ಮೈಸೂರಿನಲ್ಲಿ ಮತ್ತೊಂದು ಬಾಂಬ್ ಬೆದರಿಕೆ ಪ್ರಕರಣ – ಶಾಲಾ ಮಕ್ಕಳಿಗೆ ಭದ್ರತಾ ಕ್ರಮ ಕಠಿಣ

ಮೈಸೂರು: 2023ರಲ್ಲಿ ಹೈದರಾಬಾದ್ನಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಭುಗತಗಳ್ಳಿಯಲ್ಲಿರುವ ಜ್ಞಾನಸರೋವರ ಇಂಟರ್ನ್ಯಾಷನಲ್ ವಸತಿ ಶಾಲೆಗೆ ಬಾಂಬ್ ಬೆದರಿಕೆ ಬಂದಿದೆ. ಅತ್ಯಾಚಾರ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ. ಬಾಂಬ್ ಇಟ್ಟು ಶಾಲೆ ಸ್ಫೋಟಿಸುತ್ತೇವೆ. ಮಕ್ಕಳಿಗೆ ಹಾನಿ ಮಾಡುವ ಉದ್ದೇಶದಿಂದ ವಸತಿ ಶಾಲೆ ಸ್ಫೋಟಿಸುತ್ತೇವೆ ಎಂದು ಹೆಸರು, ಫೋನ್ ನಂಬರ್ ಉಲ್ಲೇಖಿಸಿ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ಇದರಿಂದ ಆತಂಕಗೊಂಡ ಶಾಲೆ ಆಡಳಿತ ಮಂಡಳಿ ಮೂಡಲೇ ಮೈಸೂರು ಎಸ್ಪಿಗೆ ಲಿಖಿತ ದೂರು ನೀಡಿದ್ದಾರೆ.

ಇ-ಮೇಲ್ ಮೂಲಕ ಬಾಂಬ್ ಬೆದರಿಕೆಯಿಂದ ಆತಂಕಗೊಂಡ ಶಾಲಾ ಆಡಳಿತ ಮಂಡಳಿ ಕೂಡಲೇ ಮೈಸೂರು ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದು, ಈ ದೂರಿನ ಮೇರೆಗೆ ಭುಗತಗಳ್ಳಿಯಲ್ಲಿರುವ ಜ್ಞಾನಸರೋವರ ಇಂಟರ್ನ್ಯಾಷನಲ್ ವಸತಿ ಶಾಲೆಗೆ ಮೈಸೂರು ಗ್ರಾಮಾಂತರ ಪೊಲೀಸರು, ಸ್ಪೋಟಕ ಪತ್ತೆ ದಳ ಶ್ವಾನ ದಳ ಸೇರಿ ವಿವಿಧ ತಜ್ಞರಿಂದ ಪರಿಶೀಲನೆ ಮಾಡುತ್ತಿದ್ದಾರೆ. ಎಸ್ ಪಿ ವಿಷ್ಣುವರ್ಧನ್ ಮಾರ್ಗದರ್ಶನದಲ್ಲಿ ಶೋಧ ಕಾರ್ಯ ನಡೆದಿದೆ.
ಕರ್ನಾಟಕದಲ್ಲಿ ಇತ್ತೀಚೆಗೆ ಬಾಂಬ್ ಬೆದರಿಕೆ ಸಂದೇಶ ಪ್ರಕರಣಗಳು ಹೆಚ್ಚಾಗತೊಡಗಿವೆ. ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಕೆಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದವು. ಮೊನ್ನೇ ಅಷ್ಟೇ ಹಾಸನದ ಖಾಸಗಿ ಶಾಲೆಗಳಿಗೆ ಹಾಗೂ ಮೈಸೂರು, ಉಡುಪಿಯ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿತ್ತು. ಈ ಬೆದರಿಕೆಗಳಲ್ಲಿ ಯಾವುದೇ ಕಾರಣ ತಿಳಿಸಿಲ್ಲ. ಆದ್ರೆ, ಮೈಸೂರಿನ ಜ್ಞಾನಸರೋವರ ಇಂಟರ್ನ್ಯಾಷನಲ್ ವಸತಿ ಶಾಲೆಗೆ ಹಾಕಿರುವ ಬಾಂಬ್ ಬೆದರಿಕೆಗೆ ಅತ್ಯಾಚಾರ ಪ್ರಕರಣ ಕಾರಣ ನೀಡಲಾಗಿದೆ. ಅದು 2023ರಲ್ಲಿ ಹೈದರಾಬಾದ್ ನಲ್ಲಿ ಅತ್ಯಾಚಾರ ಕೇಸ್ ಬಗ್ಗೆ ಕ್ರಮ ಕೈಗೊಳ್ಳುವಂತೆ ಇ ಮೇಲ್ ನಲ್ಲಿ ಉಲ್ಲೇಖಿಸಲಾಗಿದೆ.