ಬ್ರೆಝಿಲ್‌ನಲ್ಲಿ ವಿಚಿತ್ರ ಘಟನೆ- ಒಂದೇ ಗರ್ಭದಲ್ಲಿ ಇಬ್ಬರು ವಿಭಿನ್ನ ತಂದೆಯ ಅವಳಿ ಮಕ್ಕಳು

ಬ್ರೆಝಿಲ್:ಒಂದೇ ಗರ್ಭದಲ್ಲಿ ಜನಿಸಿದ ಅವಳಿ ಮಕ್ಕಳಿಗೆ ಇಬ್ಬರು ಬೇರೆ ಬೇರೆ ತಂದೆಯರಿರಲು ಸಾಧ್ಯವೇ? ಇದು ಯಾವುದೋ ಸಿನೆಮಾ ಕಥೆಯಲ್ಲ, ಬದಲಿಗೆ ಬ್ರೆಝಿಲ್‌ನಲ್ಲಿ ನಡೆದ ನೈಜ ಘಟನೆ. 19 ವರ್ಷದ ಯುವತಿಯೊಬ್ಬಳು ಇಂತಹದ್ದೊಂದು ವಿರಳಾತಿವಿರಳ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಈ ಘಟನೆ ವೈದ್ಯಕೀಯ ಲೋಕವನ್ನೇ ಬೆರಗುಗೊಳಿಸಿದೆ.

ಬ್ರೆಝಿಲ್‌ನ ಗೊಯಾಸ್ ಪ್ರಾಂತ್ಯದ ಮಿನೆರಿಯೊಸ್ ನಗರದ ನಿವಾಸಿಯಾಗಿರುವ 19 ವರ್ಷದ ಯುವತಿ, ತಾನು ಒಂದೇ ದಿನ ಇಬ್ಬರು ವಿಭಿನ್ನ ಪುರುಷರೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದಾಗಿ ಹೇಳಿಕೊಂಡಿದ್ದಾರೆ. ‘ಡೈಲಿ ಮೇಲ್’ ವರದಿಯ ಪ್ರಕಾರ, ಈ ಘಟನೆಯ ನಂತರ ಗರ್ಭಿಣಿಯಾದಾಗ, ತನ್ನ ಮಕ್ಕಳ ನಿಜವಾದ ತಂದೆ ಯಾರೆಂಬುದನ್ನು ಖಚಿತಪಡಿಸಿಕೊಳ್ಳಲು ಡಿಎನ್‌ಎ ಪರೀಕ್ಷೆ ನಡೆಸಲು ನಿರ್ಧರಿಸಿದ್ದರು. ಆದರೆ ಡಿಎನ್‌ಎ ಪರೀಕ್ಷೆಯ ವರದಿ ಬಂದಾಗ ಸ್ವತಃ ವೈದ್ಯರೇ ಒಂದು ಕ್ಷಣ ದಂಗಾಗಿ ಹೋಗಿದ್ದರು. ಕಾರಣ, ಅವಳಿ ಮಕ್ಕಳ ತಂದೆಯರು ಬೇರೆ ಬೇರೆಯಾಗಿದ್ದರು!

ಇದು ವೈದ್ಯಕೀಯವಾಗಿ ಹೇಗೆ ಸಾಧ್ಯ?
ವೈದ್ಯಕೀಯ ಪರಿಭಾಷೆಯಲ್ಲಿ ಈ ವಿದ್ಯಮಾನವನ್ನು ‘ಹೆಟೆರೊಪೇರೆಂಟಲ್ ಸೂಪರ್‌ಫೆಕಂಡೇಶನ್’ (Heteroparental Superfetation) ಎಂದು ಕರೆಯಲಾಗುತ್ತದೆ. ಯುವತಿಗೆ ಚಿಕಿತ್ಸೆ ನೀಡಿದ ವೈದ್ಯ ತುಲಿಯೊ ಜಾರ್ಜ್ ಫ್ರಾಂಕೊ ಅವರ ಪ್ರಕಾರ, ಇದು ಅತ್ಯಂತ ಅಪರೂಪದ ಘಟನೆಯಾಗಿದೆ.
“ಮಹಿಳೆಯ ಅಂಡಾಶಯದಿಂದ ಒಂದೇ ಋತುಚಕ್ರದಲ್ಲಿ ಬಿಡುಗಡೆಯಾದ ಎರಡು ಪ್ರತ್ಯೇಕ ಅಂಡಾಣುಗಳು, ಇಬ್ಬರು ವಿಭಿನ್ನ ಪುರುಷರ ವೀರ್ಯಾಣುಗಳಿಂದ ಫಲೀಕರಣಗೊಂಡಾಗ (fertilized) ಈ ರೀತಿ ಸಂಭವಿಸುತ್ತದೆ. ಈ ಶಿಶುಗಳು ಪ್ರತ್ಯೇಕ ಜರಾಯು ಅಥವಾ ಪ್ಲಾಸೆಂಟಾದಲ್ಲಿ ಬೆಳೆದಿವೆ” ಎಂದು ಡಾ. ಫ್ರಾಂಕೊ ವಿವರಿಸಿದ್ದಾರೆ. ಅವರ ಪ್ರಕಾರ, ಇದು ಎಷ್ಟೊಂದು ವಿರಳವೆಂದರೆ, ಇಡೀ ವಿಶ್ವದಲ್ಲಿ ಈವರೆಗೆ ಕೇವಲ 20 ಇಂತಹ ಪ್ರಕರಣಗಳು ಮಾತ್ರ ದಾಖಲಾಗಿವೆ.
ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಜನನದ ನಂತರ ಎರಡೂ ಮಕ್ಕಳು ಆರೋಗ್ಯವಾಗಿದ್ದು, ಈಗ ಅವರಿಗೆ 16 ತಿಂಗಳು ತುಂಬಿದೆ. ಸಮಾಧಾನದ ವಿಷಯವೆಂದರೆ, ಇಬ್ಬರು ತಂದೆಯರಲ್ಲಿ ಒಬ್ಬರು ಎರಡೂ ಮಕ್ಕಳ ಪಾಲನೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.