6 ವರ್ಷದ ಬಾಲಕಿಯ ವಿವಾಹಕ್ಕೆ ಯತ್ನ -ತಾಲಿಬಾನ್ ನಿಂದ 9 ವರ್ಷ ವರೆಗೆ ನಿಷೇಧ

ಜಾಗತಿಕ ಮಟ್ಟದಲ್ಲಿ ಮಹಿಳಾ ಶೋಷಣೆ ತಡೆಗಟ್ಟುವ ಹಿನ್ನೆಲೆಯಲ್ಲಿ ಬಾಲ್ಯವಿವಾಹ ತಡೆಗೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಇಲ್ಲೊಬ್ಬ ಮುಸ್ಲಿಂ ಸಮುದಾಯದ ವ್ಯಕ್ತಿ ಬಹುಪತ್ನಿತ್ವ ಮತ್ತು ಬಾಲ್ಯ ವಿವಾಹ ಪದ್ದತಿಯನ್ನು ಅನುಸರಿತ್ತಾ 6 ವರ್ಷದ ಎಳೆಯ ಬಾಲಕಿಯನ್ನು ಮದುವೆಯಾಗಲು ಮುಂದಾಗಿದ್ದಾನೆ.

ಇದನ್ನು ಸ್ವತಃ ತಾಲಿಬಾನ್ ಸರ್ಕಾರ ತಡೆದಿದ್ದು, ಬಾಲಕಿಗೆ 9 ವರ್ಷವಾಗುವವರೆಗೆ ಮದುವೆ ಮಾಡಿಕೊಳ್ಳುವುದನ್ನು ಮುಂದೂಡುವಂತೆ ಸೂಚನೆ ನೀಡಿದೆ.
ಬಾಲ್ಯ ವಿವಾಹವು ಜಗತ್ತಿನಾದ್ಯಂತ ಹಲವು ಸಮುದಾಯಗಳಲ್ಲಿ ಅಸ್ತಿತ್ವದಲ್ಲಿದೆ. ಆದರೆ, ಶಿಕ್ಷಣ ಮತ್ತು ಜೀವನದಲ್ಲಿನ ಪ್ರಗತಿಯಿಂದಾಗಿ ಬಾಲ್ಯ ವಿವಾಹ ತಪ್ಪು ಮತ್ತು ವಿವಾಹಕ್ಕೆ ವಯಸ್ಸಿನ ಮಿತಿಯನ್ನು ನಿಗದಿಪಡಿಸಬೇಕೆಂಬ ಬೇಡಿಕೆ ಬಲವಾಗಿದೆ. ಹೀಗಾಗಿ, ಜಗತ್ತಿನಾದ್ಯಂತ ವಿವಾಹದ ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾಗಿದೆ. ಆದರೆ, ಇಂದಿಗೂ ಯುಕೆ ಮತ್ತು ಯುಎಸ್‌ಎಗಳಲ್ಲಿ ಕಿಶೋರ ವಿವಾಹಗಳು (ಟೀನೇಜ್ ಮ್ಯಾರೇಜ್) ನಡೆಯುತ್ತಿವೆ ಎಂದು ವರದಿಗಳು ಬಂದಿವೆ.
ಇನ್ನು ತಾಲಿಬಾನ್ ಆಳ್ವಿಕೆಯಲ್ಲಿರುವ ಅಫ್ಘಾನಿಸ್ತಾನ ರಾಷ್ಟ್ರದಲ್ಲಿಯೂ ಬಾಲ್ಯ ವಿವಾಹಗಳು ಇಂದಿಗೂ ನಡೆಯುತ್ತಿವೆ. ಈ ಮಧ್ಯೆ, 6 ವರ್ಷದ ಚಿಕ್ಕ ಬಾಲಕಿಯನ್ನು 45 ವರ್ಷದ ವ್ಯಕ್ತಿ ಮದುವೆಯಾಗಲು ಯತ್ನಿಸಿರುವುದನ್ನು ತಾಲಿಬಾನ್ ತಡೆದಿದೆ ಎಂಬ ಸುದ್ದಿ ಹೊರಬಿದ್ದಿದೆ. ಈ ಹುಡುಗಿಗೆ 9 ವರ್ಷ ತುಂಬುವವರೆಗೂ ಮದುವೆ ಮಾಡಿಕೊಳ್ಳುವಂತಿಲ್ಲ ಎಂದು ತಾಲಿಬಾನ್ ಸೂಚಿಸಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

ತೀವ್ರ ಬಡತನದಲ್ಲಿರುವ ಹುಡುಗಿಯ ಕುಟುಂಬವು ಹಣಕ್ಕಾಗಿ ಈ ಚಿಕ್ಕ ಬಾಲಕಿಯನ್ನು ಮಾರಾಟ ಮಾಡಿದೆ. ಈ ಹಿನ್ನೆಲೆಯಲ್ಲಿ 45 ವರ್ಷದ ವ್ಯಕ್ತಿ ತಾನು ಖರೀದಿ ಮಾಡಿದ ಪುಟ್ಟ ಬಾಲಕಿಯನ್ನು ಮದುವೆ ಮಾಡಿಕೊಳ್ಳುವುದಕ್ಕೆ ಮುಂದಾಗಿದ್ದನು ಎಂದು ವರದಿಗಳು ತಿಳಿಸಿವೆ. ಈಗಾಗಲೇ 45 ವರ್ಷದ ವ್ಯಕ್ತಿಗೆ ಇಬ್ಬರು ಹೆಂಡತಿಯರು ಇದ್ದಾರೆ ಎಂದು ಅಮು ಟಿವಿ ವರದಿ ಮಾಡಿದೆ. ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯದಲ್ಲಿ ಕಳೆದ ಶುಕ್ರವಾರ ವಿವಾಹವನ್ನು ನಿಗದಿಪಡಿಸಲಾಗಿತ್ತು. ಆದರೆ, ಮಾಹಿತಿ ತಿಳಿದ ತಾಲಿಬಾನ್ ತಂಡವು ವಿವಾಹವನ್ನು ನಡೆಯಲು ಬಿಡಲಿಲ್ಲ. ಹುಡುಗಿಗೆ ಕೇವಲ 6 ವರ್ಷವಾಗಿದೆ. ಅವಳಿಗೆ 9 ವರ್ಷ ತುಂಬುವವರೆಗೂ ಮದುವೆ ಮಾಡಿಕೊಳ್ಳುವಂತಿಲ್ಲ ಎಂದು ತಾಲಿಬಾನ್ ಸೂಚಿಸಿದೆ.
ಹುಡುಗಿ ಮತ್ತು 45 ವರ್ಷದ ವ್ಯಕ್ತಿಯನ್ನು ಬಂಧಿಸಿದ ತಾಲಿಬಾನ್ ತಂಡವು ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಲ್ಲ. ಹುಡುಗಿಯನ್ನು ಮನೆಗೆ ಕಳುಹಿಸಿದ ತಾಲಿಬಾನ್ ಪಡೆ, 45 ವರ್ಷದ ವ್ಯಕ್ತಿಗೆ ಹುಡುಗಿಗೆ ಒಂಬತ್ತು ವರ್ಷ ತುಂಬುವವರೆಗೂ ಕಾಯುವಂತೆ ಹೇಳಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಕಳೆದ ವರ್ಷವೂ ಇದೇ ರೀತಿಯ ಪ್ರಕರಣವೊಂದು ಅಫ್ಘಾನಿಸ್ತಾನದಿಂದ ವರದಿಯಾಗಿತ್ತು. 2021 ರಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ತಾಲಿಬಾನ್ ಹೆಣ್ಣು ಮಕ್ಕಳ ಶಿಕ್ಷಣವನ್ನು ನಿಷೇಧಿಸಿದ ನಂತರ ಅಫ್ಘಾನಿಸ್ತಾನದ ಬಾಲ್ಯ ವಿವಾಹಗಳಲ್ಲಿ ಶೇ.25ರಷ್ಟು ಏರಿಕೆಯಾಗಿದೆ ಎಂದು ಈ ಹಿಂದೆ ವರದಿಗಳು ಬಂದಿದ್ದವು. ಇದೀಗ ಅಪಘಾನಿಸ್ತಾನ ದೇಶದ ಜನನ ಪ್ರಮಾಣದಲ್ಲಿ ಶೇ.45 ರಷ್ಟು ಏರಿಕೆಯಾಗಿದೆ ಎಂಬುದೂ ಆತಂಕಕಾರಿ ವಿಚಾರವಾಗಿದೆ.
