ನಂಬರ್ ಪ್ಲೇಟ್‌ನಲ್ಲಿ ‘ಮಿಸ್ಟರ್ ಬಾಸ್’ ಶೋಕಿ: ಟ್ರಾಫಿಕ್ ಪೊಲೀಸರಿಂದ ದಂಡ

ಬೆಂಗಳೂರು: ವಾಹನ ರಿಜಿಸ್ಟ್ರೇಶನ್ ನಂಬರ್ ಪ್ಲೇಟ್ ಹೇಗಿರಬೇಕು ಅನ್ನೋದಕ್ಕೂ ನಿಯಮವಿದೆ. ರಿಜಿಸ್ಟ್ರೇಶನ್ ಪ್ಲೇಟ್ ಮೇಲೆ ಬೇಕಾಬಿಟ್ಟಿ ಬರೆಯುವಂತಿಲ್ಲ, ನಂಬರ್ ಬಿಟ್ಟು ಇನ್ನೇನು ಇರುವಂತಿಲ್ಲ. ಆದರೆ ಕೆಲವರು ಈ ನಿಯಮ ಉಲ್ಲಂಘಿಸುತ್ತಾರೆ. ನಂಬರ್ ಪ್ಲೇಟ್ ಮೇಲೆ ಅಥವಾ ಕಳಗೆ ಆತ್ಮೀಯರು, ಆಪ್ತರು, ಪೋಷಕರು, ಗೆಳತಿ ಹೀಗೆ ಹಲವರ ಹೆಸರು ಸೇರಿದಂತೆ ಹಲವು ಚಿಹ್ನೆಗಳನ್ನು ಬಳಸುತ್ತಾರೆ.

ಇದು ನಿಯಮಕ್ಕೆ ವಿರುದ್ಧವಾಗಿದೆ. ಇನ್ನೂ ಕೆಲವೂ ನಂಬರ್ ಪ್ಲೇಟ್ ಜಾಗದಲ್ಲಿ ಬಾಸ್, ಕಿಂಗ್ ಎಂದೆಲ್ಲಾ ಬರದು ಶೋಕಿ ಮಾಡುತ್ತಾರೆ. ಹೀಗೆ ಶೋಕಿ ಮಾಡಿದ ಹ್ಯುಂಡೈ ಕ್ರೆಟಾ ಮಾಲೀಕನಿಗೆ ಬೆಂಗಳೂರು ಪೊಲೀಸರು ದುಬಾರಿ ದಂಡ ಹಾಕಿದ್ದಾರೆ. ಇಷ್ಟೇ ಅಲ್ಲ ಸರ್ಪ್ರೈಸ್ ಕೊಟ್ಟಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್
ಹ್ಯುಂಡೈ ಕ್ರೆಟಾ ಕಾರಿನ ಈ ನಂಬರ್ ಪ್ಲೇಟ್ ಕುರಿತು ಬೆಂಗಳೂರಿಗರೊಬ್ಬರು ಟ್ವೀಟ್ ಮಾಡಿದ್ದರು. ಕಾರಿನ ಫೋಟೋ ಹಾಕಿ ಪೋಸ್ಟ್ ಮಾಡಿದ್ದರು. ರಾಜಾಜಿನಗರದ 17ನೇ ಮುಖ್ಯರಸ್ತೆಯಲ್ಲಿ ಪತ್ತೆಯಾದ ಕಾರಿನ ನಂಬರ್ ಪ್ಲೇಟ್ ತುಂಬಾ ಸ್ಟೈಲಿಶ್ ಆಗಿ ಮಿಸ್ಟರ್ ಬಾಸ್ ಎಂದು ಬರೆಯಲಾಗಿದೆ. ನೋಡಲು ತುಂಬಾ ಕೂಲ್ ಕಾಣುತ್ತಿದೆ.ಆದರೆ ಇದು ಮೋಟಾರು ವಾಹನ ನಿಯಮ ಉಲ್ಲಂಘನೆ. ರಾಜಾಜಿನಗರ ಟ್ರಾಫಿಕ್ ಪೊಲೀಸರೇ, ಈ ಮಿಸ್ಟರ್ ಬಾಸ್‌ಗೆ ರಿಯಲ್ ಬಾಸ್ ನಿಯಮ ಹೇಳಿಕೊಡಿ ಎಂದು ಪೋಸ್ಟ್ ಮಾಡಿದ್ದರು.
ಪೊಲೀಸರ ಟ್ಯಾಗ್ ಮಾಡಿ ಪೋಸ್ಟ್
ಸೋಶಿಯಲ್ ಮೀಡಿಯಾದಲ್ಲಿ ಕಾರಿನ ಮಾಹಿತಿ, ಸ್ಥಳ, ಮೋಟಾರು ವಾಹನ ನಿಯಮ ಉಲ್ಲಂಘನೆ ಎಲ್ಲಾ ಮಾಹಿತಿ ನೀಡಲಾಗಿತ್ತು. ಬಳಿಕ ರಾಜಾಜಿನಗರ ಟ್ರಾಫಿಕ್ ಪೊಲೀಸರಿಗೆ ಟ್ಯಾಗ್ ಮಾಡಲಾಗಿತ್ತು. ರಾರಾಜಿನಗರ ಟ್ರಾಫಿಕ್ ಪೊಲೀಸ್ ಸೋಶಿಯಲ್ ಮೀಡಿಯಾ ವಿಭಾಗ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿತ್ತು.
ಹ್ಯುಂಡೈ ಕ್ರೆಟಾ ಪತ್ತೆ ಹಚ್ಚಿದ ಪೊಲೀಸರು, ಮಾಲೀಕನಿಗೆ ನಿಯಮ ಉಲ್ಲಂಘನೆಗೆ ದಂಡ ವಿಧಿಸಿದ್ದಾರೆ . ಇಷ್ಟೇ ಅಲ್ಲ ಮಿಸ್ಟರ್ ಬಾಸ್ ನಂಬರ್ ಪ್ಲೇಟ್ ತೆಗೆಸಿದ್ದಾರೆ. ಕಾನೂನು ಪ್ರಕಾರ ಮಾನ್ಯವಾಗಿರುವ ನಂಬರ್ ಪ್ಲೇಟ್ ಹಾಕವಂತೆ ಸೂಚಿಸಿದ್ದಾರೆ. ಈ ಕುರಿತು ರಾರಾಜಿನಗರ ಪೊಲೀಸ್ ಎಕ್ಸ್ ಖಾತೆ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಯಾವತ್ತೂ ನಿಯಮವೇ ರಿಯಲ್ ಬಾಸ್ ಎಂದು ನಾವು ಹೇಳಿಕೊಟ್ಟಿದ್ದೇವೆ. ಟ್ರಾಫಿಕ್ ನಿಯಮ ಪಾಲಿಸಿ ಎಂದು ಪೊಲೀಸರು ಪ್ರತಿಕ್ರಿಯಿಸಿದ್ದಾರೆ.
ತಕ್ಷಣದ ಕ್ರಮಕ್ಕೆ ಭಾರಿ ಮೆಚ್ಚುಗೆ
ಬೆಂಗಳೂರಿಗನ ಪೋಸ್ಟ್ ಮಾಡಿದ ಕೆಲವೇ ಕ್ಷಣದಲ್ಲಿ ರಾಜಾಜಿನಗರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ತಕ್ಷಣವೇ ಕ್ರಮ ಕೈಗೊಂಡಿರುವ ಪೊಲೀಸರು ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದರ ಜೊತೆಗೆ ಈ ನಿಯಮ ಉಲ್ಲಂಘನೆಯನ್ನು ಗಮನಕ್ಕೆ ತಂದ ಖಾತೆಗೂ ಧನ್ಯವಾದ ಹೇಳಿದ್ದಾರೆ.
