ಪೊಲೀಸ್’ ಎಂದು ಹೇಳಿ 4 ರಾಜ್ಯಗಳ 20+ ಮಹಿಳೆಯರಿಗೆ ವಂಚನೆ, ಲೈಂಗಿಕ ಶೋಷಣೆ; ಆರೋಪಿ ಬಂಧನ!

ಆಗ್ರಾ: ಇಲ್ಲೊಬ್ಬ ಭೂಪ ಪೊಲೀಸ್ ಕಾನ್‌ಸ್ಟೆಬಲ್ (Police Constable) ಎಂದು ಹೇಳಿಕೊಂಡು 4 ರಾಜ್ಯಗಳ 20ಕ್ಕೂ ಹೆಚ್ಚು ಮಹಿಳೆಯರನ್ನು (Women) ವಂಚಿಸಿ, ಲೈಂಗಿಕವಾಗಿ ಶೋಷಣೆ ಮಾಡಿದ್ದಾನೆ. ಆದರೆ ನಸೀಬು ಕೆಟ್ಟು ಮುಜಫರ್‌ನಗರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಮಹಿಳೆಯರಿಗೆ ಕಾಟ ಕೊಡ್ತಿದ್ದ ಭೂಪ
30 ವರ್ಷದ ನೌಶಾದ್ ತ್ಯಾಗಿ ಎಂಬಾತ ರಾಹುಲ್ ತ್ಯಾಗಿ ಎಂಬ ಹೆಸರಿಟ್ಟುಕೊಂಡು ನಾನು ಪೊಲೀಸ್ ಅಂತ ನಕಲಿ ಪೊಲೀಸ್ ಡ್ರೆಸ್ ಧರಿಸಿ ಮಹಿಳೆಯರನ್ನು ಬಕ್ರಾ ಮಾಡುತ್ತಿದ್ದ. ‘ಅರ್ಧದಲ್ಲೇ ಶಾಲೆ ಬಿಟ್ಟಿದ್ದ ನೌಶಾದ್, ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದ. ವಿಧವೆಯರು ಮತ್ತು ಪತಿಯಿಂದ ಬೇರ್ಪಟ್ಟವರನ್ನೇ ಪರಿಚಯ ಮಾಡಿಕೊಂಡು, ಲೈಂಗಿಕ ಹಿಂಸೆ ನೀಡಿ ಎಸ್ಕೇಪ್ ಆಗುತ್ತಿದ್ದ’ ಎಂದು ಎಸ್‌ಎಸ್‌ಪಿ ಸಂಜಯ್ ಕುಮಾರ್ ವರ್ಮಾ ಹೇಳಿದ್ದಾರೆ.
ನೌಶಾದಗ್ ದೆಹಲಿ, ಗಾಜಿಯಾಬಾದ್, ಬುಲಂದ್‌ಶಹರ್, ಮಥುರಾ, ಸಂಭಾಲ್, ಮುಜಫರ್‌ನಗರ ಮತ್ತು ಅಸ್ಸಾಂ ಮತ್ತು ಮೇಘಾಲಯದ ಕೆಲವು ಭಾಗಗಳು ಸೇರಿದಂತೆ ಅನೇಕ ನಗರಗಳಲ್ಲಿ ಮೋಸ ಮಾಡಿದ್ದ. ನೌಶಾದ್ ನನಗೆ ಮೋಸ ಮಾಡಿದ್ದಾನೆ ಎಂದು 18ರಿಂದ-20 ಮಹಿಳೆಯರು ಒಪ್ಪಿಕೊಂಡಿದ್ದಾರೆ. ಅವರಲ್ಲಿ 10 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ನಂತೆ.

ಮಹಿಳೆಯೊಬ್ಬರು ಮುಜಫರ್ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ಈ ವಿಷಯ ಬೆಳಕಿಗೆ ಬಂದಿದ್ದು, ಮುಜಫರ್‌ನಗರದ ಚರ್ತವಾಲ್ ನಿವಾಸಿ ನೌಶಾದ್ನನ್ನ ಬಂಧಿಸಲಾಗಿದೆ. ಆರೋಪಿಯಿಂದ ನಕಲಿ ಪೊಲೀಸ್ ಸಮವಸ್ತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಬಿಎನ್‌ಎಸ್ ಸೆಕ್ಷನ್ 69 (ವಂಚಿಸಿ ಲೈಂಗಿಕ ದೌರ್ಜನ್ಯ ಎಸಗುವುದು) ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಸಮವಸ್ತ್ರ ಕದ್ದು ತಂದಿದ್ದ ನೌಶಾದ್
ನೌಶಾದ್ ಬಳಿ ಇದ್ದಿದ್ದು ಸರ್ಕಾರವೇ ಕೊಟ್ಟ ಅಸಲಿ ಸಮವಸ್ತ್ರ. ಹೌದು ಸಂಭಾಲ್‌ನಲ್ಲಿ ಕಾನ್‌ಸ್ಟೆಬಲ್ ಆಗಿರೋ ತನ್ನ ಸ್ನೇಹಿತ ಬಳಿ ಸಮವಸ್ತ್ರ ಕದ್ದಿದ್ನಂತೆ. ಅದೇ ನಕಲಿ ಸಮವಸ್ತ್ರವನ್ನು ನೌಶಾದ್ ಎರಡು ವರ್ಷಗಳಿಗೂ ಹೆಚ್ಚು ಕಾಲ ಬಳಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
