Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕರ್ನಾಟಕದಲ್ಲಿ 17 ಲಕ್ಷ ‘ನಕಲಿ ವಿದ್ಯಾರ್ಥಿಗಳ’ ಅನುಮಾನ: ಆಧಾರ್‌ ಜೋಡಣೆಗೆ ಜುಲೈ 30 ಅಂತಿಮ ಗಡುವು!

Spread the love

Lost Aadhaar Card? Here's How to Get a Duplicate One in 2025

ಬೆಂಗಳೂರು: ರಾಜ್ಯದಲ್ಲಿ ಲಕ್ಷಾಂತರ ನಕಲಿ ವಿದ್ಯಾರ್ಥಿಗಳಿರುವ ಶಂಕೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆಯೇ ವ್ಯಕ್ತಪಡಿಸಿದ್ದು, ಸುಮಾರು 17 ಲಕ್ಷದಷ್ಟು “ನಕಲಿ ವಿದ್ಯಾರ್ಥಿ’ಗಳು ಇರುವ ಗುಮಾನಿಯಿದೆ ಎಂದು ಹೇಳಿದೆ.

ಎರಡು ವರ್ಷಗಳಿಂದ ವಿದ್ಯಾರ್ಥಿ ಸಾಧನೆ ನಿಗಾ ವ್ಯವಸ್ಥೆ (ಎಸ್‌ಎಟಿಎಸ್‌) ಯಲ್ಲಿ ವಿದ್ಯಾರ್ಥಿಗಳ ಆಧಾರ್‌ ಜೋಡಣೆಗೆ ಇಲಾಖೆ ನಿರಂತರವಾಗಿ ಪ್ರಯತ್ನಿಸುತ್ತಿದೆ.

ಆದರೆ ಲಕ್ಷಾಂತರ ವಿದ್ಯಾರ್ಥಿಗಳ ಜೋಡಣೆ ಇನ್ನೂ ನಡೆದಿಲ್ಲ. ಇದು ಇಲಾಖೆಯ ಅನುಮಾನ ಹೆಚ್ಚಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅಂತಿಮ ಅವಕಾಶ ನೀಡಿರುವ ಇಲಾಖೆಯು ಜು. 30ರೊಳಗೆ ಎಸ್‌ಎಟಿಎಸ್‌ ತಂತ್ರಾಂಶದಲ್ಲಿ ಎಲ್ಲ ವಿದ್ಯಾರ್ಥಿಗಳ ಆಧಾರ್‌ ಜೋಡಣೆ ಆಗಲೇಬೇಕು ಎಂದು ಕಟ್ಟಪ್ಪಣೆ ಮಾಡಿದೆ.

ರಾಜ್ಯದಲ್ಲಿ ಸದ್ಯ 9ರಿಂದ 10ನೇ ತರಗತಿಯವರೆಗೆ 1.04 ಕೋಟಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ 87 ಲಕ್ಷ ವಿದ್ಯಾರ್ಥಿಗಳ ಆಧಾರ್‌ ಜೋಡಣೆ ಮಾಡಲಾಗಿದೆ. ಉಳಿದಂತೆ 17 ಲಕ್ಷ ವಿದ್ಯಾರ್ಥಿಗಳ ಆಧಾರ್‌ ಜೋಡಣೆಗೆ ಹಲವು ಅವಕಾಶ ನೀಡಿದ್ದರೂ ನಡೆಸಲಾಗಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ.

ಏಕೆ ಈ ಅನುಮಾನ?
ಸರಕಾರವು ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ, ಕ್ಷೀರಭಾಗ್ಯ, ಸಮವಸ್ತ್ರ, ಶೂ ಮತ್ತು ಸಾಕ್ಸ್‌, ಮೊಟ್ಟೆ, ಬಾಳೆಹಣ್ಣು, ಬಿಸಿಯೂಟ, ವಿದ್ಯಾರ್ಥಿ ವೇತನದ ಸವಲತ್ತುಗಳನ್ನು ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ನೈಜ ಸಂಖ್ಯೆಯನ್ನು ಮರೆಮಾಚಿ ನಕಲಿ ವಿದ್ಯಾರ್ಥಿಗಳನ್ನು ಸೃಷ್ಟಿಸಿ ಅಕ್ರಮ ಎಸಗಿರುವ ಅನುಮಾನವಿದೆ.

ಇದರ ಜತೆಗೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರು, ಅತಿಥಿ ಶಿಕ್ಷಕರ ನಿಯೋಜನೆ ನಡೆಯುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿ ತೋರಿಸಿದರೆ ಹೆಚ್ಚು ಶಿಕ್ಷಕರು ಸಿಗಬಹುದು ಎಂದು ಕೆಲವು ಶಾಲೆಗಳಲ್ಲಿ ಹೀಗೆ ಮಾಡಲಾಗಿದೆಯೇ ಎಂಬ ಪ್ರಶ್ನೆಗಳು ಕೂಡ ಹುಟ್ಟಿಕೊಂಡಿವೆ.

ಆಧಾರ್‌ ಕ್ಯಾಂಪ್‌ ಎಸ್‌ಎಟಿಎಸ್‌ ಜತೆಗೆ ಎಲ್ಲ ವಿದ್ಯಾರ್ಥಿಗಳ ಆಧಾರ್‌ ಜೋಡಣೆ ನಡೆಸುವಂತೆ ಶಾಲಾ ಶಿಕ್ಷಣ ಇಲಾಖೆ ಎರಡು ವರ್ಷಗಳಿಂದ ನಿರಂತರವಾಗಿ ಸೂಚನೆ ನೀಡುತ್ತಿದೆ. ಶಾಲೆಗಳಲ್ಲಿ ವಿಶೇಷ ಆಧಾರ್‌ ಕ್ಯಾಂಪ್‌ ಕೂಡ ಆಯೋಜಿಸಲಾಗಿದೆ.

ಇದೇ ಜ. 21ರಂದು ಆದೇಶವೊಂದನ್ನು ಹೊರಡಿಸಿದ್ದ ಇಲಾಖೆಯು, ರಾಜ್ಯದಲ್ಲಿ ಒಟ್ಟು 1.04 ಕೋಟಿ ವಿದ್ಯಾರ್ಥಿಗಳಲ್ಲಿ 78 ಲಕ್ಷ ವಿದ್ಯಾರ್ಥಿಗಳ ಆಧಾರ್‌ ಜೋಡಣೆ ಆಗಿದೆ. ಉಳಿದಂತೆ 18 ಲಕ್ಷ ವಿದ್ಯಾರ್ಥಿಗಳ ಆಧಾರ್‌ ಜೋಡಣೆ ಆಗಿಲ್ಲ. ಸುಮಾರು 8 ಲಕ್ಷ ವಿದ್ಯಾರ್ಥಿಗಳ ಎಸ್‌ಎಟಿಎಸ್‌ನಲ್ಲಿ ಹೆಸರು ಮತ್ತು ಆಧಾರ್‌ ಹೆಸರು ತಾಳೆಯಾಗದ ಕಾರಣ ಜೋಡಣೆ ವಿಫ‌ಲವಾಗಿದೆ. ಒಟ್ಟು 26 ಲಕ್ಷ ವಿದ್ಯಾರ್ಥಿಗಳ ಆಧಾರ್‌ ಜೋಡಣೆ ಆಗಿಲ್ಲ. ಜ. 30ರೊಳಗೆ ಜೋಡಣೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿತ್ತು. ಇದಕ್ಕಾಗಿ ಅಗತ್ಯವಿರುವ ಶಾಲೆಗಳಲ್ಲಿ ಆಧಾರ್‌ ಶಿಬಿರಗಳನ್ನು ನಡೆಸುವಂತೆಯೂ ಹೇಳಿತ್ತು.

ಈ ಪ್ರಕ್ರಿಯೆಯಲ್ಲಿ 9 ಲಕ್ಷ ವಿದ್ಯಾರ್ಥಿಗಳ ಆಧಾರ್‌ ಮತ್ತು ಎಸ್‌ಎಟಿಎಸ್‌ ತಂತ್ರಾಂಶ ಜೋಡಣೆ ಪ್ರಯತ್ನವೇನೋ ಯಶಸ್ವಿ ಆಗಿದೆ. ಆದರೆ ಇಷ್ಟೆಲ್ಲ ಪ್ರಯತ್ನದ ಬಳಿಕವೂ 17 ಲಕ್ಷ ವಿದ್ಯಾರ್ಥಿಗಳ ಆಧಾರ್‌ ಜೋಡಣೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಆಧಾರ್‌ ಜೋಡಣೆಗೆ ಜು. 30ರವರೆಗೆ ಸಮಯ ನೀಡಲಾಗಿದೆ.

ಮುಂದೇನು ಕ್ರಮ?
ಒಂದು ವೇಳೆ ಜು. 30ರೊಳಗೆ ಆಧಾರ್‌ ಜೋಡಣೆ ನಡೆಯದಿದ್ದರೆ, ಆ ವಿದ್ಯಾರ್ಥಿಗಳ ದಾಖಲಾತಿಯನ್ನು ಶಾಲಾ ಮುಖ್ಯ ಶಿಕ್ಷಕರು ತಮ್ಮ ಲಾಗಿನ್‌ನಲ್ಲಿ ತೆಗೆದುಹಾಕಬೇಕು. ಆಧಾರ್‌ ಜೋಡಣೆ ಕಡಿಮೆ ಇರುವ ಶಾಲೆಗಳನ್ನು ಗುರುತಿಸಿ, ಶಾಲಾ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಆಧಾರ್‌ ಶಿಬಿರಗಳನ್ನು ಹಮ್ಮಿಕೊಳ್ಳಲು ವಿದ್ಯುನ್ಮಾನ ನಾಗರಿಕ ಸೇವಾ ವಿತರಣ ನಿರ್ದೇಶನಾಲಯ ಸಹಿತ ಸಂಬಂಧಪಟ್ಟವರನ್ನು ಕೋರುವಂತೆ ಸೂಚಿಸಲಾಗಿದೆ.

ನಕಲಿ ದಾಖಲಾತಿ: ಕ್ರಮ
ಶಾಲೆಯಲ್ಲಿ ನಕಲಿ ದಾಖಲಾತಿ ಹಾಗೂ ದ್ವಿದಾಖಲಾತಿ ಇರುವುದು ಕಂಡುಬಂದಲ್ಲಿ ಅದರಿಂದ ಆಗುವ ಆರ್ಥಿಕ ನಷ್ಟಕ್ಕೆ ಸಂಬಂಧಪಟ್ಟ ಶಾಲಾ ಮುಖ್ಯಸ್ಥರು ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಶಾಲಾ ಆಯುಕ್ತರು ತಿಳಿಸಿದ್ದಾರೆ.

ಸುಮಾರು 2 ವರ್ಷಗಳಿಂದ ಎಸ್‌ಎಟಿಎಸ್‌ ತಂತ್ರಾಂಶದಲ್ಲಿ ಆಧಾರ್‌ ಜೋಡಣೆ ನಡೆಸುವಂತೆ ಸೂಚನೆ ನೀಡುತ್ತಲೇ ಬಂದಿದ್ದೇವೆ. ಆಧಾರ್‌ ಜೋಡಣೆ ನಡೆಯದೆ ಇಲಾಖೆಯ ವಿವಿಧ ಯೋಜನೆಗಳ ಅನುಷ್ಠಾನ, ವಿದ್ಯಾರ್ಥಿ ವೇತನ ಮತ್ತಿತರ ಕಾರ್ಯಕ್ಕೆ ತೊಂದರೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜು. 30ರ ವರೆಗೆ ಆಧಾರ್‌ ಜೋಡಣೆಗೆ ಸಮಯ ನೀಡಿದ್ದು, ಈ ಅವಧಿಯಲ್ಲಿ ಜೋಡಣೆ ನಡೆಯದಿದ್ದರೆ ಆ ವಿದ್ಯಾರ್ಥಿ ನಕಲಿ ಆಗಿರುವ ಸಾಧ್ಯತೆಯಿದೆ.
– ಡಾ| ಕೆ.ವಿ. ತ್ರಿಲೋಕಚಂದ್ರ, ಆಯುಕ್ತ, ಶಾಲಾ ಶಿಕ್ಷಣ ಇಲಾಖೆ


Spread the love
Share:

administrator

Leave a Reply

Your email address will not be published. Required fields are marked *