ಗದಗದಲ್ಲಿ ಮುಸುಕುದಾರಿ ಕಳ್ಳರ ಆರ್ಭಟ: ಗ್ರಾಮೀಣ ಭಾಗದಲ್ಲಿ ಲಾಂಗು-ಮಚ್ಚು ಹಿಡಿದು ಮನೆ ದಾಳಿ

ಗದಗ: ಜಿಲ್ಲೆಯಲ್ಲಿ ಮುಸುಕುದಾರಿ ಕಳ್ಳರ ಹಾವಳಿ ಹೆಚ್ಚಾಗಿದೆ. ಹೀಗಾಗಿ ರಾತ್ರಿಯಾದರೆ ಸಾಕು ಜನರಿಗೆ ಭಯ ಶುರುವಾಗಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಲಾಂಗು, ಮಚ್ಚು ಹಿಡಿದು ಗ್ರಾಮಕ್ಕೆ ಎಂಟ್ರಿ ಕೊಡುತ್ತಿರುವ ಗ್ಯಾಂಗ್ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದೆ. ಈ ಗ್ಯಾಂಗ್ ದಾಳಿಗೆ ಗ್ರಾಮೀಣ ಭಾಗದ ಜನರು ಬೆಚ್ಚಿಬಿದ್ದಿದ್ದಾರೆ. ಭಯದಲ್ಲಿ ಜೀವನ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮುಸುಕುದಾರಿ ಕಳ್ಳರನ್ನು ಬಂಧಿಸುವಂತೆ ಜನರು ಒತ್ತಾಯಿಸಿದ್ದಾರೆ.

40 ಗ್ರಾಂ ಚಿನ್ನ ಹಾಗೂ 6 ಸಾವಿರ ನಗದು ಕಳ್ಳತನ
ಅಂದಹಾಗೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಮುಸುಕುಧಾರಿ ಕಳ್ಳರ ಹಾವಳಿಗೆ ಜನರು ಬೆಚ್ಚಿಬಿದ್ದಿದ್ದಾರೆ. ಕಳ್ಳರ ಕೈಚಳಕ್ಕೆ ಅಕ್ಷರಶಃ ಕಂಗಾಲಾಗಿದ್ದಾರೆ. ಹೌದು.. ಶಿರಹಟ್ಟಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಮುಸುಕುಧಾರಿ ಗ್ಯಾಂಗ್, ಕೃಷ್ಣ ಲಮಾಣಿಯವರ ಮನೆಯಲ್ಲಿ ಕಳ್ಳತನ ಮಾಡಿದೆ. ಮನೆಯಲ್ಲಿದ್ದ 40 ಗ್ರಾಂ ಚಿನ್ನ ಹಾಗೂ 6 ಸಾವಿರ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಬೆಳ್ಳಟ್ಟಿ ಗ್ರಾಮದ, ರಾಜಣ್ಣ ಗೋಪಾಳಿ, ಮಂಗೇಶಪ್ಪ ಲಮಾಣಿ ಅವರ ಮನೆ ಹಾಗೂ ಗ್ರಾಮ ಒನ್ ಕೇಂದ್ರದಲ್ಲಿ ಕಳ್ಳತನ ಮಾಡಿದ್ದಾರೆ. ಇನ್ನೂ ಛಬ್ಬಿ, ಬನ್ನಿಕೊಪ್ಪ, ಬೆಳ್ಳಟ್ಟಿ ಸೇರಿದಂತೆ ಹಲವು ಗ್ರಾಮದಲ್ಲಿ ಕಳ್ಳತನ ಹಾಗೂ ಕೆಲವು ಮನೆಗಳಲ್ಲಿ ಯತ್ನ ಮಾಡಿದ್ದಾರೆ. ಕಳ್ಳರ ಹಾವಳಿ ಗ್ರಾಮೀಣ ಭಾಗದ ಜನರನ್ನ ಬೆಚ್ಚಿಬೀಳಿಸಿದೆ. ಈಗಾಲೇ ಒಂದು ಪ್ರಕರಣವನ್ನು ದಾಖಲಿಸಿಕೊಂಡು ಡಿವೈಎಸ್ಪಿ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಲಾಗಿದ್ದು, ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಮಾಡುವುದಾಗಿ ಎಸ್ಪಿ ಬಿಎಸ್ ನೇಮಗೌಡ ಹೇಳಿದ್ದಾರೆ.
ಕಳ್ಳರನ್ನು ಪತ್ತೆ ಮಾಡುವಂತೆ ಒತ್ತಾಯ
ಮುಸುಕುದಾರಿ ಕಳ್ಳರ ಹಾವಳಿಯಿಂದ ಗ್ರಾಮೀಣ ಭಾಗದ ಜನರು ಹೈರಾಣಾಗಿದ್ದಾರೆ. ರಾತ್ರಿ ಆದರೆ ಸಾಕು ಯಾವ ಗ್ರಾಮಕ್ಕೆ ಮಸುಕುಧಾರಿ ಗ್ಯಾಂಗ್ ಬರುತ್ತೆ ಎನ್ನುವ ಆತಂಕ ಮನೆ ಮಾಡಿದೆ. ರಾತ್ರಿ ವೇಳೆಯಲ್ಲಿ ಈ ಮುಸುಕುದಾರಿಗಳು ಮಾರಕಾಸ್ತ್ರಗಳನ್ನು ಹಿಡಿದು ಅಖಾಡಕ್ಕಿಳಿಯುತ್ತದೆ. ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಾರೆ. ಗ್ಯಾಂಗ್ನ ಭಯಾನಕ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಹೀಗಾಗಿ ಮುಸುಕುದಾರಿ ಕಳ್ಳರನ್ನು ಪತ್ತೆ ಮಾಡುವಂತೆ ಒತ್ತಾಯ ಮಾಡಿದ್ದಾರೆ.

ಈ ಹಿಂದೆ ಕೂಡ ಗದಗ ಬೆಟಗೇರಿ ಅವಳಿ ನಗರದಲ್ಲಿ ಮುಸುಕುದಾರಿ ಕಳ್ಳರ ಹಾವಳಿ ಹೆಚ್ಚಾಗಿತ್ತು. ಆ ವೇಳೆಯಲ್ಲಿ ಪೊಲೀಸರು ಅವರನ್ನು ಪತ್ತೆ ಮಾಡಿದ್ದರು. ಇದೀಗ ಪತ್ತೆ ಹಳ್ಳಿಹಳ್ಳಿಯಲ್ಲೂ ಮುಸುಕುದಾರಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಜನರು ಭಯದಲ್ಲಿದ್ದಾರೆ. ಆದಷ್ಟು ಪತ್ತೆ ಮಾಡಬೇಕಿದೆ. ಈಗಾಗಲೇ ಕಳ್ಳರ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಆದಷ್ಟು ಬೇಗ ಕಳ್ಳರನ್ನು ಪತ್ತೆ ಮಾಡಿ, ಜನರು ನೆಮ್ಮದಿಯಿಂದ ಬದುಕಲು ಅನವು ಮಾಡಿಕೊಡಬೇಕಾಗಿದೆ.