲೆಯ ಚಿತ್ರ ಮತ್ತು ಉಬರ್ ಅಪ್ಲಿಕೇಶನ್ನ ಸ್ಕ್ರೀನ್ಶಾಟ್ನ್ನು ಹಂಚಿಕೊಂಡು, ಮೀಟರ್ನ ಬೆಲೆ vs ಉಬರ್ನ ಬೆಲೆ. ನೀವು ಸ್ವಂತ ವಾಹನ ಹೊಂದಿಲ್ಲದಿದ್ದರೆ ನೀವು ತೊಂದರೆ ಅನುಭವಿಸುತ್ತೀರಿ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಪೋಸ್ಟ್ನಲ್ಲಿ ಆಟೋ ಮೀಟರ್ ದರ 2.6 ಕಿಮೀ ಗೆ 39 ರೂ ತೋರಿಸಿದ್ದು, ಊಬರ್ ಅಪ್ಲಿಕೇಶನ್ನಲ್ಲಿ 2.6 ಕಿಮೀ ದೂರಕ್ಕೆ 172 ರೂ ತೋರಿಸಿದೆ. ಇದು ಸಾಮಾನ್ಯ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚಿರುವುದು ನೀವು ಗಮನಿಸಬಹುದು.
ಜೂನ್ 6 ರಂದು ಶೇರ್ ಮಾಡಲಾದ ಈ ಪೋಸ್ಟ್ ಈವರೆಗೆ ಏಳು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು, ಇಂತಹ ಆಯಪ್ ಆಧಾರಿತ ಅಪ್ಲಿಕೇಶನ್ಗಳು ಹೆಚ್ಚುವರಿ ದರವನ್ನು ವಸೂಲಿ ಮಾಡುತ್ತಿದೆ. ಆದರೆ ಅನಿವಾರ್ಯ ಕಾರಣಕ್ಕೆ ಎಷ್ಟು ದರವನ್ನು ತೋರಿಸುತ್ತದೆ ಅದನ್ನು ಕೊಟ್ಟು ಸುಮ್ಮನಾಗುತ್ತೇವೆ ಎಂದಿದ್ದಾರೆ. ಮತ್ತೊಬ್ಬರು, ಇತ್ತೀಚೆಗಿನ ದಿನಗಳಲ್ಲಿ ನಾನು ಆಟೋದಲ್ಲಿ ಹೋಗುತ್ತಿಲ್ಲ, ಏಕೆಂದರೆ ಆಟೋ ಬೆಲೆಗಳು ಎಸಿಯಿಲ್ಲದ ಕ್ಯಾಬ್ ಬೆಲೆಗಿಂತ ಹೆಚ್ಚಾಗಿದೆ. ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಓಲಾ ಊಬರ್ ಬಳಸುವುದನ್ನು ನಿಲ್ಲಿಸಿ, ಇದು ಜನರಿಂದ ಹೆಚ್ಚುವರಿ ಹಣ ಸುಲಿಗೆ ಮಾಡುತ್ತಿದೆ ಎಂದಿದ್ದಾರೆ.
