ದಾವಣಗೆರೆಯಲ್ಲಿ ಹೊಸ ಮಸೀದಿ ನಿರ್ಮಾಣ ವಿರೋಧದ ವಿವಾದ

ದಾವಣಗೆರೆ: ನಗರದ ಮಹಾನಗರ ಪಾಲಿಕೆ ಸುಪರ್ದಿಗೆ ಬರುವ ವಾರ್ಡ್‌ವೊಂದರಲ್ಲಿ ಏಕಾಏಕಿ ಮಸೀದಿ ನಿರ್ಮಾಣಕ್ಕೆ ಮುಂದಾಗಿದ್ದು, ಇದಕ್ಕೆ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ದಾವಣಗೆರೆ ನಗರದ ಎಸ್‌ಓಜಿ ಕಾಲೊನಿಯಲ್ಲಿ ಮಸೀದಿ ನಿರ್ಮಾಣಕ್ಕೆ ಜನರಿಂದ ವಿರೋಧ ವ್ಯಕ್ತವಾಗಿದೆ. ದಾವಣಗೆರೆ ನಗರಪಾಲಿಕೆಯ 31ನೆ ವಾರ್ಡ್ಗೆ ಅಂಟಿಕೊಂಡಿರುವ ಈ ಜಾಗ ತೋಳಹುಣಸೆ ಗ್ರಾಮ ಪಂಚಾಯತ್ ವಾಪ್ತಿಗೆ ಬರುವ ಪಾಮೇನಹಳ್ಳಿ ಗ್ರಾಮದ ಸರ್ವ ನಂಬರ್‌ನಲ್ಲಿ ಇದೆ. ಇಲ್ಲಿ ಕಳೆದ 20 ವರ್ಷಗಳ ಹಿಂದೆ ವ್ಯಕ್ತಿಯೊಬ್ಬರಿಂದ 18 ಗುಂಟೆ ಜಮೀನನ್ನ ಮಲ್ಲೇಶ್ ಎಂಬವರು ಇಸಿ ಮಾಡಿಸಿಕೊಂಡು ಮುಸ್ಲಿಂ ಸಮಾಜದವರಿಗೆ ನೀಡಿದ್ದಾರೆ. ಇಷ್ಟು ದಿನ ಸುಮ್ಮನಿದ್ದ ಮುಸ್ಲಿಂ ಸಮಾಜದ ಕೆಲ ಮುಖಂಡರು ಕಳೆದ ಒಂದು ವಾರದಿಂದ ಮಸೀದಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ.
ಮೊದಮೊದಲು ನೇರವಾಗಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಸಮುದಾಯದ ಪ್ರಭಾವಿಗಳು, ಯಾವಾಗ ಎಸ್‌ಓಜಿ ಕಾಲೊನಿಯ ಜನ ವಿರೋಧ ಮಾಡಲು ಪ್ರಾರಂಭಿಸಿದರೋ ಅಂದಿನಿಂದ ಜನರು ಕೆಲಸಕ್ಕೆ ಹೋದಾಗ ಅಥವಾ ಮುಂಜಾನೆ ನಾಲ್ಕು ಗಂಟೆಗೆ ಬಂದು ಮಸೀದಿ ನಿರ್ಮಾಣ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಮಸೀದಿ ನಿರ್ಮಾಣದಿಂದ ಸ್ಥಳೀಯವಾಗಿ ಸಮಸ್ಯೆ ಆಗುತ್ತೆ ಅಂತ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ‘ಪ್ರಾಣ ಹೋದರು ಸರಿಯೇ ನಾವು ಮಸೀದಿ ನಿರ್ಮಾಣ ಮಾಡಲು ಅವಕಾಶ ಕೊಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಮಸೀದಿ ನಿರ್ಮಾಣದ ಕುರಿತು ಯಾರಿಗೂ ಮಾಹಿತಿ ನೀಡಿಲ್ಲ ಎನ್ನಲಾಗಿದೆ.

ಮಸೀದಿ ನಿರ್ಮಾಣಕ್ಕೆ ಗ್ರಾಮ ಪಂಚಾಯತ್‌ನಿಂದ ಯಾವುದೇ ಅನುಮತಿ ಪಡೆದಿಲ್ಲ. ಅನುಮತಿ ಪಡೆಯದೆ ಮಸೀದಿ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂಬ ಆರೋಪವಿದೆ. ಆರು ವರ್ಷಗಳ ಹಿಂದೆ ಮಸೀದಿ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿತ್ತು. ಈಗ ಯಾರ ಗಮನಕ್ಕೂ ಬಾರದೇ ಮಸೀದಿ ನಿರ್ಮಾಣ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪ ಮಾಡಲಾಗುತ್ತಿದೆ. ಮಸೀದಿ ನಿರ್ಮಿಸಲು ದಾಖಲಾತಿ ನೀಡಿ. ನಂತರ ಕಾಮಗಾರಿ ಆರಂಭ ಮಾಡಿ ಎಂದು ಪೊಲೀಸ್ ಹೇಳಿದ್ದಾರೆ. ಇಷ್ಟಿದ್ದರೂ ಮತ್ತೆ ಕಾಮಗಾರಿ ಆರಂಭಿಸಿದ್ದಾರೆ ಎನ್ನಲಾಗಿದೆ. ರಾಜ್ಯ ಸರ್ಕಾರವೇ ಅನುಮತಿ ನೀಡಿದ್ದರೂ, ನಾವು ಅವಕಾಶ ಕೊಡುವುದಿಲ್ಲ ಎಂದು ಜನ ಪಟ್ಟು ಹಿಡಿದಿದ್ದಾರೆ.
ಮಸೀದಿ ನಿರ್ಮಾಣಕ್ಕೆ ಗ್ರಾಮದ ಜನರ ವಿರೋಧದ ಬೆನ್ನಲ್ಲೇ ಜಾಗದ ಮೂಲ ಮಾಲೀಕ ಎಂದು ಬಂದ ಕುಟುಂಬ 20 ವರ್ಷದಿಂದ ಈ ಜಾಗ ವಿವಾದ ಕೋರ್ಟ್ನಲ್ಲಿ ಇದೆ. ನಮಗೇ ಗೊತ್ತಿಲ್ಲದಂತೆ ಮಸೀದಿ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ.
