ಪೊಲೀಸ್ ಠಾಣೆ ಆವರಣದ ಮರವೇರಿದ ಯುವಕ; ಹೈಡ್ರಾಮಾ ಸೃಷ್ಟಿ!

ಶಿವಮೊಗ್ಗ: ನಗರದ ಕೋಟೆ ಪೊಲೀಸ್ ಠಾಣೆ ಆವರಣದ ಅರಳಿ ಮರವೇರಿ( tree) ಕುಳಿತ ಯುವಕನೊಬ್ಬ ಕೆಳಗಿಳಿಯಲು ನಿರಾಕರಿಸಿ ಹೈಡ್ರಾಮಾ ಸೃಷ್ಟಿಸಿದ ಕುತೂಹಲಕಾರಿ ಘಟನೆ ಶನಿವಾರ ಬೆಳಗ್ಗೆ ನಡೆಯಿತು.

ಲಷ್ಕರ್ ಮೊಹಲ್ಲಾದ ಇಮ್ರಾನ್ (24) ಮರವೇರಿ ಕುಳಿತ್ತಿದ್ದ ಯುವಕ. ಆತನನ್ನು ಮರದಿಂದ ಕೆಳಗಿಳಿಸಲು ಪೊಲೀಸರು ನಡೆಸಿದ ಹರಸಾಹಸ ಅಷ್ಟಿಷ್ಟಲ್ಲ.
ಆದರೂ ಆತ ಮರದಿಂದ ಕೆಳಗಿಳಿಯಲಿಲ್ಲ. ಅಂತಿಮವಾಗಿ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದರು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಅಧಿಕಾರಿ ಮತ್ತು ಸಿಬ್ಬಂದಿ ಇಮ್ರಾನ್‌ನನ್ನುಸತತ ಎರಡು ಗಂಟೆ ಆತನ ಮನವೊಲಿಸಿ ಸುರಕ್ಷಿತವಾಗಿ ಕೆಳಗಿಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದರು.
ಏನಿದು ಘಟನೆ ?
ಯಾವುದೇ ವಿಚಾರಣೆ ಇಲ್ಲದಿದ್ದರೂ ಶನಿವಾರ ಬೆಳಗಿನ ಜಾವ ಕೋಟೆ ಪೊಲೀಸ್ ಠಾಣೆಗೆ ಆಗಮಿಸಿದ್ದ ಲಷ್ಕರ್ ಮೊಹಲ್ಲಾದ ಇಮ್ರಾನ್, ಏಕಾಏಕಿ ಬೃಹತ್ ಅರಳಿ ಮರವೇರಿ ಕುಳಿತುಕೊಂಡಿದ್ದ. ಅದನ್ನು ಗಮನಿಸಿದ ಪೊಲೀಸರು ಕೆಳಗಿಳಿಯುವಂತೆ ಅನೇಕ ಬಾರಿ ಸೂಚಿಸಿದ್ದರು. ಆದರೆ ಪೊಲೀಸರು ನನಗೆ ಹೊಡೆಯುತ್ತಾರೆ. ಮರದಿಂದ ಕೆಳಗಿಳಿದರೆ ನನಗೆ ತೊಂದರೆಯಾಗುತ್ತದೆ. ನನ್ನನ್ನು ಜೈಲಿಗೆ ಕಳುಹಿಸಿ ಎಂದೆಲ್ಲ ಹೇಳಲಾರಂಭಿಸಿದ್ದ.

ಈತನ ಮನವೊಲಿಕೆಗೆ ಪೊಲೀಸರು ಇನ್ನಿಲ್ಲದ ಕಸರತ್ತು ನಡೆಸಿದರು. ಆದರೂ ಆತ ಮರದಿಂದ ಕೆಳಗಿಳಿಯಲೇ ಇಲ್ಲ. ಇದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಅಂತಿಮವಾಗಿ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದರು. ಬೆಳಗಿನ ಜಾವ 5 ಗಂಟೆ ವೇಳೆಗೆ ಆಗಮಿಸಿದ ಅಗ್ನಿಶಾಮಕ ತಂಡ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ, ಯುವಕನ ಮನವೊಲಿಕೆಯ ಕಾರ್ಯ ನಡೆಸಿದರು.
ಅಂತಿಮವಾಗಿ ಬೆಳಗ್ಗೆ 7 ಗಂಟೆಗೆ ಮರಕ್ಕೆ ಏಣಿ ಹಾಕಿ ಸುರಕ್ಷಿತವಾಗಿ ಕೆಳಗಿಳಿಸಿದರು. ಮೇಲ್ನೋಟಕ್ಕೆ ಆತ ಮಾನಸಿಕ ಅಸ್ವಸ್ಥನಂತೆ ಕಂಡುಬರುತ್ತಿದ್ದ. ಯಾವುದೇ ವಿಚಾರಣೆ ಇಲ್ಲದಿದ್ದರೂ ಆತ ಠಾಣೆಗೆ ಬಂದಿದ್ದ. ಯಾವ ಕಾರಣಕ್ಕೆ ಆತ ಬೆಳಗ್ಗೆಯೇ ಬಂದಿದ್ದ ಎಂಬುದು ಅಲ್ಲಿದ್ದ ಪೊಲೀಸರಿಗೂ ಗೊತ್ತಿರಲಿಲ್ಲ. ಸ್ವಲ್ಪ ಸಮಯದ ಬಳಿಕ ಆತ ಏಕಾಏಕಿ ಮರವೇರಿ ಕುಳಿತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
