ಸಮೀಕ್ಷೆಗೆ ಸ್ಟಿಕರ್ ಅಂಟಿಸಲು ಕೊಂಟ್ಯಾಂತರ ರೂ ಖರ್ಚು ಮಾಡಿತ್ತಾ ಸರ್ಕಾರ?

ಬೆಂಗಳೂರು: ಎಸ್ಸಿ ಒಳಮೀಸಲಾತಿ ಸರ್ವೆಗೆ (Caste Census Survey) ರಾಜ್ಯ ಸರ್ಕಾರ ಆದೇಶಿಸಿದೆ. ಸಮೀಕ್ಷೆ ನಡೆಸಲು ಬಿಬಿಎಂಪಿ (BBMP) ಸಿಬ್ಬಂದಿ ಫೀಲ್ಡ್ಗೆ ಇಳಿದಿದ್ದಾರೆ. ಸಮೀಕ್ಷೆ ಮುಗಿಸುವ ಭರದಲ್ಲಿ ಎಡವಟ್ಟಿನ ಮೇಲೆ ಎಡವಟ್ಟು ಮಾಡುತ್ತಿದ್ದಾರೆ. ಬೇಕಾಬಿಟ್ಟಿ ಮನೆಬಾಗಿಲಿಗೆ ಸ್ಟಿಕ್ಕರ್ ಅಂಟಿಸುತ್ತಿರುವುದಾಗಿ ಆರೋಪಗಳು ಕೇಳಿ ಬಂದಿವೆ. ಈ ಮಧ್ಯೆ ಸಮೀಕ್ಷೆ ಹೆಸರಲ್ಲಿ ಸರ್ಕಾರ ಕೊಟ್ಯಂತರ ರೂ ಹಣ ವ್ಯರ್ಥ ಮಾಡುತ್ತಿದೆ. ಪಾಲಿಕೆ ಮಾಡುತ್ತಿರುವ ದುಂದು ವೆಚ್ಚದ ಪಟ್ಟಿ ಟಿವಿ9ಗೆ ಲಭ್ಯವಾಗಿದ್ದು, ಬರೋಬ್ಬರಿ 3 ಕೋಟಿ 60 ಲಕ್ಷ ರೂ ಖರ್ಚು ಮಾಡಲಾಗಿದೆ.

ಲಕ್ಷ ಲಕ್ಷ ಹಣ ಖರ್ಚು
ರಾಜ್ಯದಲ್ಲಿ ಎಸ್ಸಿ ಒಳಮೀಸಲಾತಿ ಸರ್ವೆಗೆ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಸ್ಟಿಕ್ಕರ್ ಅಂಟಿಸುವುದು, ಜಾಗೃತಿ ಮೂಡಿಸುವ ಹೆಸರಲ್ಲಿ ಪಾಲಿಕೆ ಮೂಲಕ ಲಕ್ಷ ಲಕ್ಷ ಹಣ ಖರ್ಚು ಮಾಡಲಾಗುತ್ತಿದೆ. ಪ್ರತಿ ಮನೆಗೆ ಸ್ಟಿಕ್ಕರ್ ಅಂಟಿಸುವುದಕ್ಕೆ ತಲಾ 5 ರೂ ನಿಗದಿ ಮಾಡಲಾಗಿದೆ. ಒಳಮೀಸಲಾತಿ ಸಮೀಕ್ಷೆ ಜಾಗೃತಿ, ಬೀದಿನಾಟಕಕ್ಕೆ 49.59 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ.

ಇನ್ನು 35 ಲಕ್ಷ ಮನೆಗಳಿಗೆ ಒಂದು ಸ್ಟಿಕ್ಕರ್ನಂತೆ ಒಟ್ಟು 35 ಲಕ್ಷ ಸ್ಟಿಕ್ಕರ್ ಮುದ್ರಣ ಮಾಡಲಾಗಿದೆ. ಒಂದು ಸ್ಟಿಕ್ಕರ್ಗೆ 2 ರೂ., 350000×2= 70 ಲಕ್ಷ, ಇದಕ್ಕೆ ಸೇವಾಶುಲ್ಕ 3.50 ಲಕ್ಷ ರೂ., 13.33 ಲಕ್ಷ ರೂ ಜಿಎಸ್ಟಿ, ಒಂದು ಸ್ಟಿಕ್ಕರ್ಗೆ 2 ರೂ. 47 ಪೈಸೆ, ಅಲ್ಲಿಗೆ ಪಾಲಿಕೆ ಒಟ್ಟು 86 ಲಕ್ಷ 73 ಸಾವಿರ ರೂ ಖರ್ಚು ಮಾಡಿದೆ.
28 ವಿಧಾನ ಸಭಾಕ್ಷೇತ್ರದಲ್ಲಿ ಆಟೋ ಮೂಲಕ ಪ್ರಚಾರಕ್ಕೆ 7 ದಿನಕ್ಕೆ 11 ಲಕ್ಷ 7 ಸಾವಿರ ರೂ, 5 ಲಕ್ಷ ಭಿತ್ತಿಪತ್ರ ಮುದ್ರಣಕ್ಕೆ 5 ಲಕ್ಷ ರೂ., ಸಾಮಾಜಿಕ ಜಾಲತಾಣ, ಯೂಟ್ಯೂಬ್ನಲ್ಲಿ ಜಾಗೃತಿಗೆ 28 ಲಕ್ಷ ರೂ., ಎರಡು ಶಾರ್ಟ್ ಫಿಲ್ಮ್ ತಯಾರಿಗೆ ಕಲಾವಿದರು, ಕ್ಯಾಮರಾ ಮತ್ತು ನಿರ್ದೇಶಕರು ಸೇರಿ ಕೇವಲ 80 ಸೆಕೆಂಡ್ ವಿಡಿಯೋಗೆ 49.56 ಲಕ್ಷ ರೂ ಪಾಲಿಕೆ ಸುರಿದಿದೆ.