ಹೆಲ್ಮೆಟ್ ಇಲ್ಲದ ಬೈಕ್ ಸವಾರನಿಗೆ ಕಟ್ಟಬೇಕಾಯಿತು ₹14 ಸಾವಿರ ದಂಡ

ಮೂಡಿಗೆರೆ:ಹೆಲ್ಮೆಟ್ ಇಲ್ಲದೇ ಬೈಕ್ ಚಾಲನೆ ಸೇರಿದಂತೆ ಸಂಚಾರಿ ನಿಯಮ ಉಲ್ಲಂಘಿಸಿದ್ದ ಆರೋಪದ ಮೇಲೆ ದ್ವಿಚಕ್ರ ವಾಹನ ಸವಾರನಿಗೆ ಇಲ್ಲಿನ ಜೆಎಂಎಫ್ ನ್ಯಾಯಾಲಯವು ₹14 ಸಾವಿರ ದಂಡ ವಿಧಿಸಿದೆ.
ಜೂನ್ 2ರಂದು ಮೂಡಿಗೆರೆ ಪೊಲೀಸ್ ಠಾಣಾಧಿಕಾರಿ ಶ್ರೀನಾಥ್ ರೆಡ್ಡಿ ಅವರು ಸಿಬ್ಬಂದಿಯೊಂದಿಗೆ ಪಟ್ಟಣದ ಎಂ.ಜಿ. ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು.
ಆ ಸಂದರ್ಭದಲ್ಲಿ ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡುತ್ತಿದ್ದ ಚಾಲಕನನ್ನು ತಡೆದು ದಾಖಲೆ ಪರಿಶೀಲಿಸಿದರು. ಬೈಕ್ ಚಾಲನೆ ಮಾಡುತ್ತಿದ್ದ ರುದ್ರೇಶ್ ನಾಯ್ಕ ಎಂಬ ವ್ಯಕ್ತಿಯು ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ ಮಾಡುತ್ತಿದ್ದದ್ದು ಅಲ್ಲದೇ ಹೊಗೆ ತಪಾಸಣೆ ಮಾಡಿಸದೇ ಇರುವುದು, ಚಾಲನಾ ಪರವಾನಗಿ ಇಲ್ಲದಿರುವುದು, ಬೈಕ್‌ಗೆ ಸೂಕ್ತ ದಾಖಲೆಗಳನ್ನು ಹೊಂದಿಲ್ಲದಿರುವುದು ಕಂಡು ಬಂದಿತ್ತು. ಬೈಕ್ ಸವಾರನ ಮೇಲೆ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿತ್ತು.
ಮೂಡಿಗೆರೆ ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶರು ಬೈಕ್ ಚಾಲಕನಿಗೆ ₹14 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.
ತಾಲ್ಲೂಕಿನ ಬಾಪುನಗರದಲ್ಲಿ ಈಚೆಗೆ ಅಪ್ರಾಪ್ತ ಬಾಲಕನಿಗೆ ಸ್ಕೂಟಿ ಚಾಲನೆ ಮಾಡಲು ನೀಡಿದ್ದ ವಾಹನ ಮಾಲೀಕರಿಗೆ ಮೂಡಿಗೆರೆ ನ್ಯಾಯಾಲಯವು ₹25 ಸಾವಿರ ದಂಡ ವಿಧಿಸಿತ್ತು. ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಈ ತೀರ್ಪುಗಳು ಎಚ್ಚರಿಕೆಯ ಗಂಟೆಯಾಗಿದ್ದು, ಚಾಲಕರು ಸುರಕ್ಷಿತ ಹಾಗೂ ಸಂಚಾರಿ ನಿಯಮ ಪಾಲಿಸುವ ಅಗತ್ಯತೆಯನ್ನು ಈ ತೀರ್ಪುಗಳು ಎತ್ತಿ ಹಿಡಿದಿವೆ ಎಂಬು ಚರ್ಚೆ ನಡೆಯುತ್ತಿದೆ.