ಹಣಕ್ಕಾಗಿ ತಾಯಿಯ ಕತ್ತು ಹಿಸುಕಿ ಕೊಲೆ ಮಾಡಿದ ಮಗ

ಮಣಿಪಾಲ : ಮಗನೊಬ್ಬ ಹಣಕ್ಕಾಗಿ ತನ್ನ ತಾಯಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ನಡೆದಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಮಗ ಮಾಡಿ ಕೃತ್ಯ ಬೆಳಕಿಗೆ ಬಂದಿದ್ದು, ಈ ಸಂಬಂಧ ಆರೋಪಿ ಪುತ್ರನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಕೊಲೆಗೀಡಾದವರನ್ನು ಪದ್ಮಾಬಾಯಿ (45) ಎಂದು ಗುರುತಿಸಲಾಗಿದೆ. ಮೃತರ ಪುತ್ರ ಈಶ ನಾಯ್ಕ್ (26) ಕೊಲೆ ಆರೋಪಿ.


ಜೂನ್ 18ರಂದು ರಾತ್ರಿ ಪದ್ಮಾಬಾಯಿ ಸೊಂಟ ನೋವಿನಿಂದ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅಂದು ರಾತ್ರಿ ಪದ್ಮಾಬಾಯಿ ಅವರ ತಂಗಿ ಶಿಲ್ಪಾ ಅವರಿಗೆ ಕರೆ ಮಾಡಿದ ಈಶ ನಾಯ್ಕ್, ತಾಯಿಗೆ ಸೌಖ್ಯವಿಲ್ಲ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹಣ ಕಳುಹಿಸುವಂತೆ ತಿಳಿಸಿದ್ದನು. ಅದರಂತೆ ಶಿಲ್ಪಾ ಆನ್‌ಲೈನ್ ಮೂಲಕ ಹಣ ಕಳುಹಿಸಿದ್ದರು. ಜೂನ್ 19ರಂದು ಬೆಳಗ್ಗೆ ಶಿಲ್ಪಾರಿಗೆ ಕರೆ ಮಾಡಿದ ಈಶ ನಾಯ್ಕ್ ತಾಯಿ ಬೆಳಗ್ಗೆ ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿಸಿದ್ದನು.