ಡೆಂಗ್ಯೂ ಮತ್ತು ಇತರ ರೋಗಗಳ ವಿರುದ್ಧ ಮುನ್ನೆಚ್ಚರಿಕೆ ಕ್ರಮಗಳ ಅಗತ್ಯತೆ – ಡಾ. ಪ್ರಶಾಂತ್ ಭಟ್

ಉಡುಪಿ: ಅವಧಿಗೂ ಮುನ್ನವೇ ಮಳೆಗಾಲ ಆರಂಭವಾಗಿದ್ದರಿಂದ ಸೊಳ್ಳೆಗಳ ಉತ್ಪತ್ತಿ ತಾಣಗಳ ನಿರ್ಮೂಲನೆ ಕೆಲಸ ನಡೆದಿರಲಿಲ್ಲ. ಹೀಗಾಗಿ ವಿವಿಧೆಡೆ ಮಳೆ ನೀರು ನಿಲ್ಲುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ಮುಖ್ಯವಾಗಿ ನಿರ್ಮಾಣ ಹಂತದ ಕಟ್ಟಡಗಳು ಹಾಗೂ ತ್ಯಾಜ್ಯ ಎಸೆಯುವ ಸ್ಥಳಗಳಲ್ಲಿ ನೀರು ನಿಲ್ಲುವ ಪರಿಣಾಮ ಇದುವೇ ಸೊಳ್ಳೆಗಳ ಉತ್ಪತ್ತಿ ತಾಣವಾಗುತ್ತಿದೆ.
ಈ ನಡುವೆ ಮಳೆ ಬಿಸಿಲಿನ ಆಟ ಸಾಗಿದ್ದು ಆತಂಕ ಎದುರಾಗಿದೆ.

ಜಿಲ್ಲೆಯಲ್ಲಿ ಸದ್ಯಕ್ಕೆ ಮಲೇರಿಯಾ ನಿಯಂತ್ರಣದಲ್ಲಿದೆಯಾದರೂ ಡೆಂಗ್ಯೂ ಹಾವಳಿ ತಪ್ಪಿಲ್ಲ. ಜತೆಗೆ ವಾಂತಿ- ಬೇಧಿ, ಇಲಿಜ್ವರ ಮೊದಲಾದ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಕಾಣಿಸಿ ಕೊಳ್ಳುವ ಘಟನೆಗಳು ಪ್ರತೀ ಮಳೆಗಾಲದಲ್ಲಿಯೂ ಕಾಣಸಿಗುತ್ತವೆ. ಈಗಾಗಲೇ ಮೇ ಅಂತ್ಯದಲ್ಲಿ ವಿಪರೀತ ಮಳೆ ಸುರಿದು ವಿವಿಧೆಡೆ ನೀರು ಶೇಖರಣೆ ಯಾಗಿದ್ದು, ಸಮಸ್ಯೆಗೆ ಕಾರಣವಾಗುತ್ತಿದೆ. ಈಗಾಗಲೇ ಜಿಲ್ಲಾ ಆರೋಗ್ಯ ಇಲಾಖೆ ಮೂಲಕ ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಕಾರ್ಯ ನಡೆಸಲಾಗುತ್ತಿದೆಯಾದರೂ ದೊಡ್ಡ ಮಟ್ಟದ ಫಲ ನೀಡುತ್ತಿಲ್ಲ.
ವಲಸೆ ಕಾರ್ಮಿಕರಿಗೆ ಸೂಚನೆ
ಅನ್ಯ ರಾಜ್ಯ ಹಾಗೂ ಜಿಲ್ಲೆಯಿಂದ ಕೆಲಸಕ್ಕೆಂದು ಆಗಮಿಸುವ ಕಾರ್ಮಿಕರಿಗೆ ಸರಿಯಾದ ವಸತಿ ಇಲ್ಲದೆ ಇರುವುದರಿಂದ ಅವರಿಗೆ ರೋಗ ಹರಡುವ ಮತ್ತು ಅವರಿಂದ ಇತರರಿಗೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಅವರನ್ನು ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಒಳಪಡಿಸುವಂತೆ ಆಯಾ ಕಟ್ಟಡದ ಮಾಲಕರಿಗೆ ಜಿಲ್ಲಾಡಳಿತ ಈಗಾಗಲೇ ಸೂಚನೆ ನೀಡಿದೆ. ಆದರೆ ಇದು
ಪಾಲನೆಯಾಗುತ್ತಿರುವುದು ಅಷ್ಟಕಷ್ಟೇ. ಈ ಹಿಂದಿನಿಂದಲೂ ವಲಸೆ ಕಾರ್ಮಿಕರ ಮೂಲಕವೇ ಸಾಂಕ್ರಾಮಿಕ ರೋಗಗಳು ಜಿಲ್ಲೆಯಲ್ಲಿ ಹರಡುತ್ತಿದ್ದರೂ ಇದನ್ನು ಪರಿಪೂರ್ಣವಾಗಿ ತಡೆಗಟ್ಟಲು ಇನ್ನೂ ಸಾಧ್ಯವಾಗಿಲ್ಲ.
ಎಳನೀರು ಚಿಪ್ಪು ರಾಶಿ
ಸಣ್ಣಪುಟ್ಟ ಎಳನೀರು ಅಂಗಡಿಗಳ ಎದುರು ಅದರ ಚಿಪ್ಪನ್ನು ತಿಂಗಳಾನುಗಟ್ಟಲೆ ರಾಶಿ ಇರಿಸುವುದು ಹಾಗೂ ಎಲ್ಲೆಂದರಲ್ಲಿ
ಎಸೆಯ ಲಾಗುತ್ತಿರುವುದು ಕೂಡ ಸೊಳ್ಳೆಗಳ ಉಗಮಕ್ಕೆ ಕಾರಣವಾಗುತ್ತಿದೆ. ಉಡುಪಿ ನಗರ ಭಾಗದ ಹಲವೆಡೆ ಅಂಗಡಿಗಳ ಎದುರು ಎಳನೀರು ಚಿಪ್ಪು ರಾಶಿ ಕಾಣಸಿಗುತ್ತಿದ್ದು, ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಕಾಟ ತಪ್ಪುತ್ತಿಲ್ಲ. ಜತೆಗೆ ಕೆಲವೊಂದು ಖಾಲಿ ನಿವೇಶನಗಳ ಎದುರು, ಗ್ಯಾರೇಜ್ಗಳ ಮುಂಭಾಗದಲ್ಲಿ ಇರಿಸಲಾಗಿರುವ ಟಯರ್ಗಳ ಒಳಭಾಗದಲ್ಲಿ ನೀರು ನಿಲ್ಲುವ ಕಾರಣ ಇವುಗಳೂ ಸಮಸ್ಯೆ ತಂದೊಡ್ಡುವ ಸಾಧ್ಯತೆಗಳಿವೆ. ನಿರ್ದಿಷ್ಟ ಕಾಲಮಿತಿಯೊಳಗೆ ಪೂರ್ಣಗೊಳ್ಳದ ಕಟ್ಟಡಗಳು, ತೋಡುಗಳಲ್ಲಿ ಕೂಡ ನೀರು ಶೇಖರಣೆಯಾಗಿದ್ದು, ಅಪಾಯ ಆಹ್ವಾನಿಸುವಂತಿದೆ.
ಮುನ್ನೆಚ್ಚರಿಕೆ ಕ್ರಮಗಳು
1)ಮನೆ, ಕಚೇರಿಯ ಸುತ್ತಮುತ್ತ ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳುವುದು.
2)ಎಲ್ಲೆಂದರಲ್ಲಿ ಇರುವ ಎಳನೀರು ಚಿಪ್ಪು , ಟಯರ್ಗಳನ್ನು ತೆರವುಗೊಳಿಸುವುದು.
3)ರಬ್ಬರ್ ತೋಟ ಹಾಗೂ ಅನನಾಸು ತೋಟಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಗಳಿದ್ದು, ಈ ಸ್ಥಳಗಳಿಗೆ ಹೋಗುವವರು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು.
4)ಸೊಳ್ಳೆ ನಿಯಂತ್ರಣ ಪರದೆ, ಬೇವಿನ ಎಣ್ಣೆಯನ್ನು ಮೈಗೆ ಹಚ್ಚುವುದರಿಂದ ತಕ್ಕ ಮಟ್ಟಿಗೆ ಕಡಿತದಿಂದ ಪಾರಾಗಬಹುದು.
5)ರೋಗ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಭೇಟಿಯಾಗುವುದು.
ಸ್ವಚ್ಛತೆ ಕಾಪಾಡಿ
ಜಿಲ್ಲೆಯಲ್ಲಿ ಈಗಾಗಲೇ ಕಂಡುಬಂದಿರುವ ಡೆಂಗ್ಯೂ ಪ್ರಕರಣಗಳಲ್ಲಿ ಶೇ.50ರಿಂದ 60ರಷ್ಟು ಪ್ರಕರಣಗಳು ಹೊರಜಿಲ್ಲೆಯವು. ವಲಸೆ ಕಾರ್ಮಿಕರು ಹಾಗೂ ಇತರ ಊರುಗಳಿಗೆ ಹೋಗಿ ಬಂದವರು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಕಡ್ಡಾಯ. ಈ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರೆ ಮತ್ತಷ್ಟ ಹರಡುವ ಭೀತಿಯೂ ಇದೆ. ಜತೆಗೆ ಪ್ರತಿಯೊಬ್ಬರೂ ಸ್ವತ್ಛತೆಯತ್ತ ಗಮನ ಹರಿಸಬೇಕಾದುದು ಅತೀ ಅಗತ್ಯ.
ಡಾ| ಪ್ರಶಾಂತ್ ಭಟ್,
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ