ವಿಪ್ರೋ ಕಂಪನಿ ಲಾವುಕ್ ಖರೀದಿಗೆ ಯತ್ನವೇಕೆ?

ನವದೆಹಲಿ: ಭಾರತದ ವಿಪ್ರೋ ಇನ್ಫ್ರಾಸ್ಟ್ರಕ್ಚರ್ ಎಂಜಿನಿಯರಿಂಗ್ ಸಂಸ್ಥೆ ಫ್ರಾನ್ಸ್ ದೇಶದ ಏರೋಸ್ಪೇಸ್ ಸೆಕ್ಟರ್ ಕಂಪನಿ ಲಾವುಕ್ ಗ್ರೂಪ್ ಅನ್ನು ಖರೀದಿಸಲು ಹೊರಟಿದೆ. ಜಾಗತಿಕ ಏರೋಸ್ಪೇಸ್ ಕಂಪನಿಗಳಿಗೆ ಬಿಡಿಭಾಗಗಳನ್ನು ತಯಾರಿಸಿ ಸರಬರಾಜು ಮಾಡುವ ಲಾವುಕ್ ಗ್ರೂಪ್ ಸಂಸ್ಥೆಯಲ್ಲಿ ಬಹುಸಂಖ್ಯೆ ಪಾಲು ಹೊಂದುತ್ತಿರುವುದಾಗಿ ವಿಪ್ರೋ ಹೇಳಿದೆ. ಆದರೆ, ಎಷ್ಟು ಷೇರುಪಾಲು ಮತ್ತು ಎಷ್ಟು ಮೊತ್ತಕ್ಕೆ ಈ ಡೀಲ್ ಆಗುತ್ತಿದೆ ಎಂಬುದು ಗೊತ್ತಾಗಿಲ್ಲ. ವಿಪ್ರೋ ಸಂಸ್ಥೆ ನೀಡಿರುವ ಹೇಳಿಕೆ ಪ್ರಕಾರ ಈ ಡೀಲ್ ಇನ್ನೂ ಸಂಧಾನದ ಹಂತದಲ್ಲಿದೆ. ಬಹುತೇಕ ಅಂತಿಮಗೊಳ್ಳುವ ನಿರೀಕ್ಷೆ ಇದೆ ಎನ್ನಲಾಗಿದೆ. ಫ್ರಾನ್ಸ್ನಲ್ಲಿ ನಡೆಯುತ್ತಿರುವ ಪ್ಯಾರಿಸ್ ಏರ್ ಶೋನದಲ್ಲಿ ಎರಡೂ ಕಂಪನಿಗಳ ಮಧ್ಯೆ ಮಾತುಕತೆ ನಡೆದಿದೆ. ಷೇರುಪಾಲು ಖರೀದಿ ವಿಚಾರದ ಬಗ್ಗೆ ಎರಡೂ ಕಂಪನಿಗಳು ಜಂಟಿಯಾಗಿ ಹೇಳಿಕೆ ನೀಡಿದ್ದು, ಸಂಧಾನದ ಹಂತಕ್ಕೆ ಪ್ರವೇಶಿಸಿರುವುದಾಗಿ ತಿಳಿಸಿವೆ. ಈ ಖರೀದಿ ಪ್ರಸ್ತಾಪವನ್ನು ಸಂಬಂಧಿತ ಉದ್ಯೋಗಿ ಪ್ರತಿನಿಧಿ ಸಂಘಟನೆಗಳ ಸಮಾಲೋಚನೆಗೆ ಕಳುಹಿಸಲಾಗಿತ್ತು. ಅಗತ್ಯ ಅನುಮೋದನೆ ಸಿಕ್ಕಿದೆ’ ಎಂದು ವಿಪ್ರೋ ಇನ್ಫ್ರಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.


ಫ್ರಾನ್ಸ್ನ ಚಾರಿಟನ್ ಕುಟುಂಬದವರು ಲಾವುಕ್ ಗ್ರೂಪ್ ಅನ್ನು ನೋಡಿಕೊಳ್ಳುತ್ತಿದ್ದಾರೆ. ಮಿಕೆಲ್ ಚಾರಿಟನ್ ಅವರು ಸದ್ಯ ಈ ಕಂಪನಿಯ ಸಿಇಒ. ಜಾಗತಿಕ ವಿಮಾನ ತಯಾರಕ ಸಂಸ್ಥೆಗಳಿಗೆ ಇವರ ಕಂಪನಿಯು ಬಿಡಿಭಾಗಗಳನ್ನು ತಯಾರಿಸಿಕೊಡುತ್ತದೆ. ಈ ಸಂಸ್ಥೆಯನ್ನು ಯಾಕೆ ಮಾರಲು ಮುಂದಾಗಲಾಗಿದೆ ಎನ್ನುವುದು ಗೊತ್ತಾಗಿಲ್ಲ. ಮುಂದಿನ ಕೆಲ ತಿಂಗಳಲ್ಲಿ ಡೀಲ್ ಅಂತಿಮಗೊಳ್ಳುವ ನಿರೀಕ್ಷೆ ಇದೆ. ಹಾಗೇನಾದರೂ ಆದಲ್ಲಿ ಎರಡೂ ಕಂಪನಿಗಳ ಹೆಸರನ್ನು ಒಳಗೊಂಡ ಹೊಸ ಹೆಸರನ್ನು ಕಂಪನಿಗೆ ಇಡಬಹುದು. ವಿಪ್ರೋ ಲಾವುಕ್ ಎನ್ನುವ ಹೆಸರಿಡುವ ಸಾಧ್ಯತೆ ಇದೆ. ಹಾಗೆಯೇ, ಎರಡೂ ಕಂಪನಿಗಳ ಪ್ರತಿನಿಧಿಗಳಿರುವ ಜಂಟಿ ನಿರ್ದೇಶಕರ ಮಂಡಳಿಯನ್ನು ಸ್ಥಾಪಿಸಲಾಗಬಹುದು. ಮಿಕೆಲ್ ಚಾರಿಟನ್ ಅವರೆಯೇ ಈ ಕಂಪನಿಗೆ ಸಿಇಒ ಆಗಿ ಮುಂದುವರಿಯಬಹುದು ಎಂದೆನ್ನಲಾಗಿದೆ.