ಓಲಾ, ಊಬರ್‌ಗೆ ಗುಡ್ ನ್ಯೂಸ್: ಬೇಡಿಕೆ ಹೆಚ್ಚಾದಾಗ ದರ ದುಪ್ಪಟ್ಟು ಮಾಡಬಹುದು; ಕೇಂದ್ರದ ಹೊಸ ನಿಯಮ!

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಬೈಕ್ ಟ್ಯಾಕ್ಸಿ, ಕ್ಯಾಬ್ ಅಗ್ರಿಗೇಟರ್ಗಳ (cab aggregators) ಸೇವೆ ಸಂಬಂಧ ಕಾನೂನು ರೂಪಿಸಲು ರಾಜ್ಯ ಸರ್ಕಾರಗಳಿಗೆ ಹೊಸ ಮಾರ್ಗಸೂಚಿಗಳನ್ನು (guidelines) ಬಿಡುಗಡೆ ಮಾಡಿದೆ. ಬೈಕ್ ಟ್ಯಾಕ್ಸಿಗಳ ಚಾಲನೆಗೆ ಇದ್ದ ಕಾನೂನು ತೊಡಕನ್ನು ಕೇಂದ್ರ ನಿವಾರಿಸಿದೆ.

ಖಾಸಗಿ ನೊಂದಾಯಿತ ಬೈಕುಗಳನ್ನು ಪ್ರಯಾಣಿಕ ಸೇವೆಗೆ ಬಳಸಲು ಅನುಮತಿಸಲಾಗಿದೆ. ಈ ಮಾರ್ಗಸೂಚಿಯಲ್ಲಿ ಓಲಾ, ಊಬರ್ನಂತಹ ಕ್ಯಾಬ್ ಅಗ್ರಿಗೇಟರ್ಗಳು ಸರ್ಜ್ ಪ್ರೈಸಿಂಗ್ ಏರಿಸಲು ಅಥವಾ ಇಳಿಸಲು ಅನುಮತಿಸಲಾಗಿರುವುದು ವಿಶೇಷ.
ಕ್ಯಾಬ್ ಅಗ್ರಿಗೇಟರ್ಗಳಿಗೆ ಡೈನಮಿಕ್ ಪ್ರೈಸಿಂಗ್ ಅವಕಾಶ
ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಕ್ಯಾಬ್ ಅಗ್ರಿಗೇಟರ್ಗಳಿಗೆ ಡೈನಮಿಕ್ ಪ್ರೈಸಿಂಗ್ಗೆ ಅನುಮತಿ ನೀಡಲಾಗಿದೆ. ರಾಜ್ಯ ಸರ್ಕಾರಗಳು ನಿಗದಿ ಮಾಡುವ ಮೂಲ ದರ ಅಥವಾ ಬೇಸ್ ಫೇರ್ಗೆ ಡೈನಮಿಕ್ ಪ್ರೈಸಿಂಗ್ ಅಳವಡಿಕೆ ಮಾಡಬಹುದು. ಅಂದರೆ, ಕ್ಯಾಬ್ಗಳಿಗೆ ಬೇಡಿಕೆ ಕಡಿಮೆ ಇದ್ದಾಗ ಮೂಲ ದರಕ್ಕಿಂತ ಶೇ. 50ರವರೆಗೂ ದರ ಕಡಿಮೆ ಮಾಡಬಹುದು. ಬೇಡಿಕೆ ಹೆಚ್ಚಿದ್ದಾಗ, ಅಂದರೆ ಪೀಕ್ ಅವರ್ನಲ್ಲಿ ಮೂಲದರಕ್ಕಿಂತ ಎರಡು ಪಟ್ಟು ಹೆಚ್ಚು ದರ ಹೆಚ್ಚಿಸಲು ಸ್ವಾತಂತ್ರ್ಯ ಇರುತ್ತದೆ.
ಉದಾಹರಣೆಗೆ, ರಾಜ್ಯ ಸರ್ಕಾರವು 3 ಕಿಮೀ ದೂರಕ್ಕೆ ಮೂಲದರ 60 ರೂ ಎಂದು ನಿಗದಿ ಮಾಡಿರುತ್ತದೆ. 3 ಕಿಮೀ ನಂತರದ ಪ್ರಯಾಣಕ್ಕೆ ಪ್ರತೀ ಕಿಮೀಗೆ 20 ರೂ ನಿಗದಿ ಮಾಡಿದೆ ಎಂದಿಟ್ಟುಕೊಳ್ಳೋಣ. ಪೀಕ್ ಅವರ್ನಲ್ಲಿ ಮೂಲದರವನ್ನು ಎರಡು ಪಟ್ಟು ಏರಿಸುವ ಅವಕಾಶ ಓಲಾ, ಊಬರ್ಗಳಿಗೆ ಇರುತ್ತವೆ. ಹಾಗೆಯೇ, 3 ಕಿಮೀ ನಂತರದ ದರವನ್ನೂ ದುಪ್ಪಟ್ಟುಗೊಳಿಸಬಹುದು.

ಕೇಂದ್ರ ಸಾರಿಗೆ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಯ ಮುಖ್ಯಾಂಶಗಳು
ಖಾಸಗಿ ಮೋಟಾರುಸೈಕಲ್ಗಳನ್ನು ಬೈಕ್ ಟ್ಯಾಕ್ಸಿಗೆ ಬಳಸಬಹುದು. ಇದಕ್ಕೆ ಅನುಮತಿ ನೀಡುವುದು ಬಿಡುವುದು ರಾಜ್ಯ ಸರ್ಕಾರಗಳಿಗೆ ಬಿಟ್ಟಿದ್ದು
ಖಾಸಗಿ ದ್ವಿಚಕ್ರ ವಾಹನಗಳನ್ನು ವಾಣಿಜ್ಯ ಸೇವೆಗೆ ಬಳಸುವ ಅಗ್ರಿಗೇಟರ್ಗಳಿಗೆ ರಾಜ್ಯ ಸರ್ಕಾರಗಳು ಶುಲ್ಕ ವಿಧಿಸಬಹುದು.
ಎಲ್ಲಾ ಚಾಲಕರ ಪೊಲೀಸ್ ವೆರಿಫಿಕೇಶನ್ ಆಗಿರಬೇಕು. ಕಣ್ಣಿನ ಪರೀಕ್ಷೆಯೂ ಸೇರಿ ಎಲ್ಲಾ ದೈಹಿಕ ಆರೋಗ್ಯ ತಪಾಸಣೆ ಮತ್ತು ಮಾನಸಿಕ ಆರೋಗ್ಯ ತಪಾಸಣೆ ಆಗಿರಬೇಕು. ಆಧಾರ್ ದಾಖಲೆಯ ದೃಢೀಕರಣ ಪಡೆಯಬೇಕು
ಪ್ರತಿಯೊಬ್ಬ ಚಾಲಕನಿಗೂ 10 ಲಕ್ಷ ರೂ ಟರ್ಮ್ ಇನ್ಷೂರೆನ್ಸ್, ಮತ್ತು 5 ಲಕ್ಷ ರೂ ಹೆಲ್ತ್ ಇನ್ಷೂರೆನ್ಸ್ ಕವರೇಜ್ ಮಾಡಿಸಿರಬೇಕು.
ಚಾಲಕರನ್ನು ನೊಂದಾಯಿಸಿಕೊಳ್ಳುವಾಗ ಅವರಿಗೆ 40 ಗಂಟೆ ತರಬೇತಿ ಕೊಟ್ಟಿರಬೇಕು. ಅಗತ್ಯಬಿದ್ದರೆ ಮೂರು ತಿಂಗಳಿಗೊಮ್ಮೆಯೋ, ವರ್ಷಕ್ಕೊಮ್ಮೆಯೋ ರೀಫ್ರೆಶರ್ ಕೋರ್ಸ್ ನೀಡಬೇಕು.
ಕ್ಯಾಬ್ ಅಗ್ರಿಗೇಟರ್ಗಳು CERT-in ಸೈಬರ್ ಸೆಕ್ಯೂರಿಟಿ ಗೈಡ್ಲೈನ್ಸ್ ಪಾಲಿಸಬೇಕು. ಎಐಎಸ್-140 ಟ್ರ್ಯಾಕಿಂಗ್ ಸಿಸ್ಟಮ್ಸ್ ಬಳಸಬೇಕು; ಪ್ಯಾನಿಕ್ ಬಟನ್, ಕಂಟ್ರೋಲ್ ಸೆಂಟರ್ ಇತ್ಯಾದಿ ವ್ಯವಸ್ಥೆ ಇರಬೇಕು. ಇಂಗ್ಲೀಷ್, ಹಿಂದಿ ಅಥವಾ ಸ್ಥಳೀಯ ಭಾಷೆಯಲ್ಲಿನ ಯೂಸರ್ ಇಂಟರ್ಫೇಸ್ ಹೊಂದಿರಬೇಕು.
ಅಗ್ರಿಗೇಟರ್ಗಳು ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಿಸಲು ಗಮನ ಕೊಡಬೇಕು.
ವಾಹನವು ಡ್ರೈವರ್ಗಳ ಸ್ವಂತದ್ದಾಗಿದ್ದರೆ ಡ್ರೈವರ್ಗಳಿಗೆ ದರದಲ್ಲಿ ಕನಿಷ್ಠ ಶೇ. 80 ಪಾಲು ಹೋಗಬೇಕು. ಅಗ್ರಿಗೇಟರ್ಗಳಿಗೆ ವಾಹನ ಸೇರಿದ್ದಾದರೆ ಕನಿಷ್ಠ ಶೇ. 60ರಷ್ಟು ದರವು ಡ್ರೈವರ್ಗೆ ಸಂದಾಯವಾಗಬೇಕು
ಆಯಪ್ ಮೂಲಕ ಎಲ್ಲಾ ಸೇವೆ ನಡೆಯಬೇಕು. ಲೈವ್ ಟ್ರ್ಯಾಕಿಂಗ್, ಡ್ರೈವರ್ ರೇಟಿಂಗ್, ಎಮರ್ಜೆನ್ಸಿ ಬಟನ್ ಇತ್ಯಾದಿ ಸೌಲಭ್ಯ ಇರಬೇಕು.
ಅಗ್ರಿಗೇಟರ್ಗಳು ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಆಯಕ್ಟ್ನ ನಿಯಮಾವಳಿಗೆ ಬದ್ಧವಾಗಿರಬೇಕು.
ಕ್ಯಾಬ್ ಅಗ್ರಿಗೇಟರ್ಗಳ ವಾಹನಗಳಲ್ಲಿ ಎಷ್ಟು ವಾಹನಗಳು ದಿವ್ಯಾಂಗ ಸ್ನೇಹಿಯಾಗಿರಬೇಕು ಎಂಬುದನ್ನು ರಾಜ್ಯ ಸರ್ಕಾರಗಳು ನಿರ್ಧರಿಸಬಹುದು.
ಅಗ್ರಿಗೇಟರ್ಗಳು ಹೊಸ ಪರವಾನಿಗೆ ಪಡೆಯಲು 5 ಲಕ್ಷ ರೂ, ಲೈಸೆನ್ಸ್ ನವೀಕರಣಕ್ಕೆ 25,000 ರೂ ಶುಲ್ಕ ನೀಡಬೇಕು.
ಕ್ಯಾಬ್ ಅಗ್ರಿಗೇಟರ್ಗಳು 100 ಬಸ್ ಅಥವಾ 1,000 ಇತರ ವಾಹನಗಳನ್ನು ಚಲಾಯಿಸುತ್ತಿದ್ದರೆ ಸೆಕ್ಯೂರಿಟಿ ಡೆಪಾಸಿಟ್ ಆಗಿ 10 ಲಕ್ಷ ರೂ ನೀಡಬೇಕು. ಅದೇ ಪ್ರಮಾಣದಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದಂತೆ ಸೆಕ್ಯೂರಿಟಿ ಡೆಪಾಸಿಟ್ ಪ್ರಮಾಣವೂ ಹೆಚ್ಚು ಇರುತ್ತದೆ.