‘ನಮಗೆ ಬದುಕಲು ಸಹಾಯ ಮಾಡಿ’; ತಿಂಡಿ ಬಂಡಿ ಎತ್ತಂಗಡಿ: ಡಿಸಿ ಎದುರು ಅಂಗಲಾಚಿದ 8 ವರ್ಷದ ಬಾಲಕ!

ಬೆಳಗಿನ ತಿಂಡಿ ಮಳಿಗೆಯನ್ನು ನಡೆಸುತ್ತಿದ್ದ ಮಹಿಳೆಯ ಅಂಗಡಿಯನ್ನು ರಸ್ತೆ ಅಗಲೀಕರಣದ ಸಲುವಾಗಿ ಅಧಿಕಾರಿಗಳು ಎತ್ತಂಗಡಿ ಮಾಡಿಸಿದ ಹಿನ್ನಲೆ 8 ವರ್ಷದ ಬಾಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ಕೊಟ್ಟ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ವರದಿಯಾಗಿದೆ.

ಜಿಲ್ಲಾಧಿಕಾರಿಗಳಾದ ನಾಗಲಕ್ಷ್ಮಿ ಅವರನ್ನು ಭೇಟಿಗಾಗಿ ಡಿಸಿ ಕಚೇರಿಗೆ ಆಗಮಿಸಿದ ಯಶವಂತ್ ಎಂಬ ಪುಟ್ಟ ಪೋರ, ತನ್ನ ಸಮಸ್ಯೆಯನ್ನು ಬರೆದ ಪತ್ರವನ್ನು ಹಿಡಿದು ಬಂದಿರುವುದು ಸಿಬ್ಬಂದಿಗಳ ಗಮನ ಸೆಳೆದಿದೆ. ಇದನ್ನು ಓದಿದ ಬಳಿಕ ಅಧಿಕಾರಿಗಳ ಕಣ್ಣಂಚಲ್ಲಿ ನೀರು ಮೂಡಿದೆ. ಪತ್ರದಲ್ಲಿ, ‘ನನ್ನ ತಾಯಿ ನಾವೆಲ್ಲರೂ (ಮನೆಯವರು) ಸಾಯಬೇಕೆಂದು ಒತ್ತಾಯಿಸುತ್ತಿದ್ದಾರೆ. ಹೀಗಾಗಿಯೇ ನಾನು ಇಲ್ಲಿಗೆ ಬಂದಿರುವೆ. ನಾವು ನಮ್ಮ ತಿಂಡಿ ಅಂಗಡಿಯನ್ನು ಮತ್ತೆ ನಡೆಸಿಕೊಂಡು ಹೋಗುವಂತೆ ಅನುಮತಿ ಮಾಡಿಕೊಡಿ. ದಯವಿಟ್ಟು ನಮಗೆ ಬದುಕಲು ಸಹಾಯ ಮಾಡಿ’ ಎಂದು ಬರೆದಿದ್ದಾನೆ.
ಜೀವನಕ್ಕೆ ಏಕೈಕ ಆಧಾರವಾಗಿರುವ ತಿಂಡಿ ಬಂಡಿಯನ್ನು ಅಧಿಕಾರಿಗಳು ರಸ್ತೆ ಅಗಲೀಕರಣದಿಂದಾಗಿ ಎತ್ತಂಗಡಿ ಮಾಡಿಸಿದ ಕಾರಣದಿಂದ ಇಂದು ತಮ್ಮ ಕುಟುಂಬ ಬೀದಿಗೆ ಬಂದಿದೆ. ನಮ್ಮ ಇಡೀ ಕುಟುಂಬಕ್ಕೆ ಇದ್ದ ಏಕೈಕ ಆದಾಯದ ಮೂಲ ಇದಾಗಿತ್ತು. ಈಗ ಇದೇ ನಮ್ಮೊಂದಿಗೆ ಇಲ್ಲ. ಅಮ್ಮ, ನಾವೆಲ್ಲರೂ ಸಾಯುವುದೇ ಕೊನೆಯ ದಾರಿ ಎಂದು ಹೇಳುತ್ತಿದ್ದಾರೆ. ದಯವಿಟ್ಟು ನಮಗೆ ಬದುಕಲು ಸಹಾಯ ಮಾಡಿ ಎಂದು ಯಶ್ವಂತ್ ಡಿಸಿ ಎದುರು ಅಂಗಲಾಚಿ ಬೇಡಿಕೊಂಡಿದ್ದಾನೆ.

ಡಿಸಿ ಭಾವುಕ ಸ್ಪಂದನೆ
ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಬಾಲಕ ಯಶವಂತ್ ಧೈರ್ಯದ ನುಡಿಗೆ ಭಾವುಕರಾದ ಜಿಲ್ಲಾಧಿಕಾರಿ ನಾಗಲಕ್ಷ್ಮಿ, ಅರ್ಜಿಯನ್ನು ಸ್ವೀಕರಿಸುವ ಮೂಲಕ ಅಸ್ತು ಎಂದರು. ‘ನಿಮ್ಮ ತಾಯಿಯ ತಿಂಡಿ ಅಂಗಡಿಗೆ ಶೀಘ್ರವೇ ಜಾಗ ಒದಗಿಸಿಕೊಡುತ್ತೇವೆ’ ಎಂದು ಭರವಸೆ ನೀಡಿದರು. ಬಾಲಕನ ಮನವಿ ಬೆನ್ನಲ್ಲೇ ಪುರಸಭೆ ಅಧಿಕಾರಿಗಳಿಗೆ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಲು ಮತ್ತು ಕುಟುಂಬಕ್ಕೆ ಜೀವನೋಪಾಯದ ಆಯ್ಕೆಗೆ ಸಹಾಯ ನೀಡುವಂತೆ ನಿರ್ದೇಶಿಸಿದ್ದಾರೆ.
ಅಷ್ಟಕ್ಕೂ ಆದ್ದದ್ದೇನು?
ಗುಂಟೂರು ನಗರದ ವೆಂಕಟರಾವ್ ಪೇಟಾದ ನಿವಾಸಿಯಾದ ಯಶವಂತ್ ತಾಯಿ ಅಲವಲ್ ರಾಧಿಕಾ, ಈ ಹಿಂದೆ ಸರ್ಕಾರಿ ಆಸ್ಪತ್ರೆಯ ಬಳಿ ತಿಂಡಿ ಗಾಡಿಯನ್ನು ನಡೆಸುತ್ತಿದ್ದರು. ಈ ವೇಳೆ ರಸ್ತೆ ಅಗಲೀಕರಣ ಕಾರ್ಯದ ಹಿನ್ನಲೆ ಪರ್ಯಾಯ ಸ್ಥಳವನ್ನು ಒದಗಿಸದೆ ರಾಧಿಕಾ ಅವರ ಜೀವನೋಪಾಯದ ಬಂಡಿಯನ್ನು ತಕ್ಷಣವೇ ತೆರವು ಮಾಡುವಂತೆ ಅಧಿಕಾರಿಗಳು ಆದೇಶಿಸಿದ್ದರು.
ಪುರಸಭೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ರಾಧಿಕಾಗೆ ತಿಂಡಿ ಬಂಡಿಯನ್ನು ಬೇರೆಡೆ ನಡೆಸಲು ಅನುಮತಿ ಸಿಗಲಿಲ್ಲ. ಅಧಿಕಾರಿಗಳು ತಮ್ಮ ತಳ್ಳುವ ಗಾಡಿಯನ್ನು ಕಾಲುವೆಗೆ ಬಿಸಾಡಿದ್ದಾರೆ ಎಂದು ರಾಧಿಕಾ ಅಳಲು ವ್ಯಕ್ತಪಡಿಸಿದ್ದರು. ಈ ಘಟನೆ ಕುಟುಂಬವನ್ನು ತೀವ್ರ ಆರ್ಥಿಕ ಬಿಕ್ಕಟ್ಟಿಗೆ ದೂಡಿತು ಎಂದು ಯಶವಂತ್ ಜಿಲ್ಲಾಧಿಕಾರಿಗೆ ವಿವರಿಸಿದ್ದಾನೆ
