ಭಾರತದಲ್ಲಿ LPG ಪೂರೈಕೆ ಆತಂಕ: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಎಚ್ಚರಿಕೆ

ನವದೆಹಲಿ: ಭಾರತದಲ್ಲಿ ಅಡುಗೆ ಅನಿಲ ಬಳಕೆ ತುಂಬಾ ಹೆಚ್ಚಾಗಿದೆ. ದೇಶದ 33 ಕೋಟಿ ಮನೆಗಳಲ್ಲಿ ಜನರು ಅಡುಗೆಗಾಗಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಬಳಸುತ್ತಾರೆ. ಆದರೆ ಭಾರತದಲ್ಲಿ ಬಳಸುವ ಎಲ್‌ಪಿಜಿಯ ಹೆಚ್ಚಿನ ಭಾಗವು ವಿದೇಶಗಳಿಂದ ಬರುತ್ತದೆ ಎಂಬುದು ಗಮನಾರ್ಹ. ಭಾರತಕ್ಕೆ ಅಗತ್ಯವಾದ ಎಲ್‌ಪಿಜಿಯಲ್ಲಿ ಶೇ 95 ಅನ್ನು ಸೌದಿ ಅರೇಬಿಯಾ, ಯುಎಇ ಮತ್ತು ಕತಾರ್‌ನಂತಹ ಮಧ್ಯಪ್ರಾಚ್ಯ ದೇಶಗಳು ಪೂರೈಸುತ್ತವೆ. ಅಂದರೆ, ಪ್ರತಿ 3 ಸಿಲಿಂಡರ್‌ಗಳಲ್ಲಿ 2 ಈ ದೇಶಗಳಿಂದ ಬರುತ್ತವೆ.

ಇಸ್ರೇಲ್ ಇರಾನ್ ಯುದ್ಧ, ಇರಾನ್ನ ಪರಮಾಣು ಸ್ಥಳಗಳ ಮೇಲೆ ಅಮೆರಿಕ ದಾಳಿ ಮಾಡಿದ ಬಳಿಕ ಈಗ ಮಧ್ಯಪ್ರಾಚ್ಯ ಭಾಗದಲ್ಲಿ ಉದ್ವಿಗ್ನತೆ ಹೆಚ್ಚಿದೆ. ಇದು ಭಾರತಕ್ಕೆ ಎಲ್‌ಪಿಜಿ ಪೂರೈಕೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಭಾರತೀಯ ಮನೆಗಳಲ್ಲಿ ಅಡುಗೆ ಅನಿಲದ ಕೊರತೆ ಉಂಟಾಗಬಹುದು. ಭಾರತದಲ್ಲಿ ಎಲ್‌ಪಿಜಿ ಬಹಳ ಅಗತ್ಯವಾದ ವಸ್ತುವಾಗಿದ್ದು, ಬೇರೆ ಪ್ರದೇಶಗಳಿಂದ ಕ್ಷಿಪ್ರವಾಗಿ ಅದರ ಸರಬರಾಜು ಆಗುವಂತೆ ಮಾಡುವುದು ಅಷ್ಟು ಸುಲಭವಲ್ಲ.

ಭಾರತದ ಬಳಿ 16 ದಿನಗಳಿಗೆ ಆಗುವಷ್ಟು ಮಾತ್ರ ಎಲ್‌ಪಿಜಿ ಸಂಗ್ರಹ
ಕಳೆದ 10 ವರ್ಷಗಳಲ್ಲಿ, ಭಾರತದಲ್ಲಿ LPG ಬಳಕೆ ದ್ವಿಗುಣಗೊಂಡಿದೆ. ಹೆಚ್ಚು ಹೆಚ್ಚು ಜನರು ಅದನ್ನು ಬಳಸುವಂತೆ ಸರ್ಕಾರವೇ ಉತ್ತೇಜಿಸಿದೆ. ಇದರೊಂದಿಗೆ, LPG ಮೇಲಿನ ಭಾರತದ ಅವಲಂಬನೆಯೂ ಹೆಚ್ಚಾಗಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪ್ರಕಾರ, ಭಾರತವು ಕೇವಲ 15-16 ದಿನಗಳಿಗಾಗುವಷ್ಟು LPG ಸಂಗ್ರಹ ಸಾಮರ್ಥ್ಯ ಹೊಂದಿದೆ.
ಅಂದರೆ, ಎಲ್‌ಪಿಜಿ ಪೂರೈಕೆಯೇ ನಿಂತುಹೋದರೆ, ಭಾರತದ ಬಳಿ ಇರುವ ಎಲ್‌ಪಿಜಿ ಸಂಗ್ರಹ 15-16 ದಿನಗಳವರೆಗೆ ಮಾತ್ರ ಸಾಕಾಗುತ್ತದೆ. ಭಾರತದಲ್ಲಿ ಒಟ್ಟು LPG ಟ್ಯಾಂಕ್ ಸುಮಾರು 1189.7 TMT ಆಗಿದೆ. ಇದು ಸುಮಾರು 15 ದಿನಗಳ ಅಗತ್ಯಗಳನ್ನು ಪೂರೈಸುತ್ತದೆ.
ಅಚ್ಚರಿ ಎಂದರೆ, ಎಲ್‌ಪಿಜಿಗೆ ಹೋಲಿಸಿದರೆ ಪೆಟ್ರೋಲ್ ಮತ್ತು ಡೀಸೆಲ್ ವಿಷಯದಲ್ಲಿ ಭಾರತದ ಪರಿಸ್ಥಿತಿ ಉತ್ತಮವಾಗಿದೆ. ಭಾರತವು ಈ ಎರಡನ್ನೂ ರಫ್ತು ಮಾಡುತ್ತದೆ. ಅಗತ್ಯವಿದ್ದರೆ, ರಫ್ತುಗಳನ್ನು ನಿಲ್ಲಿಸುವ ಮೂಲಕ ದೇಶೀಯ ಅಗತ್ಯಗಳನ್ನು ಪೂರೈಸಬಹುದು. ಆದರೆ LPG ಗೆ ಹಾಗೆ ಮಾಡುವುದು ಕಷ್ಟ. ಅಮೆರಿಕ, ಯುರೋಪ್, ಮಲೇಷ್ಯಾ ಅಥವಾ ಆಫ್ರಿಕಾದಂತಹ ದೇಶಗಳಿಂದ LPG ತರಬಹುದು. ಆದರೆ ಅಲ್ಲಿಂದ ಸಾಗಣೆಗಳು ಬರಲು ಸಮಯ ತೆಗೆದುಕೊಳ್ಳುತ್ತದೆ.

ತೈಲ ದಾಸ್ತಾನುಗಳು ಎಲ್‌ಪಿಜಿಗಿಂತ ಉತ್ತಮ
ಎಲ್‌ಪಿಜಿಗೆ ಮತ್ತೊಂದು ಪರ್ಯಾಯವೆಂದರೆ ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿಎನ್‌ಜಿ). ಆದರೆ ಇದು ಕೇವಲ 1.5 ಕೋಟಿ ಮನೆಗಳಲ್ಲಿ ಮಾತ್ರ ಲಭ್ಯವಿದೆ. 33 ಕೋಟಿ ಎಲ್‌ಪಿಜಿ ಸಂಪರ್ಕಗಳಿಗೆ ಹೋಲಿಸಿದರೆ ಈ ಸಂಖ್ಯೆ ತುಂಬಾ ಕಡಿಮೆ. ಮೊದಲು ಜನರು ಸೀಮೆಎಣ್ಣೆಯನ್ನು ಬಳಸುತ್ತಿದ್ದರು. ಆದರೆ ಈಗ ಹೆಚ್ಚಿನ ಸ್ಥಳಗಳಲ್ಲಿ ಅದನ್ನು ನಿಲ್ಲಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಎಲ್‌ಪಿಜಿ ಕೊರತೆಯ ಸ್ಥಿತಿ ಉದ್ಭವಿಸಿದಾಗ, ನಗರಗಳಲ್ಲಿ ಉಳಿದಿರುವ ಏಕೈಕ ಆಯ್ಕೆಯೆಂದರೆ ವಿದ್ಯುತ್ ಬಳಸಿ ಆಹಾರವನ್ನು ಬೇಯಿಸುವುದು.
ಭಾರತದಲ್ಲಿ ತೈಲಕ್ಕಾಗಿ 74 ದಿನಗಳ ಸ್ಟಾಕ್ ಇದೆ. ರಿಫೈನರಿ, ಪೈಪ್ಲೈನ್ ಮತ್ತು ನ್ಯಾಷನಲ್ ರಿಸರ್ವ್ಗಳಲ್ಲಿ ತುಂಬಾ ತೈಲ ಇದೆ. ಈ ರಿಫೈನರಿಗಳು 74 ದಿನಗಳವರೆಗೆ ಕಾರ್ಯನಿರ್ವಹಿಸಲು ಆಗುವಷ್ಟು ತೈಲ ಸಂಗ್ರಹ ಭಾರತದಲ್ಲಿದೆ.
ಮಧ್ಯಪ್ರಾಚ್ಯ ಬಿಕ್ಕಟ್ಟಿದ್ದರೂ ತೈಲ ಕಂಪನಿಗಳು ಭಯಭೀತಗೊಂಡಿಲ್ಲ. ಇವತ್ತಿನ ಸಂದರ್ಭದಲ್ಲಿ ತೈಲ ಪೂರೈಕೆ ಸಂಪೂರ್ಣವಾಗಿ ನಿಲ್ಲುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ತಜ್ಞರ ಪ್ರಕಾರ, ತೈಲ ಬೆಲೆಗಳು ಅಲ್ಪಾವಧಿಗೆ ಹೆಚ್ಚಾಗಬಹುದು. ಆದರೆ ಬೇಗ ಸಾಮಾನ್ಯ ಸ್ಥಿತಿಗೆ ಮರಳಬಹುದು.
ಕಳೆದ ಕೆಲವು ವರ್ಷಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗಿಲ್ಲ ಮತ್ತು ಭವಿಷ್ಯದಲ್ಲಿಯೂ ಸ್ಥಿರವಾಗಿರುವ ನಿರೀಕ್ಷೆ ಇದೆ. ಆದರೆ ಸಾಮಾನ್ಯ ಜನರು ಯಾವುದೇ ಸಮಸ್ಯೆಗಳನ್ನು ಎದುರಿಸದಂತೆ LPG ಪೂರೈಕೆಯ ಮೇಲೆ ನಿಗಾ ಇಡುವುದು ಮುಖ್ಯ.
