ತುಮಕೂರಿನಲ್ಲಿ 300 ಎಕರೆ ಅರಣ್ಯ ಭೂಮಿ ವಶಪಡಿಸಿಕೊಂಡ ಅರಣ್ಯ ಇಲಾಖೆ!

ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆ ಗುರುವಾರ ತುಮಕೂರು ಜಿಲ್ಲೆಯ ಬುಕ್ಕಾಪಟ್ಟಣ ಚಿಂಕಾರ ವನ್ಯಜೀವಿ ಅಭಯಾರಣ್ಯದಲ್ಲಿ ಅತಿಕ್ರಮಣಗೊಂಡಿದ್ದ 300 ಎಕರೆ ಭೂಮಿಯನ್ನು ವಶಪಡಿಸಿಕೊಂಡಿದೆ. ಮುತ್ತುಗದಹಳ್ಳಿ ಅಂಬರಪುರದ ಸರ್ವೆ ಸಂಖ್ಯೆ 46 ರಲ್ಲಿ ವಶಪಡಿಸಿಕೊಂಡ ಭೂಮಿಯನ್ನು ಅರಣ್ಯ ಹಕ್ಕು ಕಾಯ್ದೆಯಡಿ 1926 ರಲ್ಲಿ ಅರಣ್ಯ ಭೂಮಿ ಎಂದು ಘೋಷಿಸಲಾಯಿತು.

ಅರಣ್ಯ ಇಲಾಖೆಯ ದಾಖಲೆಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಇದು ಅತಿದೊಡ್ಡ ಪ್ರಮಾಣದಲ್ಲಿ ವಶಪಡಿಸಿಕೊಂಡ ಅರಣ್ಯ ಭೂಮಿಯಾಗಿದೆ. ಜೂನ್ 23 ರಂದು, ಅರಣ್ಯ ಇಲಾಖೆ ಕಾಡುಗೋಡಿ ತೋಟದಲ್ಲಿ 4,000 ಕೋಟಿ ರೂ. ಮೌಲ್ಯದ 120 ಎಕರೆ ಅರಣ್ಯ ಭೂಮಿಯನ್ನು ವಶಪಡಿಸಿಕೊಂಡಿತ್ತು. 2013 ರಲ್ಲಿ – ಕೋಲಾರದಲ್ಲಿ 600 ಎಕರೆ, ನಂತರ 2014 ರಲ್ಲಿ ಮಲ್ಲೂರಿನಲ್ಲಿ 355 ಎಕರೆ ಭೂಮಿಯನ್ನು ವಶಕ್ಕೆ ಪಡೆಯಲಾಗಿತ್ತು.

ಕಳೆದ 30 ವರ್ಷಗಳಿಂದ ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರಿಗೆ ಅಕ್ರಮವಾಗಿ ಭೂಮಿಯನ್ನು ಮಂಜೂರು ಮಾಡಿದ್ದಾರೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ವಿ ಯದುಕೊಂಡಲು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ. ಜನರು ಅಲ್ಲಿ ವಾಸಿಸುತ್ತಿಲ್ಲವಾದರೂ, ಕೃಷಿ ಚಟುವಟಿಕೆಗಳನ್ನು ವರ್ಷಗಳಿಂದ ಕೈಗೆತ್ತಿಕೊಳ್ಳಲಾಗಿತ್ತು.
ರೈತರು ತೆಂಗು, ಹತ್ತಿ, ಅಡಿಕೆ, ಗೋವಿನ ಜೋಳ ಮತ್ತು ಇತರ ಬೆಳೆಗಳನ್ನು ಬೆಳೆಯುತ್ತಿದ್ದರು. ಇತ್ತೀಚೆಗೆ ಲೋಕಾಯುಕ್ತರು ಹೊರಡಿಸಿದ ಆದೇಶದಂತೆ ಸುಪ್ರೀಂ ಕೋರ್ಟ್ ಮತ್ತು ಕರ್ನಾಟಕ ಹೈಕೋರ್ಟ್ ಆದೇಶಗಳನ್ನು ಅನುಸರಿಸಿ, ಅಕ್ರಮ ದಾಖಲೆಗಳನ್ನು ರದ್ದುಗೊಳಿಸುವಂತೆ ನಾವು ವಿಭಾಗದ ಕಂದಾಯ ಇಲಾಖೆ ಅಧಿಕಾರಿಗಳನ್ನು ಕೇಳಿದ್ದೇವೆ ಎಂದು ತಿಳಿಸಿದ್ದಾರೆ.
