ಜುಲೈ 1ರಿಂದ ಬಿಬಿಎಂಪಿ ಕಟ್ಟಡ ನಕ್ಷೆ ಮಂಜೂರಿಗೆ ಇ-ಖಾತಾ ಕಡ್ಡಾಯ

ಬೆಂಗಳೂರು: ಕಟ್ಟಡ ನಿರ್ಮಾಣ ಮಾಡುವವರು, ನಕ್ಷೆ ಮಂಜೂರಾತಿ ಪಡೆಯುವವರಿಗೆ ಇ-ಖಾತಾ ಕಡ್ಡಾಯಗೊಳಿಸಲಾಗಿದ್ದು, ಬಿಬಿಎಂಪಿ ಇದೀಗ ಹೊಸ ನಿಯಮ ಜಾರಿ ಮಾಡಿದೆ.
ಬೆಂಗಳೂರಿನಲ್ಲಿ ಕಟ್ಟಡ ನಕ್ಷೆ ಮಂಜೂರಾತಿಗೆ ಇ-ಖಾತಾ ಕಡ್ಡಾಯಗೊಳಿಸಲಾಗಿದೆ. ಜು. 1ರಿಂದ ಈ ನಿಯಮ ಜಾರಿಗೆ ಬರಲಿದೆ. ಬಿಬಿಎಂಪಿಗೆ ಅರ್ಜಿ ಸಲ್ಲಿಸುವಾಗ ಇ-ಖಾತಾ ಸಲ್ಲಿಸುವುದು ಅವಶ್ಯಕವಾಗಿದೆ. ಹಳೆಯ ವಿಧಾನವನ್ನು ರದ್ದು ಮಾಡಲಾಗಿದ್ದು, ಇ-ಆಸ್ತಿ ತಂತ್ರಾಂಶದೊಂದಿಗೆ ನಕ್ಷೆ ಮಂಜೂರಾತಿ ಪ್ರಕ್ರಿಯೆ ಏಕೀಕರಣಗೊಳ್ಳಲಿದೆ.
ಇದರಿಂದ ಸೇವೆಗಳು ಸರಳವಾಗುತ್ತವೆ ಮತ್ತು ಕಾಲಮಿತಿಯಲ್ಲಿ ಮಂಜೂರಾತಿ ಸಿಗುತ್ತದೆ ಎಂದು ಬಿಬಿಎಂಪಿ ತಿಳಿಸಿದ್ದು, ನಕ್ಷೆ ಮಂಜೂರಾತಿ ಪಡೆಯಬೇಕಾದರೆ ಇ-ಖಾತಾ ಕಡ್ಡಾಯವಾಗಿ ಸಲ್ಲಿಸಬೇಕಿದೆ. ಜು. 01ರಿಂದ ಈ ನಿಯಮ ಜಾರಿ ಆಗುತ್ತಾ ಇದ್ದು, ಸಾರ್ವಜನಿಕರು ಪಾಲಿಸಬೇಕಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ.
ಈ ಹಿಂದೆ ಕಟ್ಟಡ ನಕ್ಷೆಗಳ ಮಂಜೂರಾತಿ ಕೋರಿ ಸಲ್ಲಿಸುವ ಪ್ರಸ್ತಾವನೆಗಳ ಸ್ವತ್ತಿನ ದಾಖಲಾತಿಗಳನ್ನು ಪರಿಶೀಲನೆಗೆ ಪಾಲಿಕೆಯ ಕಂದಾಯ ವಿಭಾಗಕ್ಕೆ ಕಳುಹಿಸುವ ಕ್ರಮವನ್ನು ರದ್ದುಪಡಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ ಇಒಡಿಬಿ-ಒಬಿಪಿಎಸ್ ತಂತ್ರಾಂಶದ ಮೂಲಕ ಕಟ್ಟಡ ನಕ್ಷೆ ಮಂಜೂರಾತಿಯನ್ನು ಆನ್‌ಲೈನ್‌ನಲ್ಲಿ ನೀಡಲಾಗುತ್ತಿರುತ್ತದೆ.
ಪಾಲಿಕೆಯ ಕಂದಾಯ ವಿಭಾಗದಿಂದ ಇ-ಆಸ್ತಿ ತಂತ್ರಾಂಶವನ್ನು ಜಾರಿ ಮಾಡಲಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಈಗಾಗಲೇ ಇ-ಖಾತಾ ನೀಡಲಾಗುತ್ತಿರುತ್ತದೆ. ಇಂತಹ ಸ್ವತ್ತುಗಳ ದತ್ತಾಂಶವು ಇ-ಆಸ್ತಿ ತಂತ್ರಾಂಶದಲ್ಲಿ ಲಭ್ಯವಿರುತ್ತದೆ. ಪಾಲಿಕೆಯ ಕಂದಾಯ ವಿಭಾಗಕ್ಕೆ ಸ್ವತ್ತಿನ ದಾಖಲಾತಿಗಳ ಪರಿಶೀಲನೆಗಾಗಿ ಸಲ್ಲಿಸುವ ಕ್ರಮವನ್ನು ಹೊರತುಪಡಿಸಿರುವುದರಿಂದ ಪಾಲಿಕೆಯು ನೀಡುವ ಸೇವೆಗಳನ್ನು ಸರಳೀಕರಣಗೊಳಿಸಲು ಹಾಗೂ ಕಾಲಮಿತಿಯಲ್ಲಿ ನಕ್ಷೆ ಮಂಜೂರಾತಿ ನೀಡಲು ಸಹಕಾರಿಯಾಗಲಿದೆ.
ಜು. 01ರಿಂದ ಕಟ್ಟಡ ನಕ್ಷೆ ಮಂಜೂರಾತಿ ಕೋರಿ ಪಾಲಿಕೆಗೆ ಆನ್‌ಲೈನ್‌ನಲ್ಲಿ ನಂಬಿಕೆ ನಕ್ಷೆ ಒಳಗೊಂಡಂತೆ ಎಲ್ಲಾ ಕಟ್ಟಡ ಅನುಮತಿಗಳಿಗೆ ಅರ್ಜಿ ಸಲ್ಲಿಸುವಾಗ ಇ-ಖಾತಾ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ. ಸದರಿ ದಿನಾಂಕದಿಂದ ಕಟ್ಟಡ ನಕ್ಷೆಗಳ ಮಂಜೂರಾತಿ ಕೋರಿ ಸಲ್ಲಿಸುವ ಪ್ರಸ್ತಾವನೆಗಳ ಸ್ವತ್ತಿನ ದಾಖಲಾತಿಗಳನ್ನು ಪರಿಶೀಲನೆಗೆ ಪಾಲಿಕೆಯ ಕಂದಾಯ ವಿಭಾಗಕ್ಕೆ ಕಳುಹಿಸುವ ಕ್ರಮವನ್ನು ರದ್ದುಪಡಿಸಿ ಆದೇಶಿಸಿದೆ.
ಸಂಬಂಧಪಟ್ಟ ನಕ್ಷೆ ಮಂಜೂರಾತಿಯನ್ನು ನಗರ ಯೋಜನೆಯ ಸಹಾಯಕ ನಿರ್ದೇಶಕರು ಕಾಲಮಿತಿ ಒಳಗಡೆ ಧೃಢಿಕರಿಸಲಿದ್ದಾರೆ. ಸ್ವಯಂ ಅನುಮೋದನೆ ಕೊಡುವ ಅಧಿಕಾರಿಗಳ ವಿರುದ್ಧ ಕೂಡ ಕ್ರಮ ವಹಿಸಲಿದ್ದಾರೆ. ನಕ್ಷೆ ಮಂಜೂರಾತಿಗೆ ಅರ್ಜಿ ಸಲ್ಲಿಸುವವರು ಇ-ಖಾತಾವನ್ನ ಕಡ್ಡಾಯವಾಗಿ ಸಲ್ಲಿಸಬೇಕಿದೆ.