ವೇತನ ಜಗಳಕ್ಕೆ ಸಹೋದ್ಯೋಗಿಯ ಗುದದ್ವಾರಕ್ಕೆ ಏರ್‌ಗನ್ ನಿಂದ ದಾಳಿ

ಬೆಂಗಳೂರು:ನಿನಗೇಕೆ ಇಷ್ಟೊಂದು ವೇತನ ಎಂದು ಸಹೋದ್ಯೋಗಿಯೊಂದಿಗೆ ಜಗಳಕ್ಕಿಳಿದ ವ್ಯಕ್ತಿಯೊಬ್ಬ, ಆತನ ಒಳಹುಡುಪು ತೆಗೆದು ಏರ್‌ಗನ್‌ನಿಂದ ಗುದದ್ವಾರಕ್ಕೆ ಗಾಳಿ ಬಿಟ್ಟಿದ್ದು, ಪರಿಣಾಮ ವ್ಯಕ್ತಿ ಗಂಭೀರ ಸ್ಥಿತಿಗೆ ತಲುಪಿರುವ ಘಟನೆಯೊಂದು ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಸ್ಟವ್ ಕ್ರಾಫ್ಟ್ ಕಾರ್ಖಾನೆಯಲ್ಲಿ ನಡೆದಿದೆ.

ಹಾಸನದ ಬೇಲೂರು ತಾಲ್ಲೂಕಿನ ಮೂಲದ ಹಾರೋಹಳ್ಳಿಯ ಎರೆಹಳ್ಳಿ ನಿವಾಸಿ ಎಂ.ಎಂ. ಪರಮೇಶ್ (35) ಸಂತ್ರಸ್ತ ವ್ಯಕ್ತಿಯಾಗಿದ್ದು, ಆರೋಪಿಯನ್ನು ರಾಮನಗರ ನಿವಾಸಿ ಗೋವಿಂದೇಗೌಡ (28) ಗುರ್ತಿಸಲಾಗಿದೆ.
ಘಟನೆಯು ಮೇ 23 ರಂದು ಸಂಜೆ 5 ಗಂಟೆ ಸುಮಾರಿಗೆ ನಡೆದಿದೆ. ತಡವಾಗಿ ಬೆಳಕಿಗೆ ಬಂದಿದೆ. ಘಟನೆ ನಡೆದ 25 ದಿನಗಳ ನಂತರ ಸೋಮವಾರ ದೂರು ದಾಖಲಾಗಿದೆ.
ಪರಮೇಶ್ ಹಾಗೂ ಗೋವಿಂದೇ ಗೌಡ ಇಬ್ಬರು ಗುತ್ತಿಗೆ ಕಾರ್ಮಿಕರಾಗಿದ್ದು, ಪರಮೇಶ್ ಕಳೆದ 17 ವರ್ಷಗಳಿಂದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾರ್ಖಾನೆ ಮಾಲೀಕರು ಇವರಿಗೆ 35,000 ರೂ. ವೇತನ ನೀಡುತ್ತಿದ್ದು, ಆರೋಪಿ 18,000 ರೂ. ಪಡೆಯುತ್ತಿದ್ದ.
ಆರೋಪಿ ಪರಮೇಶ್ ಜೊತೆಗೆ ವೇತನ ತಾರತಮ್ಯ ವಿಚಾರವಾಗಿ ಆಗಾಗ್ಗೆ ಜಗಳಕ್ಕಿಳಿಯುತ್ತಿದ್ದ ಎನ್ನಲಾಗಿದೆ. ಮೇ.23 ರಂದು ಕೂಡ ಇದೇ ವಿಚಾರಕ್ಕೆ ಜಗಳ ಮಾಡಿದ್ದಾನೆ. ಈ ನಡುವೆ ಕೆಲಸ ನಂತರ ಪರಮೇಶ್ ಅವರು ಸ್ನಾನಕ್ಕೆ ತೆರಳಿದ್ದು, ಈ ವೇಳೆ ಒಳ ಉಡುಪು ತೆಗೆದು ಏರ್‌ಗನ್‌ನಿಂದ ಗುದದ್ವಾರಕ್ಕೆ ಗಾಳಿ ಬಿಟ್ಟಿದ್ದಾನೆ.
ಇದರಿಂದ ಪರಮೇಶ್ ಅವರ ಹೊಟ್ಟೆ ಊದಿಕೊಂಡಿದ್ದು, ನೋವು ತಡೆಯಲು ಸಾಧ್ಯವಾಗದೆ ಕಿರುಚಿಕೊಂಡಿದ್ದಾರೆ. ಕೂಡಲೇ ಆರೋಪಿ ಗೋವಿಂದ ಸ್ಥಳದಿಂದ ಓಡಿ ಹೋಗಿದ್ದಾನೆ. ಬಳಿಕ ಕಾರ್ಖಾನೆಯ ಇತರೆ ಸಿಬ್ಬಂದಿಗಳು ಪರಮೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪರಮೇಶ್ ಅವರು 25 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಬಹು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾರೆ. ಎರಡು ತಿಂಗಳ ನಂತರ ಕರುಳಿಗೆ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕಾರ್ಖಾನೆಯು 3 ಲಕ್ಷ ರೂಪಾಯಿ ವೈದ್ಯಕೀಯ ಬಿಲ್ ಪಾವತಿಸಿದೆ ಪರಮೇಶ್ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಈ ನಡುವೆ ಪರಮೇಶ್ವರ್ ಅವರು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಅವರ ಪತ್ನಿ ಕೆ.ಬಿ. ಸವಿತಾ ಅವರು ಗೋವಿಂದೇಗೌಡ ವಿರುದ್ಧ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ,
ಗೋವಿಂದ ಎಂಬುವವನು ನನ್ನ ಪತಿಯ ಗುದದ್ವಾರದ ಒಳಗೆ ಗಾಳಿ ಬಿಟ್ಟು ಕೊಲ್ಲಲು ಪ್ರಯತ್ನಿಸಿದ್ದಾನೆ. ಕೂಡಲೇ ಆತನ ವಿರುದ್ದ ಕ್ರಮ ಕೈಗೊಳ್ಳಬೇಕುʼ ಎಂದು ಆಗ್ರಹಿಸಿದ್ದಾರೆ.
ದೂರು ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ವಿರುದ್ಧ ಬಿಎನ್‌ಎಸ್ 289, ಬಿಎನ್‌ಎಸ್ 125 (ಎ), ಬಿಎನ್‌ಎಸ್ 352 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.
