ಭಾರತದ ಮಾರುಕಟ್ಟೆಗೆ ಚನಾಕ್ಷತನದಿಂದ ವಂಚಿಸಿದ ಜೇನ್ ಸ್ಟ್ರೀಟ್

ನವದೆಹಲಿ: ಅಮೆರಿಕ ಮೂಲದ ಟ್ರೇಡಿಂಗ್ ಕಂಪನಿ ಜೇನ್ ಸ್ಟ್ರೀಟ್ ಗ್ರೂಪ್ (Jane Street Group) ಅನ್ನು ಸೆಬಿ (SEBI) ನಿಷೇಧಿಸಿದೆ. ಭಾರತೀಯ ಷೇರು ಮಾರುಕಟ್ಟೆಯನ್ನು (Stock Market) ತನ್ನಿಷ್ಟ ಬಂದಂತೆ ವಂಚಿಸಿ 36,500 ಕೋಟಿ ರೂ ಲಾಭ ಮಾಡಿಕೊಂಡ ಆರೋಪ ಈ ಕಂಪನಿ ಮೇಲೆ ಇದೆ. 2023ರ ಜನವರಿಯಿಂದ 2025ರ ಮಾರ್ಚ್ವರೆಗಿನ ಅವಧಿಯಲ್ಲಿ ಜೇನ್ ಸ್ಟ್ರೀಟ್ ಈ ಸಾವಿರಾರು ಕೋಟಿ ರೂ ಲಾಭ ಕಂಡಿರುವುದು ಸೆಬಿ ತನಿಖೆ ವೇಳೆ ಗೊತ್ತಾಗಿದೆ.

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಪಾಲ್ಗೊಳ್ಳದಂತೆ ಜೇನ್ ಸ್ಟ್ರೀಟ್ ಹಾಗೂ ಅದರ ಅಂಗ ಸಂಸ್ಥೆಗಳನ್ನು ಸೆಬಿ ನಿರ್ಬಂಧಿಸಿದೆ. 4,843 ಕೋಟಿ ರೂ ಹಣವನ್ನು ಮುಟ್ಟುಗೋಲು ಹಾಕಿದೆ. ತನ್ನ ನೋಟೀಸ್ಗೆ 21 ದಿನದೊಳಗೆ ಉತ್ತರ ನೀಡುವಂತೆ ನಿರ್ದೇಶಿಸಿದೆ. ಸೆಬಿ ಆರೋಪಗಳನ್ನು ಜೇನ್ ಸ್ಟ್ರೀಟ್ ನಿರಾಕರಿಸಿದೆ. ಭಾರತೀಯ ಕಾನೂನುಗಳ ಪ್ರಕಾರವೇ ತಾನು ಟ್ರೇಡಿಂಗ್ ಮಾಡಿದ್ದಾಗಿ ಅದು ಸ್ಪಷ್ಟಪಡಿಸಿದೆ.
ಜೇನ್ ಸ್ಟ್ರೀಟ್ ಹೇಗೆ ವಂಚಿಸಿತು… ಇಲ್ಲಿದೆ ಇಂಟರೆಸ್ಟಿಂಗ್ ವಿಚಾರಗಳು…
ಷೇರು ಮಾರುಕಟ್ಟೆಯಲ್ಲಿ ಕೃತಕವಾಗಿ ಷೇರುಬೆಲೆ ಉಬ್ಬುವಂತೆ ಮಾಡಿ, ಅದರಿಂದ ಲಾಭ ಮಾಡಿಕೊಳ್ಳುವುದು ಮೊದಲಿಂದಲೂ ವಂಚಕರು ಅನುಸರಿಸುತ್ತಾ ಬಂದಿರುವ ತಂತ್ರ. ಜೇನ್ ಸ್ಟ್ರೀಟ್ ಮಾಡಿದ್ದೂ ಅದೇ.
ಜೇನ್ ಸ್ಟ್ರೀಟ್ ಅಮೆರಿಕ ಮೂಲದ ಟ್ರೇಡಿಂಗ್ ಕಂಪನಿ. ವಿಶ್ವಾದ್ಯಂತ ಷೇರು ಮಾರುಕಟ್ಟೆಗಳಲ್ಲಿ ಇದರ ಟ್ರೇಡಿಂಗ್ ನಡೆಯುತ್ತದೆ. 2,600 ಉದ್ಯೋಗಗಳಿದ್ದಾರೆ. ಅತ್ಯಾಧುನಿಕ ಕ್ವಾಂಟಿಟೇಟಿವ್ ಮಾಡಲ್, ಆಟೊಮೇಟೆಡ್ ವಿಧಾನಗಳನ್ನು ಇದು ಟ್ರೇಡಿಂಗ್ಗೆ ಬಳಸುತ್ತದೆ. ಭಾರತದಲ್ಲಿ ಅದು ಜೆಎಸ್ಐ ಇನ್ವೆಸ್ಟ್ಮೆಂಟ್ಸ್ ಇತ್ಯಾದಿ ನಾಲ್ಕು ಕಂಪನಿಗಳ ಮೂಲಕ ಟ್ರೇಡಿಂಗ್ ನಡೆಸುತ್ತದೆ.
ಜೇನ್ ಸ್ಟ್ರೀಟ್ ವಂಚನೆ ಎಸಗಿದ ಕಥೆ…
2023ರ ಜನವರಿಯಿಂದ 2025ರ ಮಾರ್ಚ್ವರೆಗಿನ ಅವಧಿಯಲ್ಲಿ ಜೇನ್ ಸ್ಟ್ರೀಟ್ನ ಕಂಪನಿಗಳು ಬ್ಯಾಂಕ್ ನಿಫ್ಟಿ ಇತ್ಯಾದಿ ಇಂಡೆಕ್ಸ್ ಆಪ್ಷನ್ಸ್ನಿಂದ 43,289 ಕೋಟಿ ರೂ ಲಾಭ ಮಾಡಿವೆ. ಸ್ಟಾಕ್ ಫ್ಯೂಚರ್ಸ್ ಮತ್ತು ಕ್ಯಾಷ್ ಈಕ್ವಿಟಿ ಇತ್ಯಾದಿ ಸೆಗ್ಮೆಂಟ್ಗಳಲ್ಲಿ ಆದ ಒಂದಷ್ಟು ನಷ್ಟವನ್ನು ಕಳೆದರೆ ಎರಡು ವರ್ಷದಲ್ಲಿ ಅದು ಗಳಿಸಿದ ಲಾಭ 36,502 ಕೋಟಿ ರೂ ಆಗುತ್ತದೆ. ಇದು ಸೆಬಿ ತಿಳಿಸಿರುವ ಮಾಹಿತಿ.

ಇಲ್ಲಿ ಜೇನ್ ಸ್ಟ್ರೀಟ್ ಎರಡು ವಂಚಕ ತಂತ್ರ ಅನುಸರಿಸಿದೆ. ಒಂದು, ಇಂಟ್ರಾಡೇ ಮ್ಯಾನುಪುಲೇಶನ್ ಮಾಡಿದ್ದು. ಮತ್ತೊಂದು, ಮಾರ್ಕಿಂಗ್ ದಿ ಕ್ಲೋಸ್.
ಸೆಬಿ ಆರೋಪಿಸಿರುವ ಪ್ರಕಾರ, ಫ್ಯೂಚರ್ಸ್ ಮತ್ತು ಕ್ಯಾಷ್ ಸೆಗ್ಮೆಂಟ್ನಲ್ಲಿ ಬ್ಯಾಂಕ್ ನಿಫ್ಟಿ ಇಂಡೆಕ್ಸ್ನಲ್ಲಿರುವ ವಿವಿಧ ಬ್ಯಾಂಕುಗಳ ಸ್ಟಾಕುಗಳನ್ನು ಜೇನ್ ಸ್ಟ್ರೀಟ್ ಒಂದು ನಿರ್ದಿಷ್ಟ ದಿನದ ಬೆಳಗಿನ ಸೆಷನ್ನಲ್ಲಿ ಭಾರೀ ಪ್ರಮಾಣದಲ್ಲಿ ಖರೀದಿಸಿತು. ಇದರಿಂದ ಷೇರುಬೆಲೆ ಕೃತಕವಾಗಿ ಉಬ್ಬಿತು. ಅದೇ ವೇಳೆ, ಆಪ್ಷನ್ಸ್ ವಿಭಾಗದಲ್ಲಿ ಕಾಲ್ ಆಪ್ಷನ್ಸ್ ಅನ್ನು ಮಾರಿತು. ಪುಟ್ ಆಪ್ಷನ್ಸ್ ಅನ್ನು ಕಡಿಮೆ ಬೆಲೆ ಖರೀದಿಸಿತು.
ಅದೇ ದಿನ ಬೆಳಗ್ಗೆ ಖರೀದಿಸಲಾದ ಎಲ್ಲಾ ಷೇರುಗಳನ್ನು ಟ್ರೇಡಿಂಗ್ನ ಕೊನೆಕೊನೆಯ ಸೆಷನ್ಗಳಲ್ಲಿ ಮಾರಿತು. ಇದರಿಂದ ಸಹಜವಾಗಿ ಷೇರುಬೆಲೆ ಕುಸಿಯಿತು. ಕಾಲ್ ಆಪ್ಷನ್ಗಳು ಕುಸಿದವು. ಪುಟ್ ಆಪ್ಷನ್ಸ್ ಬೆಲೆ ಸಖತ್ ಆಯಿತು. ಈ ಮೂಲಕ ಜೇನ್ ಸ್ಟ್ರೀಟ್ ಭರ್ಜರಿ ಲಾಭ ಮಾಡಿತು ಎನ್ನಲಾಗಿದೆ.
ಟೊಮೆಟೋ ಮತ್ತು ಕೆಚಪ್ ಉದಾಹರಣೆ ಕೊಟ್ಟ ಕೃಪಾಕರನ್
ಕೃಪಾಕರನ್ ಎನ್ನುವ ಆಲ್ಗೋ ಟ್ರೇಡರ್ವೊಬ್ಬರು ಜೇನ್ ಸ್ಟ್ರೀಟ್ ಸ್ಟ್ರಾಟಿಜಿ ಬಗ್ಗೆ ಒಂದು ಸರಳ ನಿದರ್ಶನದ ಮೂಲಕ ವಿವರಣೆ ನೀಡಿದ್ದಾರೆ. ಅವರ ಪ್ರಕಾರ, ಈಕ್ವಿಟಿ ಮತ್ತು ಫ್ಯೂಚರ್ಸ್ನನಲ್ಲಿ ಜೇನ್ ಸ್ಟ್ರೀಟ್ ಉದ್ದೇಶಪೂರ್ವಕವಾಗಿ ನಷ್ಟ ಕಂಡಿತು. ಆಪ್ಷನ್ಸ್ನಲ್ಲಿ ಲಾಭ ಮಾಡಲು ಅದು ಹಾಕಿದ ಗಾಳಕ್ಕೆ ಆದ ವೆಚ್ಚ ಅಷ್ಟೇ ಅದು.
ಅದಕ್ಕೆ ಅವರು ಟೊಮೆಟೋ ಮತ್ತು ಕೆಚಪ್ ಕಥೆ ಹೇಳುತ್ತಾರೆ. ಟೊಮೆಟೋ ಬೆಲೆಗಳ ಮೇಲೆ ಕೆಚಪ್ ಬೆಲೆ ಅವಲಂಬಿತವಾಗಿರುತ್ತದೆ. ಏಜೆಂಟ್ವೊಬ್ಬ ಟನ್ಗಟ್ಟಲೆ ಟೊಮೆಟೋ ಖರೀದಿಸಿಬಿಡುತ್ತಾನೆ. ಆಗ ಟೊಮೆಟೋ ಬೆಲೆ ಏರುತ್ತದೆ. ಪರಿಣಾಮವಾಗಿ, ಕೆಚಪ್ ಬೆಲೆಯೂ ಹೆಚ್ಚುತ್ತದೆ.
ಕೆಚಪ್ ಬೆಲೆ ಏರುತ್ತದೆ ಎಂದು ಭಾವಿಸಿ ವರ್ತಕರು ಬೆಟ್ ಮಾಡಬಹುದು. ಆದರೆ, ಏಜೆಂಟ್ ಅಥವಾ ಮಧ್ಯವರ್ತಿ ಸಮಯ ಬಂದಾಗ ಎಲ್ಲಾ ಟೊಮೆಟೋವನ್ನೂ ಮಾರುಕಟ್ಟೆಗೆ ಡಂಪ್ ಮಾಡುತ್ತಾನೆ. ಬೆಲೆ ಕುಸಿಯುತ್ತದೆ. ಕೆಚಪ್ ಬೆಲೆಯೂ ಕುಸಿಯುತ್ತದೆ. ಇದರಿಂದ ಮಧ್ಯವರ್ತಿ ಲಾಭ ಮಾಡಿಕೊಳ್ಳುತ್ತಾನೆ. ಇಂಥದ್ದೇ ಕಥೆ ಜೆನ್ ಸ್ಟ್ರೀಟ್ನಿಂದ ಆಗಿದೆ ಎನ್ನುತ್ತಾರೆ ಕೃಪಾಕರನ್.
