Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚೀಂಕಾರ ಅರಣ್ಯದಲ್ಲಿ ಕಳ್ಳಬಟ್ಟಿ ದಂಧೆ, ಅಧಿಕಾರಿಗಳ ಸಭೆಯಲ್ಲಿ ಮಾಹಿತಿ ಮರೆಮಾಚಿದ ಆರೋಪ

Spread the love

Mudhol: ಕಳ್ಳಬಟ್ಟಿಯ ಹಾಟ್ ಸ್ಪಾಟ್ ಚೀಂಕಾರ ಅಭಯಾರಣ್ಯ

ಮುಧೋಳ: ಜಿಲ್ಲಾಡಳಿತ ಭವನದಲ್ಲಿ ಇತ್ತೀಚೆಗೆ ನಡೆದ ಕಳ್ಳಬಟ್ಟಿ ನಿರ್ಮೂಲನ ಸಭೆಯಲ್ಲಿ ಜಿಲ್ಲೆಯಲ್ಲಿ ಕಳ್ಳಬಟ್ಟಿ ತಯಾರಿಕೆ ಕೇಂದ್ರಗಳು ಕೇವಲ ಎರಡು ಕಡೆಯಲ್ಲಿ ಮಾತ್ರ ಇವೆ ಎಂಬ ಅಧಿಕಾರಿಗಳ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಅದರಲ್ಲೂ ಬೀಳಗಿ ಹಾಗೂ ಮುಧೋಳ ತಾಲೂಕಿನ ಪ್ರಜ್ಞಾವಂತರನ್ನು ಆಶ್ಚರ್ಯಗೊಳಿಸಿದೆ.

ಮುಧೋಳ-ಬೀಳಗಿ ಅವಳಿ ತಾಲೂಕಿನಲ್ಲಿ ತನ್ನ ವ್ಯಾಪ್ತಿಯನ್ನು ಹೊಂದಿರುವ ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯ ಕಳ್ಳಬಟ್ಟಿ ತಯಾರಿಕೆಗೆ ಹಾಟ್ ಸ್ಪಾಟ್ ಎಂಬುದು ಇಲ್ಲಿನ ಪ್ರತಿಯೋರ್ವ ಸಾರ್ವಜನಿಕನಿಗೂ ಗೊತ್ತು. ಆದರೆ ಅಧಿಕಾರಿಗಳ ಬಳಿ ಈ ಬಗ್ಗೆ ಮಾಹಿತಿ ಇಲ್ಲವೋ ಒಂದು ವೇಳೆ ಇದ್ದರೂ ಸಾರ್ವಜನಿಕವಾಗಿ ಒಪ್ಪಿಕೊಳ್ಳಲು ಮಜುಗರವೋ ಒಂದೂ ಅರ್ಥವಾಗುತ್ತಿಲ್ಲ.

ಸಭೆಯಲ್ಲಿ ನಡೆದದ್ದೇನು : ಜೂನ್ 5ರಂದು ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಳ್ಳಬಟ್ಟಿ ನಿರ್ಮೂಲನಾ ಸಭೆ ನಡೆಯಿತು. ಈ ವೇಳೆ ಅಬಕಾರಿ ಇಲಾಖೆ ಹಿರಿಯ ಅಧಿಕಾರಿಗಳು ಜಿಲ್ಲೆಯಲ್ಲಿ ಮುಚಖಂಡಿ ತಾಂಡಾ ಹಾಗೂ ಅಮೀನಗಡಾ ತಾಂಡಾದಲ್ಲಿ ಮಾತ್ರ ಕಳ್ಳಬಟ್ಟಿ ತಯಾರಿಕೆ ಕೇಂದ್ರಗಳಿವೆ, ಅವುಗಳ ನಿರ್ಮೂಲನೆಗೆ ಕ್ರಮ ಕೈಗೊಳ್ಳುವ ಕುರಿತು ಮಾತನಾಡಿದ್ದಾರೆ.

ಚೀಂಕಾರ ಅಭಯಾರಣ್ಯದಲ್ಲಿವೆ ಹತ್ತಾರು ಕೇಂದ್ರಗಳು : ಹಲವಾರು ದಶಕದಿಂದ ಬೀಳಗಿ ಹಾಗೂ ಮುಧೋಳ ತಾಲೂಕು ವ್ಯಾಪ್ತಿಯ ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಗ್ರಾಮಗಳ ಕೆಲವರು ಅರಣ್ಯದ ಮಧ್ಯಭಾಗದಲ್ಲಿಯೇ ಕಳ್ಳಬಟ್ಟಿ ತಯಾರಿಸುತ್ತಾರೆ. ಸರ್ಕಾರಗಳ ಕಟ್ಟುನಿಟ್ಟಿನಿಂದ ಕ್ರಮಗಳಿಂದ ಇಲ್ಲಿನ ಕಳ್ಳಬಟ್ಟಿ ತಯಾರಿಕೆ ಕೇಂದ್ರಗಳು ಕಡಿಮೆಯಾಗಿವೆ ಹೊರತು ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ. ಅಧಿಕಾರಿಗಳು ಇಲ್ಲಿನ ವಾಸ್ತವಾಂಶವನ್ನು ಸಭೆಯಲ್ಲಿ ಪ್ರಸ್ತಾಪಿಸದಿರುವುದು ಸೋಜಿಗವೇಯಾಗಿದೆ.

ಎಲ್ಲೆಲ್ಲಿ ತಯಾರಿಕೆ ಕೇಂದ್ರಗಳು : ಬೀಳಗಿ ತಾಲೂಕಿನಿಂದ ಆರಂಭಗೊಳ್ಳುವ ಯಡಹಳಗಳಿ ಚೀಂಕಾರ ರಕ್ಷಿತಾರಣ್ಯಕ್ಕೆ ಹೊಂದಿಕೊಂಡಂತೆ ಹತ್ತಾರು ಹಳ್ಳಿಗಳು ಬರುತ್ತವೆ ಮುಖ್ಯವಾಗಿ ನಾಗರಾಳ ತಾಂಡಾ, ಸಿದ್ದಾಪುರ ತಾಂಡಾ, ತೆಗ್ಗಿ, ತೆಗ್ಗಿ ತಾಂಡಾ, ಬಿಸನಾಳ, ಸುನಗ ತಾಂಡಾ, ಅರಕೇರಿ ತಾಂಡಾ ಹಾಗೂ ಮುಧೋಳ ತಾಲೂಕಿನ ಹಲಗಲಿ ವ್ಯಾಪ್ತಿಯಲ್ಲಿ ಕಳ್ಳಬಟ್ಟಿ ತಯಾರಿಕೆ ಯಥೇಚ್ಚವಾಗಿದೆ. ಕೆಲ ವರ್ಷಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳ ಕಟ್ಟುನಿಟ್ಟಿನ ಕ್ರಮಗಳಿಂದ ಅರಣ್ಯದ ಮಧ್ಯಭಾಗದಲ್ಲಿದ್ದ ಕಳ್ಳಬಟ್ಟಿ ತಯಾರಿಕೆ ಕೇಂದ್ರಗಳು ಈಗ ಅರಣ್ಯದಂಚಿನ ಹೊಲಗದ್ದೆಗಳ ಗಿಡಗಂಟಿಗಳ‌ ಮರೆಯಲ್ಲಿ ನಡೆಯುತ್ತಿದೆ.

ಹಲಗಲಿ ಅರಣ್ಯದಲ್ಲಿ ಕಳ್ಳಬಟ್ಟಿ ತಯಾರಿಕೆ ಕೇಂದ್ರ ಪತ್ತೆ : ಮುಧೋಳ ತಾಲೂಕಿನ ಹಲಗಲಿ ಗ್ರಾಮದ ವ್ಯಾಪ್ತಿಯಲ್ಲಿನ ಅರಣ್ಯದಲ್ಲಿ ಇದೂವರೆಗೂ ಕಳ್ಳಬಟ್ಟಿ ತಯಾರಿಕೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ದಟ್ಟಾರಣ್ಯದ ಮಧ್ಯಭಾಗದಲ್ಲಿ ಕಳ್ಳಬಟ್ಟಿ ತಯಾರಿಕೆ ಕೇಂದ್ರಗಳಿರುವುದು ಅಧಿಕಾರಿಗಳಿಗೆ ತಲೆಬಿಸಿಯಾಗಿದೆ. ಹಲವು ವರ್ಷಗಳಿಗೆ ಹೋಲಿಸಿದರೆ ಕಳ್ಳಬಟ್ಟಿ ತಯಾರಿಕೆ ಕೇಂದ್ರಗಳು ಕಡಿಮೆಯಾಗಿವೆ ಹೊರತು ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ.

ಸ್ಥಳೀಯ ಅಧಿಕಾರಿಗಳು‌ ಮಾಹಿತಿ ಕೊರತೆ ?: ಇನ್ನು ಮುಧೋಳ‌ ತಾಲೂಕಿನಲ್ಲಿ ಯಾವಭಾಗದಲ್ಲಿ ಕಳ್ಳಬಟ್ಟಿ ತಯಾರಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಸ್ಥಳೀಯ ಅಬಕಾರಿ ಅಧಿಕಾರಿಗಳು ಚಿಕ್ಕೂರ ತಾಂಡಾದತ್ತ ಬೊಟ್ಟು ಮಾಡುತ್ತಾರೆ. ಆದರೆ ಯಡಹಳ್ಳಿ ಚೀಂಕಾರದಲ್ಲಿನ ವ್ಯವಸ್ಥೆ ಕುರಿತು ಪ್ರಶ್ನಿಸಿದರೆ ಮೌನಕ್ಕೆ ಜಾರುತ್ತಾರೆ. ಇದೂ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ.

ಗಮನ ಸೆಳೆದಿದ್ದ ಉದಯವಾಣಿ : ಕರ್ನಾಟಕದ ಮುಕುಟಮಣಿಯಂತಿರುವ ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯದಲ್ಲಿನ ಕಳ್ಳಬಟ್ಟಿ ತಯಾರಿಕೆ ಹಾಗೂ ಅಲ್ಲಿನ ಅಪಾರ ಸಸ್ಯನಾಶದ ಬಗ್ಗೆ ಕಳೆದ ವರ್ಷ ಆ.16ರಂದು ಉದಯವಾಣಿ ವಿಸ್ತೃತ ವರದಿ ಪ್ರಕಟಿಸಿತ್ತು. ವರದಿ ಆಧರಿಸಿ ದಾಳಿ ನಡೆಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ನೂರಾರು ಲೀ. ಕಳ್ಳಬಟ್ಟಿ ಸಾರಾಯಿ ನಾಶಪಡಿಸಿ ಕಳ್ಳಬಟ್ಟಿಗೆ ಬೇಕಾಗುವ ಪರಿಕರಗಳನ್ನು ಧ್ವಂಸಗೊಳಿಸಿದ್ದರು. ಇಷ್ಟಿದ್ದರು ಅಧಿಕಾರಿಗಳಿಗೆ ಇಲ್ಲಿನ ಕಳ್ಳಬಟ್ಟಿ ತಯಾರಿಕೆ ಬಗ್ಗೆ ಮೌನವಹಸಿರುವುದನ್ನು ಗಮನಿಸಿದರೆ ಹತ್ತಾರು ಅನುಮಾನಗಳು‌ ಮೂಡಿಕೊಳ್ಳುತ್ತಿವೆ.

ಅಧಿಕಾರಿಗಳ ಸಮನ್ವಯದ ಕೊರತೆ : ಕಳ್ಳಬಟ್ಟಿ ನಿರ್ಮೂಲನೆ ಕೇವಲ ಒಂದೇ ಇಲಾಖೆಯಿಂದ ಅಸಾಧ್ಯ. ಈ ಕಾರ್ಯದಲ್ಲಿ ಮುಖ್ಯವಾಗಿ ಪೊಲೀಸ್, ಅರಣ್ಯ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ನಿರಂತರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಆದರೆ ಮುಧೋಳ ತಾಲೂಕಿಗೆ ಸಂಬಂಧಿಸಿದಂತೆ ಈ ಇಲಾಖೆಗಳ ಅಧಿಕಾರಿಗಳಲ್ಲಿ‌ ಸಮನ್ವಯತೆ ಕೊರತೆ ಎದ್ದುಕಾಣುತ್ತಿದೆ. ಇದರಿಂದಾಗಿ ಕಳ್ಳಬಟ್ಟಿ ತಯಾರಕರು ಹಾಗೂ ಮಾರಾಟಗಾರರು ರಾಜಾರೋಷವಾಗಿ ತಮ್ಮ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ.

ನಮ್ಮ ವಿಚಕ್ಷಣ ತಂಡಕ್ಕೆ ಜಿಲ್ಲೆಯ ಕಳ್ಳಬಟ್ಟಿ ತಯಾರಿಕೆ‌ ಕೇಂದ್ರದ ಮಾಹಿತಿ‌ಇರುತ್ತದೆ. ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯದಲ್ಲಿನ ಕಳ್ಳಬಟ್ಟಿ ತಯಾರಿಕೆ ಕೇಂದ್ರಗಳ ಬಗ್ಗೆ ನಮಗೆ ಮಾಹಿತಿ ಇಲ್ಲ. ಈ ಬಗ್ಗೆ ನಮ್ಮ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿ ಕಳ್ಳಬಟ್ಟಿ ತಯಾರಿಕೆ ಹತೋಟಿಗೆ ತರಲಾಗುವುದು.
– ಹನಮಂತಪ್ಪ ಅಬಕಾರಿ ಉಪ ಆಯಕ್ತ ಬಾಗಲಕೋಟೆ


Spread the love
Share:

administrator

Leave a Reply

Your email address will not be published. Required fields are marked *