ಕಾಣೆಯಾಗಿದ್ದ ವ್ಯಕ್ತಿಯ ಕೊಲೆ ಪ್ರಕರಣ ಭೇದಿಸಿದ ಪೊಲೀಸರು, ಮೂವರ ಬಂಧನ!

ಕಲಬುರಗಿ : ವ್ಯಕ್ತಿಯೊಬ್ಬ ಕಾಣೆಯಾದ ಪ್ರಕರಣ ದಾಖಲಿಸಿಕೊಂಡ ಸ್ಟೇಷನ್ ಬಝಾರ್ ಪೊಲೀಸರು, ಕ್ಷೀಪ್ರಗತಿಯಲ್ಲಿ ಪ್ರಕರಣವನ್ನು ಭೇದಿಸಿ ಇದೀಗ ಮೂವರು ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

ಈ ಕುರಿತು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಅವರು, ಗಣೇಶ್ ನಗರದ ನಿವಾಸಿ ರಾಘವೇಂದ್ರ ನಾಯಕ(39) ಕೊಲೆಯಾದ ವ್ಯಕ್ತಿಯಾಗಿದ್ದು, ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ವಡ್ಡರಗಲ್ಲಿಯ ಕೃಷ್ಣ ನಗರದ ನಿವಾಸಿ ಗುರುರಾಜ್ ಶೇಷಪ್ಪ ನೆಲೋಗಿ(36), ಹೀರಾಪುರ ಸಮೀಪ ನಿಸರ್ಗ ಕಾಲೋನಿಯ ಅಶ್ವಿನಿ ಅಲಿಯಾಸ್ ತನು ರಾಜಶೇಖರ್ ಮಲ್ಲಬಾದ್(26) ಮತ್ತು ಹೊರವಲಯದ ಕಪನೂರ್ ಗ್ರಾಮದ ಲಕ್ಷ್ಮೀಕಾಂತ್ ಮಾಲಿಪಾಟೀಲ್(28) ಎಂಬಾತರನ್ನು ಬಂಧಿಸಲಾಗಿದೆ.
ಇನ್ನುಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ತಿಳಿಸಿದರು.

ನಾಪತ್ತೆ ಪ್ರಕರಣದ ತನಿಖೆಯಿಂದ ಕೊಲೆ ಪ್ರಕರಣ ಬಯಲಿಗೆ :
ನಗರದ ಹೋಟೆಲ್ ಮತ್ತಿತರ ಸಣ್ಣ-ಪುಟ್ಟ ಕೆಲಸ ಮಾಡುತ್ತಿದ್ದ ರಾಘವೇಂದ್ರ ಎಂಬವರು ಆಗಾಗ 8-10 ದಿನಗಳು ಮನೆ ಬಿಟ್ಟು ಹೋಗಿ, ಬಳಿಕ ವಾಪಸ್ ಬರುತ್ತಿದ್ದರು. ಅಂತೆಯೇ, 2025ರ ಮಾರ್ಚ್ 12ರ ಬೆಳಿಗ್ಗೆ ಕೆಲಸಕ್ಕೆ ಹೊಗುವುದಾಗಿ ಮನೆಯಿಂದ ಹೊರ ಹೋದವರು ಮತ್ತೆ ಮರಳಲಿಲ್ಲ. ಪತ್ನಿ ಕೂಡ ಕೆಲವು ದಿನಗಳ ಬಳಿಕ ಬರಬಹುದು ಎಂದುಕೊಂಡು ಸುಮ್ಮನೆ ಇದ್ದರು. ಎರಡು ತಿಂಗಳು ಕಳೆದರೂ ಎಲ್ಲಾ ಕಡೆ ಹುಡುಕಿದರೂ ಮನೆಗೆ ವಾಪಸ್ ಬಾರದೆ ಇದ್ದಾಗ ಮೇ.25ರಂದು ಗಂಡ ಕಾಣೆಯಾದ ಬಗ್ಗೆ ಇಲ್ಲಿನ ಸ್ಟೇಷನ್ ಬಝಾರ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಸ್ಟೇಷನ್ ಬಝಾರ್ ಪೊಲೀಸರು, ಕಾಣೆಯಾದ ರಾಘವೇಂದ್ರ ಕೊಲೆಯಾಗಿ, ಆತನನ್ನು ದುಷ್ಕರ್ಮಿಗಳು ಕೃಷ್ಣಾ ನದಿಗೆ ಎಸೆದಿದ್ದು ತಿಳಿದುಬಂದಿದೆ. ಬಳಿಕ ಇದರ ಬಗ್ಗೆ ಪತ್ನಿ ಸುರೇಖಾ ಅವರನ್ನು ಠಾಣೆಗೆ ಕರೆಯಿಸಿಕೊಂಡ ಕೊಲೆ ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ಸ್ಮಶಾನದಲ್ಲಿ ಕೊಲೆಗೈದು ನದಿಗೆ ಎಸೆದ ಆರೋಪಿಗಳು:
ಕೊಲೆಯಾದ ರಾಘವೇಂದ್ರ ಮತ್ತು ಅಶ್ವಿನಿ ಇಬ್ಬರೂ ʼಲಿವಿಂಗ್ ಟುಗೆದರ್ ರಿಲೇಶನ್ ಶಿಪ್ʼ ನಲ್ಲಿದ್ದರು. ಅಶ್ವಿನಿ ಅಲಿಯಾಸ್ ತನು, ರಾಘವೇಂದ್ರನನ್ನು ಬಿಟ್ಟು ಗುರುರಾಜ್ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದರು ಎನ್ನಲಾಗಿದೆ.
ಈ ವೇಳೆ ರಾಘವೇಂದ್ರನಿಗೆ ಇಬ್ಬರ ಸಂಬಂಧದ ವಿಚಾರ ಗೊತ್ತಾಗಿದ್ದು, ಗುರುರಾಜ್ನನ್ನು ಬಿಟ್ಟು ಬರುವಂತೆ ಅಶ್ವಿನಿಗೆ ಹೇಳಿದ್ದನು. ಈ ಬಗ್ಗೆ ಅಶ್ವಿನಿ, ಗುರುರಾಜ್ಗೆ ತಿಳಿಸಿದ್ದರು. ಗುರುರಾಜ್ ಮತ್ತು ಆತನ ಸಂಗಡಿಗರು ಮಾರ್ಚ್ 12ರಂದು ನಗರದ ಸೂಪರ್ ಮಾರ್ಕೆಟ್ ಲಾಡ್ಜ್ ಒಂದರಿಂದ ರಾಘವೇಂದ್ರ ಅವರನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು, ಕೃಷ್ಣ ನಗರದ ಸ್ಮಶಾನಕ್ಕೆ ಕರೆದೊಯ್ದರು ಎನ್ನಲಾಗಿದೆ.
ಬಳಿಕ ಸ್ಮಶಾನದಲ್ಲಿ ರಾಘವೇಂದ್ರ ಅವರ ಕಪಾಳಕ್ಕೆ ಅಶ್ವಿನಿ ಹೊಡೆದರು. ಆ ಬಳಿಕ ಗುರುರಾಜ್ ಹಾಗೂ ಆತನ ಸಂಗಡಿಗರು ಬಡಿಗೆ, ಮತ್ತಿತರಗಳಿಂದ ರಾಘವೇಂದ್ರ ಮೇಲೆ ಹಲ್ಲೆ ನಡೆಸಿದ್ದರಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ನಂತರ ಕೊಲೆಯಾದ ರಾಘವೇಂದ್ರನ ಮೃತದೇಹವನ್ನು ರಾಯಚೂರು ಜಿಲ್ಲೆಯ ಶಕ್ತಿ ನಗರದ ಕೃಷ್ಣ ನದಿಯ ಬ್ರಿಡ್ಜ್ ಮೇಲಿಂದ ಎಸೆದಿದ್ದಾರೆ. ಅಲ್ಲಿ ಮೃತದೇಹ ಪತ್ತೆಯಾಗಿರುವ ಕಾರಣ ಸಮೀಪದ ಶಕ್ತಿ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ಎಂದು ದಾಖಲಾಗಿರುತ್ತದೆ. ಈ ಬಗ್ಗೆ ಸ್ಟೇಷನ್ ಬಝಾರ್ ಠಾಣೆಯ ಪೊಲೀಸರು ತನಿಖೆ ನಡೆಸಿದಾಗ ರಾಘವೇಂದ್ರನ ಮೃತದೇಹ ಎಂದು ಗೊತ್ತಾಗಿದೆ ಎಂದು ಪೊಲೀಸ್ ಕಮಿಷನರ್ ಡಾ.ಶರಣಪ್ಪ ಎಸ್.ಡಿ ಅವರು ತಿಳಿಸಿದ್ದಾರೆ.
