ಬಕ್ರೀದ್ ಮೇಕೆ ಬಲಿಯ ವಿರೋಧವಾಗಿ ತನ್ನನ್ನೇ ಕತ್ತು ಸೀಳಿ ಬಲಿ ನೀಡಿದ ಯುವಕ

ಉತ್ತರ ಪ್ರದೇಶ: ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬಕ್ರೀದ್ ಹಬ್ಬದಂದು ವ್ಯಕ್ತಿಯೊಬ್ಬರು ಬಲಿದಾನವಾಗಿ ಕತ್ತು ಕೊಯ್ದುಕೊಂಡು ಪ್ರಾಣತ್ಯಾಗ ಮಾಡಿದ್ದಾರೆ ಎಂದು ಹೇಳಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಇಶ್ ಮೊಹಮ್ಮದ್ ಎಂಬ ವ್ಯಕ್ತಿ ಶನಿವಾರ ಬೆಳಿಗ್ಗೆ ಜಿಲ್ಲೆಯ ಉಧೋಪುರ ಗ್ರಾಮದಲ್ಲಿರುವ ತನ್ನ ನಿವಾಸದಲ್ಲಿ ‘ನಮಾಜ್’ (ಪ್ರಾರ್ಥನೆ) ಸಲ್ಲಿಸಿದ ನಂತರ ತನ್ನ ಕತ್ತು ಸೀಳಿಕೊಂಡಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಗೋರಖ್ಪುರದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಸಂಜೆ ವೇಳೆಗೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
60 ವರ್ಷದ ಮೊಹಮ್ಮದ್ ತನ್ನ ಕತ್ತನ್ನು ಸೀಳಿಕೊಳ್ಳುವ ಮೊದಲು ಒಂದು ಪತ್ರವನ್ನು ಬರೆದಿದ್ದಾರೆ. ಅದರಲ್ಲಿ ‘ಜನರು ಮೇಕೆಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ನಂತರ ಅವುಗಳನ್ನು ಬಲಿ ನೀಡುತ್ತಾರೆ. ಅವುಗಳು ಸಹ ನಮ್ಮಂತೆ ಜೀವಿಗಳು’ ಎಂದು ಬರೆದಿದ್ದಾರೆ.
‘ಅಲ್ಲಾಹನ ಹೆಸರಿನಲ್ಲಿ ನನ್ನನ್ನು ತ್ಯಾಗ ಮಾಡುತ್ತಿದ್ದೇನೆ. ನನ್ನನ್ನು ಯಾರೂ ಕೊಂದಿಲ್ಲ. ನನ್ನ ಸಾವಿನ ಬಗ್ಗೆ ಭಯಪಡಬೇಡಿ’ ಎಂದೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘ಮೊಹಮ್ಮದ್ ಅವರು ಧರ್ಮನಿಷ್ಠ ಮುಸ್ಲಿಂ ಆಗಿದ್ದರು. ಅಂಬೇಡ್ಕರ್ ನಗರ ಜಿಲ್ಲೆಯ ಕಿಚೌಚಾ ಶರೀಫ್ನಲ್ಲಿರುವ ಸುಲ್ತಾನ್ ಸೈಯದ್ ಮಕ್ದೂಮ್ ಅಶ್ರಫ್ ಷಾ ಅವರ ಮಜಾರ್ (ಸಮಾಧಿ)ಗೆ ಆಗಾಗ ಭೇಟಿ ನೀಡುತ್ತಿದ್ದರು’ ಎಂದು ಅವರ ಪತ್ನಿ ಹಜ್ರಾ ಖಾತೂನ್ ಹೇಳಿದ್ದಾರೆ.
‘ಬಕ್ರೀದ್ ಹಬ್ಬದ ಒಂದು ದಿನ ಮೊದಲು(ಶುಕ್ರವಾರ) ಅಲ್ಲಿಗೆ ಹೋಗಿ ಹಿಂತಿರುಗಿದ್ದರು. ಶನಿವಾರ ಬೆಳಿಗ್ಗೆ ಪ್ರಾರ್ಥನೆ ಸಲ್ಲಿಸಲು ಹತ್ತಿರದ ಮಸೀದಿಗೆ ಹೋಗಿದ್ದರು. ಸ್ವಲ್ಪಸಮಯದ ನಂತರ ನರಳಾಟ ಕೇಳಿಸಿತು. ನಾನು ಅಲ್ಲಿಗೆ ತಲುಪಿದಾಗ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕುರಿ ಮಾಂಸವನ್ನು ಕತ್ತರಿಸಲು ಬಳಸಿದ ಚಾಕು ಅವರ ಪಕ್ಕದಲ್ಲಿತ್ತು’ ಎಂದು ಅವರು ಹೇಳಿದ್ದಾರೆ.
ಅತಿಯಾದ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
