ಶಿವಮೊಗ್ಗದಲ್ಲಿ ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯ ಭೀಕರ ಕೊಲೆ: ಮೂಢನಂಬಿಕೆಯ ಭೀಕರ ಅಂತ್ಯ!

ಶಿವಮೊಗ್ಗ: ದೆವ್ವ ಬಿಡಿಸುವುದಾಗಿ ಹೇಳಿ ಮಹಿಳೆಯೊಬ್ಬರನ್ನು ಮನಸೋ ಇಚ್ಛೆ ಥಳಿಸಿ ಕೊಂದಿರುವ ಘಟನೆ ಹೊಳೆಹೊನ್ನೂರು ಸಮೀಪದ ಜಂಬರಗಟ್ಟೆಯಲ್ಲಿ ರಾತ್ರಿ ನಡೆದಿದೆ.

ಹೊಸ ಜಂಬರಘಟ್ಟೆ ಗ್ರಾಮದ ಗೀತಮ್ಮ (55) ಮೃತ ಮಹಿಳೆ. ಕಳೆದ 15 ದಿನಗಳಿಂದ ಅಸ್ವಸ್ಥರಾಗಿದ್ದ ಗೀತಮ್ಮ ಅವರನ್ನು ಅವರ ಮಗ ಸಂಜಯ್, ಆಶಾ (45) ಎಂಬ ಮಹಿಳೆಯ ಬಳಿಗೆ ಕರೆದೊಯ್ದಿದ್ದಾರೆ.
ಮಹಿಳೆ ಆ ಪ್ರದೇಶದಲ್ಲಿ ಭೂತ ಬಿಡಿಸುವ ಕೆಲಸ ಮಾಡುತ್ತಾಳೆಂದು ಹೆಸರುವಾಸಿಯಾಗಿದ್ದಳು ಎನ್ನಲಾಗಿದೆ. ಗೀತಮ್ಮಗೆ ದೆವ್ವ ಹಿಡಿದಿದೆ ಎಂದು ಆಶಾ ಹೇಳಿಕೊಂಡಿದ್ದು, ಆರೋಪಿ ಮೃತ ಗೀತಮ್ಮಳನ್ನು ಭಾನುವಾರ ರಾತ್ರಿ 9.30ರಿಂದ ಸೋಮವಾರ ಬೆಳಗಿನ ಜಾವ 1.30 ರವರೆಗೂ ಹಳೇ ಜಂಭರಘಟ್ಟೆ ಚೌಡಮ್ಮನ ದೇವಸ್ಥಾನದವರೆಗೂ ದೆವ್ವ ಬಿಟ್ಟಿಲ್ಲ ಎಂದು ಹೊಡೆದುಕೊಂಡು ಬಂದಿದ್ದಾಳೆ.

ತಲೆ ಮೇಲೆ ಕಲ್ಲು ಹೊರಿಸಿ ಮರವೊಂದರ ಕೆಳಗೆ ಪೂಜೆ ಮಾಡಿದ ಕೆಲ ಹೊತ್ತಲ್ಲೆ ಗೀತಮ್ಮಳ ಕೂಗಾಡಲು ಶುರು ಮಾಡಿದ್ದಾರೆ. ಬಳಿಕ ಕಾಲುವೆಯಲ್ಲಿದ್ದ ತಣ್ಣೀರೆರಚಿದ್ದಾರೆ. ಈ ವೇಳೆ ಗೀತಮ್ಮ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಬಳಿಕ ದೆವ್ವ ಬಿಟ್ಟಿದೆ. ಮನೆಗೆ ಕರೆದುಕೊಂಡು ಹೋಗು ಎಂದು ಸೂಚಿಸಿದ್ದಾಳೆ.
ಮನೆಗೆ ಹೋದ ಬಳಿಕವೂ ಗೀತಮ್ಮ ಅವರಿಗೆ ಪ್ರಜ್ಞೆ ಬಂದಿಲ್ಲ. ನಂತರ ಹೊಳೆಹೊನ್ನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಈ ವೇಳೆ ಮಹಿಳೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆಶಾ, ಆಕೆಯ ಪತಿ ಸಂತೋಷ್ ಮತ್ತು ಗೀತಮ್ಮ ಅವರ ಮಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
