ಕಾಲ್ತುಳಿತ ಪ್ರಕರಣದಲ್ಲಿ ಆರ್ಸಿಬಿ ವಿರುದ್ಧ ಮತ್ತೆರಡು ಎಫ್ಐಆರ್: ನಾಲ್ವರು ಬಂಧನ

ಬೆಂಗಳೂರು: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುತಿಳಿತದಲ್ಲಿ 11 ಮಂದಿ ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಂಭ್ರಮಾಚರಣೆಗೆ ಸೂತಕ ಅಂಟಿಕೊಂಡಿದೆ. ಈ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮತ್ತೆ ಎರಡು ಪ್ರಕರಣ ದಾಖಲಾಗಿವೆ. ಕಾಲ್ತುಳಿತದಲ್ಲಿ ಗಾಯಗೊಂಡ ರೋಲನ್ ಗೊಮೆಸ್ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಆರ್ಸಿಬಿ ಫ್ರಾಂಚೈಸಿ, ಕೆಎಸ್ಸಿಎ ಮತ್ತು ಡಿಎನ್ಎ ಕಂಪನಿ ವಿರುದ್ಧ ಬಿಎನ್ಎಸ್ ಕಾಯ್ದೆ 2023 (U/s-125(a)) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಜಾಲತಾಣದಲ್ಲಿ ಆರ್ಸಿಬಿ ಪೋಸ್ಟ್ ನೋಡಿ ನನ್ನ ಗೆಳೆಯರ ಜೊತೆ ಸಂಭ್ರಮಾಚರಣೆ ವೀಕ್ಷಿಸಲು ಬಂದಿದ್ದೆ. ತೆರದ ಬಸ್ ಮೂಲಕ ಮೆರಬಣಿಗೆ ಇದೆ ಎಂದು ತಿಳಿಸಲಾಗಿತ್ತು. ಗೇಟ್ ನಂಬರ್ 17ರಲ್ಲಿ ನಾನು ಹೋಗುವಾಗ ನೂಕುನುಗ್ಗಲು ಆಯ್ತು. ಈ ವೇಳೆ ನನ್ನ ತೋಳಿಗೆ ಪೆಟ್ಟಾಗಿದೆ ಎಂದು ಗಾಯಾಳು ರೋಲನ್ ಗೊಮೆಸ್ ದೂರು ನೀಡಿದ್ದಾರೆ.
ಪ್ರಕರಣ ಸಂಬಂಧ ನಾಲ್ವರ ಬಂಧನ
ಕಬ್ಬನ್ ಪಾರ್ಕ್ ಇನ್ಸ್ಪೆಕ್ಟರ್ ಗಿರೀಶ್ ದೂರು ನೀಡಿದ್ದ ಹಿನ್ನೆಲೆಯಲ್ಲಿ ಆರ್ಸಿಬಿ ವಿರುದ್ಧ ಈಗಾಗಲೆ ಒಂದು ಎಫ್ಐಆರ್ ದಾಖಲಾಗಿತ್ತು. ಈಗ, ಗಾಯಾಳು ನೀಡಿದ ದೂರಿನ ಆಧಾರದ ಮೇಲೆ ಮತ್ತೇರಡು ಎಫ್ಐಆರ್ ದಾಖಲಾಗಿವೆ.
ಕಬ್ಬನ್ ಪಾರ್ಕ್ ಇನ್ಸ್ಪೆಕ್ಟರ್ ಗಿರೀಶ್ ದೂರು ನೀಡಿದ್ದ ದೂರಿನ ಆಧಾರದ ಮೇಲೆ ಬಿಎನ್ಎಸ್ ಸೆಕ್ಷನ್ 105, 115, 118ರಡಿ ಮೊಕದ್ದಮೆ ದಾಖಲಾಗಿದೆ. ಆರ್ಸಿಬಿ ಮ್ಯಾನೇಜ್ಮೆಂಟ್ A-1 ಆಗಿದ್ದರೆ, ಕಾರ್ಯಕ್ರಮ ಆಯೋಜನೆ ಮಾಡಿದ್ದ DNA ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ A-2 ಆಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ನ A3 ಯನ್ನಾಗಿ ಮಾಡಿ ಎಫ್ಐಆರ್ ದಾಖಲಿಸಲಾಗಿದೆ. ಆರ್ಸಿಬಿ ಮಾರ್ಕೆಟಿಂಗ್ ಮುಖಸ್ಥ ಸೇರಿ ನಾಲ್ವರನ್ನು ಬಂಧಿಸಲಾಗಿದೆ.