ಕೊಬ್ಬರಿ ಎಣ್ಣೆ ಬೆಲೆ ಗಗನಕ್ಕೆ – ಲೀಟರ್‌ಗೆ ₹420, ಕೊಬ್ಬರಿ ಬೆಲೆ ₹280ಕ್ಕೆ ಜಿಗಿತ; ಅಭಾವಕ್ಕೆ ಎಳನೀರು ಮಾರಾಟವೇ ಕಾರಣ!
ಬೆಂಗಳೂರು; ನಿತ್ಯ ಒಂದಿಲ್ಲೊಂದು ರೀತಿಯಲ್ಲಿ ಬೇಕೆ ಬೇಕು ಎಂಬಂತೆ ಬೇಡಿಕೆ ಸೃಷ್ಟಿಸಿದ್ದ ಕೊಬ್ಬರಿ ಎಣ್ಣೆಗೆ (Coconut Oil) ಇದೀಗ ಮತ್ತಷ್ಟು ಬೇಡಿಕೆ ಹೆಚ್ಚಾಗಿದೆ. ಅದೇ ರೀತಿ ದರವೂ ಏರಿಕೆಯಾಗುತ್ತಿದ್ದು, ಲೀಟರ್ಗೆ 390 ರೂ.ಗಳಿಂದ 420 ರೂ. ವರೆಗೆ ಮಾರಾಟವಾಗುತ್ತಿದೆ.
ಪರಿಣಾಮವಾಗಿ ಕೊಬ್ಬರಿ ಬೆಲೆ ಕೂಡ 200 ರೂ. ಗಡಿದಾಟಿ ಮುನ್ನುಗ್ಗುತ್ತಿದೆ. ಬೇಸಿಗೆಯಲ್ಲಿ ಎಳನೀರಿಗೆ ಭಾರೀ ಬೇಡಿಕೆ ಇದ್ದ ಹಿನ್ನೆಲೆ ಎಳನೀರು ಮಾರಾಟ ಹೆಚ್ಚಾಗಿದ್ದು, ಇದೀಗ ಕೊಬ್ಬರಿ ಎಣ್ಣೆ ಹಾಗೂ ಕೊಬ್ಬರಿ ಕಾಯಿ ಅಭಾವಕ್ಕೆ ಕಾರಣವಾಗಿದೆ. ಪ್ರತಿ ಕೆಜಿಗೆ 150 ರಿಂದ 200 ರೂ. ಇದ್ದ ಕೊಬ್ಬರಿ ದರ ಇದೀಗ ಕೆಜಿಗೆ 250 ರಿಂದ 280 ರೂಪಾಯಿಗೆ ಜಿಗಿತ ಕಂಡಿದೆ.
ಕಳೆದ ವರ್ಷ ಲೀಟರ್‌ಗೆ 200 ರೂಪಾಯಿಯಷ್ಟಿದ್ದ ಕೊಬ್ಬರಿ ಎಣ್ಣೆ ದರ ಈಗ 390 ರೂ.ಗಳಿಂದ 420 ರೂ. ವರೆಗೆ ಏರಿಕೆ ಕಂಡಿದೆ. ಕೆಲವೆಡೆ ಉತ್ತಮ ಗುಣಮಟ್ಟದ ಕೊಬ್ಬರಿ ಎಣ್ಣೆ ಪ್ರತಿ ಲೀಟರ್ಗೆ 500 ರೂಪಾಯಿ ತನಕ ಮಾರಾಟವಾಗುತ್ತಿದೆ. ಈ ವರ್ಷದ ಹೊಸ ತೆಂಗಿನಕಾಯಿ ಇಳುವರಿ ಅಕ್ಟೋಬರ್-ನವೆಂಬರ್ ವೇಳೆಗೆ ಬರುವ ನಿರೀಕ್ಷೆಯಿದ್ದು, ಅಲ್ಲಿ ತನಕ ಮಾರುಕಟ್ಟೆಗೆ ಒಣಕೊಬ್ಬರಿ ಬರುವುದು ಅನುಮಾನ ಎನ್ನಲಾಗುತ್ತಿದೆ. ಸದ್ಯ ಕೇರಳ, ತಮಿಳುನಾಡಿನಿಂದಲೂ ಕೊಬ್ಬರಿ ಹಾಗೂ ಕೊಬ್ಬರಿ ಎಣ್ಣೆ ಬರುತ್ತಿಲ್ಲ. ಇದು ವ್ಯಾಪಾರಿಗಳಿಗೂ ಸಂಕಷ್ಟ ತಂದಿಟ್ಟಿದೆ.
ಬಹುತೇಕ ರೈತರು ಎಳನೀರನ್ನು ಮಾರಾಟ ಮಾಡುವ ಜೊತೆಗೆ ಬೇರೆಡೆಗೆ ರಫ್ತು ಮಾಡಿರುವುದು ಕೂಡ ಇದೀಗ ಕೊಬ್ಬರಿಯ ಅಭಾವ ಎದುರಾಗಲು ಕಾರಣವಾಗಿದೆ. ಇತ್ತ ಕೊಬ್ಬರಿ ಎಣ್ಣೆಯ ಮಾರಾಟದ ಮೇಲೂ ಪರಿಣಾಮ ತಟ್ಟುತ್ತಿದ್ದು, ಖರೀದಿ ಕೂಡ ಕುಸಿತವಾಗುತ್ತಿದೆ.
ಸದ್ಯ ಕರ್ನಾಟಕದಲ್ಲಷ್ಟೇ ಅಲ್ಲದೇ ಹೊರರಾಜ್ಯಗಳಲ್ಲೂ ಕೊಬ್ಬರಿ ಹಾಗೂ ಕೊಬ್ಬರಿ ಎಣ್ಣೆಯ ಲಭ್ಯತೆ ಕಡಿಮೆಯಾಗತ್ತಿದೆ. ಸದ್ಯ ಗಗನಕ್ಕೇರಿರುವ ಕೊಬ್ಬರಿ ಹಾಗೂ ಕೊಬ್ಬರಿ ಎಣ್ಣೆಯ ದರ ಯಾವಾಗ ಕಡಿಮೆಯಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.