ನೋಟು ಪ್ರಕರಣ: ನ್ಯಾ. ಯಶವಂತ್ ವರ್ಮಾ ರಾಜೀನಾಮೆ ಸಾಧ್ಯತೆ

ನವದೆಹಲಿ: ಮನೆಯಲ್ಲಿ ಕಂತೆ ಕಂತೆ ನೋಟುಗಳು ದೊರೆತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ತು ಮಂಡಿಸಲಿರುವ ವಾಗ್ಧಂಡನೆಯಿಂದ ಪಾರಾಗಲು ನ್ಯಾ.ಯಶವಂತ್ ವರ್ಮಾಗೆ ರಾಜೀನಾಮೆಯೊಂದೇ ಆಯ್ಕೆಯಾಗಿದೆ.

ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಜಡ್ಜ್ ಗಳನ್ನು ನೇಮಕ ಮಾಡುವ ಹಾಗೂ ತೆಗೆದುಹಾಕುವ ಪ್ರಕ್ರಿಯೆ ಬಗ್ಗೆ ತಿಳಿದಿರುವ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಸಂಸತ್ತಿನಲ್ಲಿ ಸಚಿವರ ಎದುರು ತನ್ನ ಪ್ರಕರಣವನ್ನು ಮಂಡಿಸುವಾಗ ನ್ಯಾ.ವರ್ಮಾ ರಾಜೀನಾಮೆ ಘೋಷಿಸಬಹುದು.
ಅವರ ಹೇಳಿಕೆಯನ್ನೇ ಅಧಿಕೃತ ರಾಜೀನಾಮೆಯಾಗಿ ಪರಿಗಣಿಸುವ ಅವಕಾಶ ಇದೆ ಎಂದಿದ್ದಾರೆ. ಅದೇ ಸಂಸತ್ತು ಮಹಾಭಿಯೋಗ ಮಂಡಿಸಿ, ಅವರನ್ನು ವಜಾಗೊಳಿಸಿದರೆ ಪಿಂಚಣಿ ಸೇರಿ ಇತರೆ ಸವಲತ್ತುಗಳಿಂದ ಅವರು ವಂಚಿತರಾಗುತ್ತಾರೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.