ಕರಾವಳಿಯಲ್ಲಿ ಕೋಮು ಸಂಘರ್ಷಕ್ಕೆ ಬ್ರೇಕ್: ‘ಸ್ಪೆಷಲ್ ಆಕ್ಷನ್ ಫೋರ್ಸ್’ ರಚನೆ, ಪ್ರಚೋದನಾಕಾರಿ ಪೋಸ್ಟ್ ಹಾಕಿದವನ ಬಂಧನ!

ಮಂಗಳೂರು: ಕರಾವಳಿಯಲ್ಲಿ ಕೋಮು ಸಂಘರ್ಷವನ್ನು ತಡೆಗಟ್ಟಲು ಸ್ಪೆಷಲ್ ಆಯಕ್ಷನ್ ಫೋರ್ಸ್(Special Action Force) ಸ್ಥಾಪಿಸಲಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಸ್ಥಾಪಿಸಲಾದ ಈ ಸಂಸ್ಥೆ ಈಗಾಗಲೇ ಫುಲ್ ಆಕ್ಟಿವ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪ್ರಚೋದನಾಕಾರಿ ಪೋಸ್ಟ್ (Provocative post) ಹಾಕುವವರನ್ನು ಬೆನ್ನಟ್ಟಿ ಬೆಂಡೆತ್ತುತ್ತಿದೆ.

“ರಕ್ತಕ್ಕೆ ರಕ್ತವೇ ಬೇಕು” ಎಂದು ಸ್ಟೇಟಸ್ ಹಾಕಿದವನು ಬಂಧಿಸಿದೆ.
ಓರ್ವನ ಬಂಧನ
ಉಡುಪಿ ಜಿಲ್ಲೆಯ ಕಾರ್ಕಳ, ಇರ್ವತ್ತೂರು ಗ್ರಾಮದ ಆಶಿಕ್ ಎಸ್ ಕೋಟ್ಯಾನ್ ಎಂಬಾತನನ್ನು ಸ್ಪೆಷಲ್ ಆಯಕ್ಷನ್ ಫೋರ್ಸ್ ಬಂಧಿಸಿದೆ. ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ “ನಮಗೆ ಯಾವುದೇ ರೀತಿಯ ಉತ್ತರಗಳು ಬೇಡ ರಕ್ತಕ್ಕೆ ರಕ್ತವೇ ಉತ್ತರವಾಗಬೇಕು”. “ಜೀವಕ್ಕೆ ಜೀವನೇ ಬೇಕು” ಎಂದು ಮಾರಕಾಯುಧಗಳ ಚಿಹ್ನೆ ಬಳಸಿ ಪ್ರಚೋದನಕಾರಿ ಸ್ಟೇಟಸ್ ಹಾಕಿದ್ದ.
ಈ ಹಿನ್ನಲೆ ಆರೋಪಿ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, BNS ಕಲಂ.196, 353(2),351(3) ಯಡಿ ಎಫ್ಐಆರ್ ದಾಖಲಾಗಿದೆ. ಪೊಲೀಸರು ಆರೋಪಿಯನ್ನ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕೋಮುದಳ್ಳುರಿಗೆ ಸಿಲುಕಿದ್ದ ಮಂಗಳೂರು ರಕ್ಷಣೆಗೆ ಇತ್ತೀಚೆಗೆ ಸ್ಪೆಷಲ್ ಆಯಕ್ಷನ್ ಫೋರ್ಸ್ನ ಆಗಮನವಾಗಿತ್ತು. ಆ ಮೂಲಕ ರಾಜ್ಯ ಸರ್ಕಾರ ಕೊನೆಗೂ ಕೊಟ್ಟ ಮಾತಿನಂತೆ ಕೋಮು ಸಂಘರ್ಷದ ನೆಲದಲ್ಲಿ ಹೊಸ ತಂಡವನ್ನು ಹುಟ್ಟುಹಾಕಿತ್ತು. ಸ್ಪೆಷಲ್ ಆಯಕ್ಷನ್ ಫೋರ್ಸ್ ಪೊಲೀಸ್ ಪಡೆ ಮಂಗಳೂರಿನಿಂದ ಅಸ್ತಿತ್ವಕ್ಕೆ ಬಂದಿದ್ದು, ಇದೀಗ ಕಿಡಿಗೇಡಿಗಳ ಹುಟ್ಟಡಗಿಸುತ್ತಿದೆ.
ಕೋಮು ಸಂಘರ್ಷ ನಿಗ್ರಹಕ್ಕೆ ಮಾಡಿರುವ ಸ್ಪೆಷಲ್ ಆಯಕ್ಷನ್ ಫೋರ್ಸ್ಗೆ ಇತ್ತೀಚೆಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಮಂಗಳೂರಿನಲ್ಲಿ ಚಾಲನೆ ನೀಡಿದ್ದರು. ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಸ್ಪೆಷಲ್ ಆಯಕ್ಷನ್ ಫೋರ್ಸ್ ಕಾರ್ಯಾಚರಣೆ ನಡೆಸಿದೆ.
ಮಂಗಳೂರು ನಗರ ಕೇಂದ್ರದಲ್ಲಿಯೇ ಎಸ್ಎಎಫ್ ಕಾರ್ಯಪಡೆಯ ಕೇಂದ್ರ ಕಛೇರಿ ಇದೆ. ನಕ್ಸಲ್ ನಿಗ್ರಹ ಪಡೆಯಲ್ಲಿದ್ದ 656 ಸಿಬ್ಬಂದಿಗಳ ಪೈಕಿ 248 ಮಂದಿ ಈ ಹೊಸ ಪಡೆಯಲ್ಲಿದ್ದಾರೆ. ಡಿಐಜಿ, ಡಿವೈಎಸ್ಪಿ, ಸಹಾಯಕ ಕಮಾಂಡೆಂಟ್, 4 ಇನ್ ಸ್ಪೆಕ್ಟರ್, 16 ಪಿಎಸ್ಐ ಸೇರಿದಂತೆ 248 ಸಿಬ್ಬಂದಿ ತಂಡದಲ್ಲಿ ಇದ್ದಾರೆ.
