ಮಗನಿಗೆ ಹೆಣ್ಣಿನ ವೇಷ ಹಾಕಿ ಸಂಭ್ರಮಿಸಿ, ಇಡೀ ಕುಟುಂಬದಿಂದ ಸಾಮೂಹಿಕ ಆತ್ಮಹತ್ಯೆ!

ರಾಜಸ್ಥಾನ್: ಗಂಡು ಮಗುವಿಗೆ ಹೆಣ್ಣಿನಂತೆ ಶೃಂಗಾರ ಮಾಡಿ ತಾಯಿಯ ಬಂಗಾರವೆಲ್ಲಾ ತೊಡಿಸಿ, ಕಣ್ಣಿಗೆ ಕಾಡಿಗೆ ಹಚ್ಚಿ, ತಲೆಯ ಮೇಲೆ ದುಪ್ಪಟ್ಟ ಹೊದಿಸಿ ಸಂಭ್ರಮಿಸಿದ ನಂತರ ಒಂದೇ ಕುಟುಂಬದ ನಾಲ್ವರು ವಾಟರ್ ಟ್ಯಾಂಕ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ರಾಜಸ್ಥಾನ್ ನಲ್ಲಿ ನಡೆದಿದೆ.

ಬಾರ್ಮರ್ ನಗರದ ಶಿವಲಾಲ್ ಮೇಘವಾಲ್ (35), ಪತ್ನಿ ಕವಿತಾ (32), ಮಕ್ಕಳಾದ ಭಜರಂಗ್ (9) ಮತ್ತು ರಾಮ್ ದೇವ್ (8) ಮನೆಯಲ್ಲಿನ ವಾಟರ್ ಟ್ಯಾಂಕ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಣ್ಣಿನ ವೇಷ ಹಾಕಿ ಸಂಭ್ರಮಸಿದಿದ ಕೊನೆಯ ಮಗ ರಾಮ್ ದೇವ್ ಕೂಡ ಮೃತಪಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದಾಗ ನಾಲ್ವರು ಮೃತಪಟ್ಟಿದ್ದು, ಮನೆಯಿಂದ 20 ಮೀಟರ್ ದೂರದಲ್ಲಿರುವ ವಾಟರ್ ಟ್ಯಾಂಕ್ ನಲ್ಲಿ ಶವಗಳನ್ನು ಪತ್ತೆಹಚ್ಚಿದ್ದು, ಮಕ್ಕಳನ್ನು ಕೊಂದು ಹೆತ್ತವರು ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

ಮಂಗಳವಾರ ಬೆಳಿಗ್ಗೆ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದ್ದು, ಸಂಜೆ ನೀರು ಬ್ಲಾಕ್ ಆಗಿದ್ದರಿಂದ ಸಂಬಂಧಿಕರು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಬುಧವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಮನೆಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ತನ್ನನ್ನು ಸೇರಿ ಮೂವರ ಸಾವಿಗೆ ನಾನೇ ಕಾರಣ ಎಂದು ಬರೆಯಲಾಗಿದ್ದು, ಮನೆಯ ಒಡೆತನ ವಿಷಯದಲ್ಲಿ ಶಿವಲಾಲ್ ಮತ್ತು ಸೋದರರ ನಡುವೆ ಮನಸ್ತಾಪ ಇತ್ತು.
ಶಿವಲಾಲ್ ಕೇಂದ್ರ ಸರ್ಕಾರದ ಪ್ರಧಾನಿ ಇಂದಿರಾ ಆವಾಸ್ ಯೋಜನೆಯಡಿ ಮನೆ ನಿರ್ಮಿಸಲು ಮುಂದಾಗಿದ್ದು, ಇದು ಸೋದರರ ಅಸಮಾಧಾನಕ್ಕೆ ಕಾರಣವಾಗಿದ್ದು, ಮನೆ ಕಟ್ಟಲು ಬಿಟ್ಟಿರಲಿಲ್ಲ. ಇದರಿಂದ ಅಸಮಾಧಾನಗೊಂಡಿದ್ದ ಶಿವಲಾಲ್ ಕುಟುಂಬದ ಸಮೇತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
