Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಉಡುಪಿಯಲ್ಲಿ ನೀಟ್ ಮಹಾ ಮೋಸ: ನಕಲಿ ರ‍್ಯಾಂಕ್‌ಕಾರ್ಡ್‌ ಸೃಷ್ಟಿ, ಸಮಗ್ರ ತನಿಖೆಗೆ ಆಗ್ರಹ

Spread the love

NEET: ನಕಲಿಯಲ್ಲಿ 107; ಅಸಲಿ ರ್‍ಯಾಂಕ್‌ 17 ಲಕ್ಷ !

ಉಡುಪಿ: ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ನಡೆಯುವ ರಾಷ್ಟ್ರೀಯ ಮಟ್ಟದ ನೀಟ್‌ ಪರೀಕ್ಷೆಯಲ್ಲೂ ನಕಲಿ ಅಂಕಪಟ್ಟಿ ತಯಾರಿಸಿ ವಿದ್ಯಾರ್ಥಿಗಳಿಗೆ ವಿತರಿಸುವ ಜಾಲ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಇತ್ತೀಚೆಗಷ್ಟೇ 2025ರ ನೀಟ್‌ ಫ‌ಲಿತಾಂಶ ಪ್ರಕಟಗೊಂಡಿತ್ತು.

ಅದರಲ್ಲಿ ರಾಜ್ಯದ ಹಲವು ವಿದ್ಯಾರ್ಥಿಗಳು 200 ರ್‍ಯಾಂಕ್‌ನೊಳಗೆ ಸಾಧನೆ ಮಾಡಿದ್ದರು. ಇದರ ಮಧ್ಯೆ ವಿದ್ಯಾರ್ಥಿಯೊಬ್ಬನ ಪರವಾ‌ಗಿ ಉಡುಪಿ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯ ಮಟ್ಟದಲ್ಲಿ ಎಂಟನೇ ಸ್ಥಾನ ಎಂದು ಹೇಳಲಾಗಿತ್ತು. ಈತನ “ಸಾಧನೆ’ ಬಗ್ಗೆ ಇತರ ವಿದ್ಯಾರ್ಥಿಗಳಿಗೆ ಸಂಶಯ ಬಂದು ಪರಿಶೀಲಿ ಸಿದಾಗ ಅದು ನಕಲಿ ಅಂಕಪಟ್ಟಿ ಎಂಬುದು ಗೊತ್ತಾಯಿತು. ಅಸಲಿಗೆ ಆತನಿಗೆ ಸಿಕ್ಕಿದ್ದು 17 ಲಕ್ಷ ಸರಣಿಯ ರ್‍ಯಾಂಕ್‌!.
ಇದಲ್ದಲೇ ಆತ ಮತ್ತು ಆತನ ಪೋಷಕರು ನಕಲಿ ಅಂಕಪಟ್ಟಿಯನ್ನೇ ಕಾಲೇಜಿನ ಮೂಲಕ ಪ್ರಚಾರ ತಂತ್ರಕ್ಕೆ ಯತ್ನಿಸಿರುವುದೂ ಬೆಳಕಿಗೆ ಬಂದಿದೆ.

ಸಹಿಯೇ ಅದಲು ಬದಲು
ಆ ವಿದ್ಯಾರ್ಥಿಯ ಅಸಲಿ ಅಂಕಪಟ್ಟಿಯಲ್ಲಿ 65 ಅಂಕ ಎಂದಿದ್ದು, ನಕಲಿ ಪಟ್ಟಿಯಲ್ಲಿ 646 ಎಂದಿದೆ. ನಕಲಿ ಸರ್ಟಿಫಿಕೆಟ್‌ನ ಫಾಂಟ್‌ಗಳು ಸಂಪೂರ್ಣ ಅದಲು ಬದಲಾಗಿದ್ದು, 2024ರ ಅಂಕಪಟ್ಟಿಗೆ ಅಂಕಗಳನ್ನು ಸೇರಿಸಲಾಗಿದೆ. ಎರಡೂ ಅಂಕಪಟ್ಟಿಯನ್ನು ತಾಳೆಹಾಕಿ ನೋಡಿದಾಗ ನಕಲಿ ಎಂಬುದು ಬಯಲಿಗೆ ಬಂದಿತು. ಮುಖ್ಯವಾಗಿ ಪರೀಕ್ಷಾ ನಿರ್ದೇಶಕರ ಬದಲಾಗಿ ಹಿರಿಯ ನಿರ್ದೇಶಕರ ಸಹಿ ಹಾಕಲಾಗಿದೆ. ಮೂಲ ದಾಖಲೆಯಲ್ಲಿ ಎರಡು ಪುಟಗಳಿದ್ದರೆ ನಕಲಿಯಲ್ಲಿ ಒಂದೇಪುಟ. ಅಭ್ಯರ್ಥಿಯ ಭಾವಚಿತ್ರದಲ್ಲೂ ವ್ಯತ್ಯಾಸವಿದೆ. ಕಟ್‌ಆಫ್ ಸ್ಕೋರ್‌ ಹಾಗೂ ಒಟ್ಟು ಅಭ್ಯರ್ಥಿ ಗಳ ಸಂಖ್ಯೆಯಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ.

ಮೂಲ ಅಂಕ ಎಷ್ಟು?
ನೀಟ್‌ನಲ್ಲಿ ದೇಶದಲ್ಲಿಯೇ 107ನೇ ರ್‍ಯಾಂಕ್‌ ಎಂದು ಬಿಂಬಿಸಿದ್ದ ವಿದ್ಯಾರ್ಥಿಯ ನಿಜವಾದ ರ್‍ಯಾಂಕ್‌ 17,62,258! ನಕಲಿ ಅಂಕಪಟ್ಟಿಯಲ್ಲಿ ಅಷ್ಟೊಂದು ಅಚ್ಚುಕಟ್ಟಾಗಿ ಅಂಕಿ ಸಂಖ್ಯೆಗಳನ್ನು ಜೋಡಿಸಲಾಗಿದೆ. ಇಷ್ಟೆಲ್ಲ ಚಾಲಾಕಿತನವನ್ನು ನಕಲಿಕೋರರು ತೋರಿಸಿದ್ದರೂ ಸ್ಕ್ಯಾನರ್‌ನಲ್ಲಿ ಅದು ತೆರೆಯುವುದೇ ಇಲ್ಲ. ಕೇಂದ್ರ ಸರಕಾರದ ಲೋಗೋದಲ್ಲಿ ಡಿಪಾರ್ಟ್‌ಮೆಂಟ್‌ ಆಫ್ ಹೈಯರ್‌ ಎಜುಕೇಶನ್‌ ಎಂಬುದರ ಬದಲು ಬರೀ ಮಿನಿಸ್ಟ್ರಿ ಆಫ್ ಎಜುಕೇಷನ್‌ ಎಂದಿದೆ.

ಅಂತರ್ಜಾಲದಲ್ಲಿ ಮೂಲಪ್ರತಿ ಲಭ್ಯ
ನೀಟ್‌ನಲ್ಲಿ ರ್‍ಯಾಂಕ್‌ ಶೇರಿಂಗ್‌ ಪದ್ಧತಿಯಿಲ್ಲ. ಒಬ್ಬರಿಗೆ ಒಂದು ರ್‍ಯಾಂಕ್‌ ಮಾತ್ರ ನೀಡಲಾಗುತ್ತದೆ. ನಕಲಿ ಅಂಕಪಟ್ಟಿ ನೀಡಿದ ವಿದ್ಯಾರ್ಥಿ ದೇಶಕ್ಕೆ 107 ನೇ ರ್‍ಯಾಂಕ್‌ ಪಡೆದಿರುವುದಾಗಿ ತಿಳಿಸಿ ದ್ದಾನೆ. ಆದರೆ ಆ ರ್‍ಯಾಂಕ್‌ ಹೊಸದಿಲ್ಲಿ ಮೂಲದ ವಿದ್ಯಾರ್ಥಿನಿಯೊಬ್ಬರು (ಅಸಲಿ) ಪಡೆದಿದ್ದಾರೆ. ಈ ವರ್ಷ ಎನ್‌ಟಿಎ ಪ್ರಕಟಿಸಿದ ಅಂಕಪಟ್ಟಿಯಲ್ಲಿ ಶೇ.50 ಕಡಿತವಾಗಿದ್ದು, 686-144 ಮೂಲ ಪ್ರತಿಯಲ್ಲಿದ್ದರೆ ನಕಲಿಯಲ್ಲಿ 720-164 ಎಂದಿದೆ. ಎನ್‌ಟಿಎಯ ಅಂಕಪಟ್ಟಿಯಲ್ಲಿ ಬಿಡುಗಡೆಯ ದಿನಾಂಕ ಮುದ್ರಿತವಾಗಿದ್ದು ಈ ವಿದ್ಯಾರ್ಥಿಯ ನಕಲಿ ಅಂಕ ಪಟ್ಟಿಯಲ್ಲಿ ಮುದ್ರಾಂಕ ದಿನಾಂಕ ನಮೂದಾಗಿಲ್ಲ. ಇನ್ನೊಂದು ತಮಾಷೆಯ ಸಂಗತಿಯೆಂದರೆ ವಿದ್ಯಾರ್ಥಿಯನ್ನು ಅಭಿನಂದಿಸಿ ಕಳುಹಿಸಿದ ಸಾಮಾಜಿಕ ಮಾಧ್ಯಮ ಸಂದೇಶದಲ್ಲೂ ಕೋಚಿಂಗ್‌ ಸಂಸ್ಥೆಯೊಂದರ ಹೆಸರನ್ನೂ ನಕಲು ಮಾಡಲಾಗಿದೆ.

ದಂಧೆಯ ಸಮಗ್ರ ತನಿಖೆಯಾಗಲಿ
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅವಕಾಶ ತಪ್ಪಬಾರದು ಮತ್ತು ಮೋಸ ಆಗಬಾರದು. ಹೀಗಾಗಿ ನಕಲಿ ಅಂಕಪಟ್ಟಿ ಸೃಷ್ಟಿಸಿ ವಿದ್ಯಾ ಸಂಸ್ಥೆಗಳಿಗೆ ಮೋಸ ಮಾಡುವ ಮತ್ತು ವೈದ್ಯಕೀಯದಂತಹ ಸೀಟುಗಳನ್ನು ಸುಲಭವಾಗಿ ಪಡೆಯಲು ಅಡ್ಡದಾರಿ ಹಿಡಿಯಲು ಯತ್ನಿಸಿದವರ ಬಗ್ಗೆ ಸಮಗ್ರ ತನಿಖೆ ಆಗಬೇಕು. ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ ಆಗಬೇಕು. ಜಿಲ್ಲಾಡಳಿತ, ರಾಜ್ಯ ಸರಕಾರ,ಜಿಲ್ಲಾ ಪೊಲೀಸ್‌ ಹಾಗೂ ನೀಟ್‌ ನಡೆಸುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್‌ಟಿಎ) ಇದನ್ನು ಗಂಭೀರವಾಗಿ ಪರಿಗಣಿಸಿ ನಕಲಿ ಅಂಕಪಟ್ಟಿ ದಂಧೆಯ ಜಾಲವನ್ನು ಬೇಧಿಸಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಉದ್ದೇಶವಾದರೂ ಏನು?
ಜಿಲ್ಲಾ ಮಟ್ಟದಲ್ಲಿ ಅಧಿಕ ಅಂಕ ಪಡೆದ ಬಗ್ಗೆ ಪ್ರಚಾರ ಗಿಟ್ಟಿಸಿಕೊಂಡು ಹೊರರಾಜ್ಯ, ದೇಶದಲ್ಲಿ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಗಿಟ್ಟಿಸಿಕೊಳ್ಳುವ ಹುನ್ನಾರ ಒಂದು ಕಾರಣವಾದರೆ, ಹಣಬಲ, ಪ್ರಭಾವದ ಮೂಲಕ ಸೀಟು ಪಡೆಯುವ ನಿಟ್ಟಿನಲ್ಲಿ ಇಂತಹ ನಕಲಿ ಸರ್ಟಿಫಿಕೆಟ್‌ಗಳನ್ನು ತಯಾರಿಸಲಾಗುತ್ತದೆ ಎನ್ನುತ್ತಾರೆ ಪರಿಣತರೊಬ್ಬರು. ನೀಟ್‌ ಸ್ಕೋರ್‌ಕಾರ್ಡ್‌ ಸುಲಭದಲ್ಲಿ ಬೇರೆಯವರು (ಅಭ್ಯರ್ಥಿ ಅಲ್ಲದವರಿಗೆ) ಡೌನ್‌ಲೋಡ್‌ ಮಾಡಿಕೊಳ್ಳುವುದು ಕಷ್ಟ. (ಪಾಸ್‌ವರ್ಡ್‌ ಆಧಾರದಲ್ಲಿಯೇ ಲಭ್ಯ) ಬೇರೆ ಯಾರಿಗೂ ತಿಳಿಯದು ಎಂಬ ಕಾರಣಕ್ಕೂ ನಕಲಿ ಮಾಡಿರಬಹುದು ಎನ್ನಲಾಗುತ್ತದೆ.

ಸಕ್ರಿಯವಾಗಿದೆ ನಕಲಿ ದಂಧೆ
ನಕಲಿ ಅಂಕಪಟ್ಟಿ ದಂಧೆ ಇನ್ನು ಕೂಡ ಸಕ್ರಿಯವಾಗಿದ್ದು, ಬೆರಳೆಣಿಕೆಯಷ್ಟು ಮಾತ್ರ ಬೆಳಕಿಗೆ ಬರುತ್ತಿದೆ. ವಿದೇಶಕ್ಕೆ ಹೋಗಬಯಸುವವರು, ಸರಕಾರಿ ಉದ್ಯೋಗ ಗಿಟ್ಟಿಸುವವರು ಹಾಗೂ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಮ್ಯಾನೇಜ್‌ ಮೆಂಟ್‌ ಸೀಟು ಗಿಟ್ಟಿಸಿಕೊಳ್ಳುವವರನ್ನು ದಂಧೆಕೋರರು ಸುಲಭದಲ್ಲಿ ಬಲೆಗೆ ಬೀಳಿಸಿಕೊಳ್ಳುತ್ತಾರೆ. ಈ ವಿದ್ಯಾರ್ಥಿಯು ಆನ್‌ಲೈನ್‌ ಕೋಚಿಂಗ್‌ಗೆ ಹೋಗುತ್ತಿದ್ದ ಎನ್ನಲಾಗಿದ್ದು, ಬೇರೆಲ್ಲಿಯೂ ತರಬೇತಿ ಪಡೆದಿಲ್ಲ ಎನ್ನಲಾಗಿದೆ. ಈ ಮಧ್ಯೆ ಈ ವಿದ್ಯಾರ್ಥಿಯ ಪೋಷಕರಿಗೆ ಇದಾವುದೂ ಅರಿವಿಗೆ ಬಂದೇ ಇಲ್ಲವೇ ಅಥವಾ ಬಂದೂ ಸುಮ್ಮನಿದ್ದರೇ ಎಂಬ ಶಂಕೆ ವ್ಯಕ್ತವಾಗಿದೆ.


Spread the love
Share:

administrator

Leave a Reply

Your email address will not be published. Required fields are marked *