ವಿಮೆ ಕ್ಲೇಮ್ ನಿರಾಕರಣೆ ಪ್ರಕರಣ: ಗ್ರಾಹಕರಿಗೆ 3.61 ಲಕ್ಷ ರೂ. ಪಾವತಿಸಿʼ ಎಂದು ನ್ಯಾಯಾಲಯದ ತೀರ್ಪು

ಉಡುಪಿ: ಆರೋಗ್ಯ ವಿಮೆ ಕ್ಲೇಮ್ ನಿರಾಕರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಹಕ ನ್ಯಾಯಾ ಲಯ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಆದೇಶಿಸಿದೆ
ಸಿದ್ದಾಪುರದ ಏಕನಾಥ ಕಾಮತ್ ಅವರು ಉತ್ತರ ಪ್ರದೇಶದ ನೊಯ್ಡಾದಲ್ಲಿರುವ ಯುನಿವರ್ಸಲ್ ಸೊಂಪೊ ಜನರಲ್ ಇನ್ಶೂರೆನ್ಸ್ ಕಂಪೆನಿಯಿಂದ ಮೆಡಿಕಲ್ ಕ್ಲೇಮ್ ಪಾಲಿಸಿ ಹೊಂದಿದ್ದು, ವಿಮಾ ಪಾಲಿಸಿ ಚಾಲ್ತಿಯಲ್ಲಿದ್ದಾಗ್ಯೂ ಕ್ಲೇಮ್ ಅನ್ನು ನಿರಾಕರಿಸಲಾಗಿತ್ತು.
ಕಾಮತ್ ಅವರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನವೆಂಬರ್ 2023ರಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದು, ಆಸ್ಪತ್ರೆಯ ಬಿಲ್ ಮೊತ್ತ 3,61,934 ರೂ. ಅನ್ನು ಕ್ಲೇಮ್ ಮಾಡಲು 2024ರ ಮಾರ್ಚ್‌ನಲ್ಲಿ ಕಂಪೆನಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ವಿಮಾ ಕಂಪೆನಿಯು ನಿರ್ದಿಷ್ಟ ಕಾರಣ ನೀಡದೆ ಗ್ರಾಹಕರ ಕ್ಲೇಮ್ ಅನ್ನು ನಿರಾಕರಿಸಿತ್ತು.
ಇದಕ್ಕಾಗಿ ಕಂಪೆನಿಯು ಗ್ರಾಹಕರಿಗೆ ಹಿಂದೆ ಇದ್ದ ಕಾಯಿಲೆಯನ್ನು ನೆಪವಾಗಿ ಬಳಸಿಕೊಂಡಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಉಡುಪಿ ಜಿಲ್ಲಾ ಗ್ರಾಹಕ ವ್ಯಾಜ್ಯ ನ್ಯಾಯಾಲಯವು ಕಂಪೆನಿಯ ನಿರಾಧಾರ ವಾದವನ್ನು ತಳ್ಳಿಹಾಕಿದ್ದು, ಕ್ಲೇಮ್ ಮೊತ್ತ 3,61,934ರೂ.ಅನ್ನು ಕ್ಲೇಮ್ ಅವಧಿಯಿಂದ ಹಣ ಪಾವತಿ ಸುವ ವರೆಗೆ ಶೇ. 9 ಬಡ್ಡಿಯೊಂದಿಗೆ ನೀಡಲು ಹಾಗೂ ಮಾನಸಿಕ ಯಾತನೆಗೆ 10,000ರೂ. ಮತ್ತು ಕೋರ್ಟ್ ವೆಚ್ಚ 5,000 ರೂ.ಗಳನ್ನು 30 ದಿನಗಳೊಳಗೆ ನೀಡುವಂತೆ ಆದೇಶಿಸಿತು. ಗ್ರಾಹಕರ ಪರವಾಗಿ ಹಿರಿಯ ವಕೀಲ ಎಚ್.ಕೆ. ಮಲ್ಯ ವಾದಿಸಿದ್ದರು.